ರಾಜಕೀಯ ಪಕ್ಷಗಳಿಂದ ಅಭ್ಯರ್ಥಿಗಳ ಪಟ್ಟಿ ಹಂತ ಹಂತವಾಗಿ ಬಿಡುಗಡೆಯಾಗುತ್ತಿದ್ದಂತೆ ಅಭ್ಯರ್ಥಿಗಳ ಚುನಾವಣಾ ಖರ್ಚು – ವೆಚ್ಚಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣು ನೆಟ್ಟಿದೆ.
ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಕಠಿಣವಾಗಿ ಪರಿಶೀಲನೆ ಮಾಡುತ್ತಿರುವ ಆಯೋಗ ಅಭ್ಯರ್ಥಿಗಳಿಗೆ ಖಡಕ್ ಎಚ್ಚರಿಕೆ ನೀಡಿದೆ. ಚುನಾವಣಾ ಆಯೋಗ ವೀಕ್ಷಕ ಅತುಲ್ ಪಾಂಡೆ ಕ್ಷೇತ್ರದ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು, ಚುನಾವಣಾ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು.
ತಾಲ್ಲೂಕಿನ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚೆಕ್ ಪೋಸ್ಟ್ ಗಳು, ಫ್ಲೈಯಿಂಗ್ ಸ್ಕ್ವಾಡ್ ಗಳ ಕಾರ್ಯ ನಿರ್ವಹಣೆ ಕುರಿತು ಮಾಹಿತಿ ಪಡೆದರು. ಬಳಿಕ ಚೆಕ್ ಪೋಸ್ಟ್ ಗಳ ಬಳಿಗೆ ತೆರಳಿ ಖುದ್ದು ತಪಾಸಣೆ ನಡೆಸಿದರು. ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿಧಾನಸಭಾ ಚುನಾವಣೆ ಶಾಂತಿಯುತ ಮತ್ತು ನ್ಯಾಯ ಸಮ್ಮತವಾಗಿ ನಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಪ್ರತಿಯೊಬ್ಬ ಅಭ್ಯರ್ಥಿಗಳ ವೆಚ್ಚಗಳ ಮೇಲೆ ಹದ್ದಿನ ಕಣ್ಣಿಡಲು ನೀತಿ ಸಂಹಿತೆ ಜಾರಿ ತಂಡಗಳಿಗೆ ಸೂಚಿಸಿದರು. ಈ ವೇಳೆ ಚುನಾವಣಾ ಸಿದ್ಧತೆ, ರಾಜಕೀಯ ಪಕ್ಷಗಳ ಮತ್ತು ಅಭ್ಯರ್ಥಿಗಳ ವೆಚ್ಚದ ಲೆಕ್ಕ ಪರಿಶೀಲನೆ ಸಂಬಂಧವಾಗಿ ತಹಶೀಲ್ದಾರ್ ಹಾಗೂ ಸಹಾಯಕ ಚುನಾವಣಾಧಿಕಾರಿ ಮೋಹನಕುಮಾರಿ ಮಾಹಿತಿ ನೀಡಿದರು.
36 ಪ್ರಕರಣ, 28 ಲಕ್ಷ ಹಣ ಜಪ್ತಿ:
ನೀತಿ ಸಂಹಿತೆ ಜಾರಿಯಾದ ದಿನದಿಂದ ಇಲ್ಲಿಯವರೆಗೆ ತಾಲೂಕಿನಲ್ಲಿ ಒಟ್ಟು 36 ಪ್ರಕರಣಗಳು ದಾಖಲಾಗಿದೆ. ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಒಟ್ಟು ರೂ.327500. ಮತ್ತು ಚುನಾವಣಾ ಸಾಮಗ್ರಿ, ಮದ್ಯ ಇತ್ಯಾದಿಗಳ ಒಟ್ಟು ರೂ.24,80,749. ಮೊತ್ತದ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ ಎಂದು ಎಂ.ಸಿ.ಸಿ ನೋಡಲ್ ಅಧಿಕಾರಿ ಶ್ರೀನಾಥಗೌಡ ಮಾಹಿತಿ ನೀಡಿದರು.