ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಒಳಚರಂಡಿ ನೀರು, ಕೈಗಾರಿಕಾ ಪ್ರದೇಶದ ಕಾರ್ಖಾನೆಗಳ ರಾಸಾಯನಿಕ ಯುಕ್ತ ತ್ಯಾಜ್ಯ ನೀರು ಸೇರಿದಂತೆ ಇತರೆ ತ್ಯಾಜ್ಯ ನೇರವಾಗಿ ಅರ್ಕಾವತಿ ನದಿ ಪಾತ್ರದ ಕೆರೆಗಳ ಒಡಲು ಸೇರಿ ಸಂಪೂರ್ಣ ಕಲುಷಿತಗೊಂಡಿವೆ.
ಈ ಕೆರೆಗಳ ನೀರನ್ನು ಬಳಿಸಿದ ಜನ ರೋಗಪೀಡಿತರಾಗುತ್ತಿದ್ದಾರೆ. ಪ್ರಾಣಿ ಪಕ್ಷಿಗಳು, ಜಲಚರಗಳು ಸಾವನ್ನಪ್ಪುತ್ತಿವೆ. ಆದ್ದರಿಂದ ಕೆರೆ ಸಂರಕ್ಷಣೆಗೆ, ಕೆರೆ ಶುದ್ಧೀಕರಣಕ್ಕೆ ಈಗಾಗಲೇ ಹಲವು ಮನವಿ, ಹೋರಾಟ, ಪ್ರತಿಭಟನೆ ಸೇರಿದಂತೆ ನಾನಾ ಪ್ರಯತ್ನ ಮಾಡಿದರೂ ಸಮಸ್ಯೆ ಬಗೆಹರಿಯಲಿಲ್ಲ. ಆದರೆ ಪಟ್ಟು ಬಿಡದೇ ಕೆರೆ ಶುದ್ದೀಕರಣ, ಸಂರಕ್ಷಣೆಗೆ ಹೋರಾಟ ಮುಂದುವರಿಸಿದ ಕೆರೆ ಹೋರಾಟ ಸಮಿತಿ ಮುಖಂಡರು, ಗ್ರಾಮಸ್ಥರು.
ಕೆರೆ ಉಳಿವಿಗಾಗಿ 2023ರ ಸಾರ್ವತ್ರಿಕ ಚುನಾವಣೆ ಬಹಿಷ್ಕರಿಸಲು ತೀರ್ಮಾನಿಸಿರುವ ಗ್ರಾಮಸ್ಥರು, ಈ ಹಿನ್ನೆಲೆ ಈಗಾಗಲೇ ಮತದಾನ ಬಹಿಷ್ಕಾರಕ್ಕೆ ಒಪ್ಪಿ ಸಹಿ ಅಕ್ಕಪಕ್ಕದ ಊರಿನ ಗ್ರಾಮಸ್ಥರು ಸಹಿ ಸಂಗ್ರಹ ಕೂಡ ಮಾಡಲಾಗಿದೆ. ಈ ಸಹಿ ಸಂಗ್ರಹ ಪತ್ರವನ್ನು ಚುನಾವಣಾಧಿಕಾರಿಗೆ ತಲುಪಿಸುವುದೊಂದೆ ಬಾಕಿ.
ಕೆರೆ ಉಳಿವಿಗಾಗಿ ಮತದಾನ ಬಹಿಷ್ಕಾರಿಸುತ್ತಿರುವ ದೊಡ್ಡತುಮಕೂರು ಸುತ್ತಮುತ್ತಲಿನ ಗ್ರಾಮಸ್ಥರು ಏ.28 ರಂದು ಮೆರವಣಿಗೆಯಲ್ಲಿ ತೆರಳಿ ಚುನಾವಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಕುರಿತಂತೆ ಅನುಮತಿ ನೀಡುವಂತೆ ಅರ್ಜಿ ನೀಡಲು ಆಗಮಿಸಿದ್ದ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಮಂಗಳವಾರ ಸಂಜೆ ವಾಗ್ವಾದ ನಡೆಯಿತು.
ಈ ಬಗ್ಗೆ ಮಾಹಿತಿ ನೀಡಿದ ಕೆರೆ ಸಂರಕ್ಷಣಾ ವೇದಿಕೆಯ ಮುಖಂಡರಾದ ಟಿ.ಕೆ.ಹನುಮಂತರಾಜು, ಸತೀಶ್, ವಸಂತ್ ಕುಮಾರ್, ನಮ್ಮ ಹಕ್ಕುಗಳಿಗಾಗಿ ಶಾಂತಿಯುತ ಹೋರಾಟ ಮಾಡುವುದು ಪ್ರಜಾಪ್ರಭುತ್ವ ಆಡಳಿತದಲ್ಲಿ ಕಾನೂನು ಬದ್ಧವಾದ ಹಕ್ಕು. ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಹೋರಾಟ ಮಾಡಲು ಸಹ ಅರ್ಜಿ ಸ್ವೀಕರಿಸದೆ ನಿರಾಕರಿಸುವ ಮೂಲಕ ಅಧಿಕಾರಿಗಳು ಬೇಜವಾಬ್ಧಾರಿತನದಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ನಮ್ಮೂರಿನ ಕೆರೆಯ ನೀರು ಕಲುಷಿತವಾಗಿ ಕುಡಿಯಲು ಸಹ ಶುದ್ಧ ನೀರಿಲ್ಲದೆ ಒಂದು ವರ್ಷದಿಂದಲೂ ಹಲವಾರು ರೀತಿಯ ಹೋರಾಟಗಳನ್ನು ನೆಡೆಸುತ್ತಲೇ ಬರುತ್ತಿದ್ದೇವೆ. ನಮ್ಮ ಒಂದು ಮನವಿಗೂ ಅಧಿಕಾರಿಗಳಿಂದ ಸ್ಪಂದನೆ ಇಲ್ಲವಾಗಿದೆ. ಇಂತಹ ಸ್ಥಿತಿಯಲ್ಲಿ ಮತದಾನ ಬಹಿಷ್ಕಾರವೇ ನಮಗೆ ಉಳಿದಿರುವ ಮಾರ್ಗವಾಗಿದೆ. ಹೀಗಾಗಿ ದೊಡ್ಡತುಮಕೂರು, ಮಜರಾಹೊಸಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈಗಾಗಲೇ ಮತದಾನ ಬಹಿಷ್ಕಾರ ಕುರಿತಂತೆ ಸಹಿ ಸಂಗ್ರಹ ಮಾಡಲಾಗಿದೆ.
ಈ ಮನವಿಯನ್ನು ಏ.28ರ ಬೆಳಗ್ಗೆ 11 ಗಂಟೆಗೆ ನಗರದ ನೆಲದಾಂಜನೇಯಸ್ವಾಮಿ ದೇವಾಲಯದ ಬಳಿಯಿಂದ ಮೆರವಣಿಯಲ್ಲಿ ಬಂದು ತಹಶೀಲ್ದಾರರಿಗೆ ಮನವಿ ಸಲ್ಲಿಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಮರವಣಿಗೆ ನಡೆಸಲು ಅನುಮತಿ ನೀಡುವುದರಲಿ ಕನಿಷ್ಠ ನಮ್ಮ ಅರ್ಜಿಯನ್ನು ಸಹ ಸ್ವೀಕರಿಸದೆ ಇಲ್ಲಿನ ಅಧಿಕಾರಿಗಳು ಕುಂಟು ನೆಪಗಳನ್ನು ಹೇಳುತ್ತಿದ್ದಾರೆ.
ಪೊಲೀಸರ ಮೂಲಕ ಬೆದರಿಸುವ ತಂತ್ರ ಮಾಡುತ್ತಿದ್ದಾರೆ ಎಂದು ದೂರಿದರು. ಅಧಿಕಾರಿಗಳು ಹಾಗೂ ವೇದಿಕೆ ಮುಖಂಡರ ವಾಗ್ವಾದದ ನಂತರ ಅರ್ಜಿಯನ್ನು ಸ್ವೀಕರಿಸಲಾಗಿದೆ. ಆದರೆ ಮೆರವಣಿಗೆ ನಡೆಸಲು ಅಧಿಕೃತಿ ಅನುಮತಿ ನೀಡಿಲ್ಲ.