ಸ್ವಾಭಿಮಾನಿ ಶಿಕ್ಷಕರು ಈ ಬಾರಿ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಅತಿ ಹೆಚ್ಚು ಮತ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಜೆಡಿಎಸ್ ಪಕ್ಷದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಎಂಎಲ್‌ಸಿ ಆಕಾಂಕ್ಷಿ ಎ.ಪಿ.ರಂಗನಾಥ್ ತಿಳಿಸಿದರು.
ನಗರದ ಐತಿಹಾಸಿಕ ಕಟ್ಟೆ ಅಶ್ವತ್ಥ ಗಣೇಶ ದೇವಾಲಯದಲ್ಲಿ ಜೆಡಿಎಸ್‌ನ ಎಂಎಲ್‌ಸಿ ಆಕಾಂಕ್ಷಿಯಾಗಿರುವ ಎ.ಪಿ.ರಂಗನಾಥ್ ಅವರು ಜೆಡಿಎಸ್ ಮುಖಂಡರು, ಬೆಂಬಲಿತ ಶಿಕ್ಷಕರೊಂದಿಗೆ ಆಗಮಿಸಿ ಶುಕ್ರವಾರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರಿ ಸ್ವಾಮ್ಯದಲ್ಲಿರುವ ಅನುದಾನಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಪಿಂಚಣಿ ಸೌಲಭ್ಯವಿಲ್ಲ. ಅವರ ಪರವಾಗಿ ವಿಧಾನ ಮಂಡಲದಲ್ಲಿ ಗಟ್ಟಿಯಾಗಿ ಧ್ವನಿ ಎತ್ತುವ ಅಭ್ಯರ್ಥಿಯ ಅಗತ್ಯವಿದೆ. ಶಿಕ್ಷಕರ ಪ್ರತಿಯೊಂದು ಸಮಸ್ಯೆಗಳಿಗೆ ಸ್ಪಂದಿಸುವೆ ಹೀಗಾಗಿ ಈ ಬಾರಿ ಹೆಚ್ಚಿನ ಮತಗಳನ್ನು ನೀಡಿ ಜಯಶೀಲರನ್ನಾಗಿ ಮಾಡಿ ಎಂದು ಕೊರಿದರು.
ಜೆಡಿಎಸ್ ಮುಖಂಡರಾದ ಸತ್ಯನಾರಾಯಣ, ಕೆಂಪರಾಜು ಮಾತನಾಡಿ ಎ.ಪಿ ರಂಗನಾಥ ಅವರು ವೃತ್ತಿಯಲ್ಲಿ ವಕೀಲರಾಗಿದ್ದು, ಸುಶಿಕ್ಷಿತರಾಗಿದ್ದಾರೆ. ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿರುವುದರಿಂದ ಇವರು ಅತ್ಯಂತ ಹೆಚ್ಚು ಸೂಕ್ತವಾಗಿದ್ದಾರೆ. ವಿಧಾನಪರಿಷತ್ ಪ್ರತಿನಿಧಿಸುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾರೆ. ಭ್ರಷ್ಟಾಚಾರ ರಹಿತವಾಗಿ ಶಿಕ್ಷಕರು ಮತ್ತು ಶಿಕ್ಷಣ ವ್ಯವಸ್ಥೆಗೆ ಹೋರಾಡುವ ಮನೋಭಾವ ಹೊಂದಿರುವ ಅಭ್ಯರ್ಥಿಗೆ ಈ ಬಾರಿ ಅವಕಾಶ ಮಾಡಿಕೊಡಿ ಎಂದರು. ಜೆಡಿಎಸ್ ನಾಯಕರಾದ ಹೆಚ್.ಡಿ ದೇವೇಗೌಡ ಮತ್ತು ಹೆಚ್.ಡಿ ಕುಮಾರಸ್ವಾಮಿಯವರ ಮಾರ್ಗದರ್ಶನದಲ್ಲಿ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ನಗರದ ದೇವಲಮಹರ್ಷಿ ಶಾಲೆ, ಜಾಲಪ್ಪ ಕಾಲೇಜು, ಜಿ.ಕೆ ಇಂಗ್ಲಿಷ್ ಮಾಧ್ಯಮ ಶಾಲೆ, ಅರಳುಮಲ್ಲಿಗೆ ಸರ್ಕಾರಿ ಪ್ರೌಢಶಾಲೆ, ನಿವೇದಿತಾ ಆಂಗ್ಲ ಶಾಲೆ ಸೇರಿದಂತೆ ವಿವಿಧ ಶಾಲಾ – ಕಾಲೇಜುಗಳಿಗೆ ತೆರಳಿ ಶಿಕ್ಷಕರ ಮತಯಾಚನೆ ಮಾಡಿದರು.