ರಾಜಕೀಯ ಪ್ರೇರಿತ ಕ್ರಿಕೆಟ್ ಟೂರ್ನಮೆಂಟ್ ಗಳನ್ನು ನಿರ್ಬಂಧಿಸಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಆದೇಶ ಹೊರಡಿಸಿದ್ದಾರೆ.
ಫೆ.17 ರಂದು ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಗ್ರಾಮದಲ್ಲಿ ಕ್ರಿಕೆಟ್ ಪಂದ್ಯಾವಳಿ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆಯಾಗಿ ಭರತ್ ಮತ್ತು ಪ್ರತೀಕ್ ಎಂಬ ಇಬ್ಬರು ಅಮಾಯಕ ಯುವಕರ ಕೊಲೆಗೆ ಕಾರಣವಾಗಿತ್ತು. ಈ ಹಿನ್ನೆಲೆ ರಾಜಕೀಯ ಪ್ರೇರಿತ ಕ್ರಿಕೆಟ್ ಟೂರ್ನಮೆಂಟ್ ಗಳನ್ನು ನಿರ್ಬಂಧಿಸಲಾಗಿದೆ.
2023ರ ವಿಧಾನಸಭಾ ಚುನಾವಣೆ ಮುಗಿಯುವವರೆಗೂ ರಾಜಕೀಯ ಪ್ರೇರಿತ ಕ್ರಿಕೆಟ್ ಟೂರ್ನಮೆಂಟ್ ಗಳನ್ನು ನಡೆಸದಂತೆ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಹಾಗೂ ಒಂದು ವೇಳೆ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜನೆ ಮಾಡಿದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆದೇಶದಲ್ಲಿ ಸೂಚಿಸಿದ್ದಾರೆ.
ವಿಧಾನಸಭಾ ಚುನಾವಣೆ ಮುಗಿಯುವವರೆಗೂ ಸರ್ಕಾರ ನಡೆಸುವ ಕ್ರೀಡೆಗಳನ್ನು ಹೊರತು ಪಡಿಸಿ ಯಾವುದೇ ಖಾಸಗಿ ವ್ಯಕ್ತಿ, ಸಂಸ್ಥೆಗಳು ಆಯೋಜನೆ ಮಾಡುವ ಯಾವುದೇ ಕ್ರೀಡೆಗಳಿಗೂ ಅವಕಾಶ ನೀಡದಂತೆ ಮಲ್ಲಿಕಾರ್ಜುನ ಬಾಲದಂಡಿ ಅವರು ಮೌಕಿಕ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಹಂತದ ಪೊಲೀಸ್ ಅಧಿಕಾರಿಗಳಿಗೆ ಆದೇಶದ ಮೂಲಕ ತಿಳಿಸಿದ್ದಾರೆ.