ಚುನಾವಣಾ ಪ್ರಚಾರವೆಂಬುದರ ಅವಶ್ಯಕತೆ ಯಾವುದಕ್ಕಾಗಿ ಮತ್ತು ಯಾರಿಗಾಗಿ…?

ಪ್ರಚಾರ………

ಪ್ರಚಾರವೆಂಬುದರ ಅವಶ್ಯಕತೆ ಯಾವುದಕ್ಕಾಗಿ ಮತ್ತು ಯಾರಿಗಾಗಿ, ದಯವಿಟ್ಟು ಗಂಭೀರವಾಗಿ ಯೋಚಿಸಿ…..

ಭರ್ಜರಿಯಾಗಿ ಉಪ ಚುನಾವಣೆಯ ಪ್ರಚಾರವೇನೋ ನಡೆಯಿತು, ನಡೆಯುತ್ತಲೇ ಇದೆ, ಮುಂದೆ ನಡೆಯುತ್ತಲೂ ಇರುತ್ತದೆ….

ಕಾಂಗ್ರೆಸ್ ಪರವಾಗಿ ಘಟಾನುಘಟಿ ಸ್ಟಾರ್ ನಾಯಕರು,
ಬಿಜೆಪಿ ಪರವಾಗಿ ಘಟಾನುಘಟಿ ಸ್ಟಾರ್ ಪ್ರಚಾರಕರು,
ಜೆಡಿಎಸ್ ಪರವಾಗಿ ಘಟಾನುಘಟಿ ಸ್ಟಾರ್ ನಾಯಕರು,
ಹೀಗೆ ಒಂದೊಂದು ಪಕ್ಷದ ಪರವಾಗಿ ಘಟಾನುಘಟಿ ಸ್ಟಾರ್ ಪ್ರಚಾರಕರು ಪ್ರಚಾರ ಮಾಡಿದ್ದಾರೆ……

ಅದರ ಯಥಾವತ್ತು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಮತ್ಯಾವುದೋ ಸಂಪರ್ಕ ಸಾಧನಗಳ ಮುಖಾಂತರ ರಾಜ್ಯಾದ್ಯಂತ, ದೇಶಾದ್ಯಂತ, ವಿಶ್ವದಾದ್ಯಂತ ಪ್ರಚಾರವಾಗುತ್ತಿದೆ…….

ಅವರ ಪ್ರಚಾರ ಅವರ ಪಕ್ಷಗಳು, ಅಭ್ಯರ್ಥಿಗಳು, ಚಿಹ್ನೆಗಳ ಬಗ್ಗೆ ಮಾತ್ರ. ಆದರೆ ನಮ್ಮ ಭವಿಷ್ಯದ ಮುಂದಿನ ಪೀಳಿಗೆಯ ಮಕ್ಕಳಿಗಾಗಿ, ಮಾನವ ಸಮಾಜದ ಮುಂದುವರಿಕೆಗಾಗಿ ಈ ವಿಷಯಗಳ ಬಗ್ಗೆ ಪ್ರಚಾರ ಮಾಡುವವರು ಯಾರು……

ಪ್ರೀತಿಯ ಬಗ್ಗೆ ಯಾರೂ ಪ್ರಚಾರ ಮಾಡಲಿಲ್ಲ, ಪ್ರೀತಿ ವಿರಹದಿಂದ ಬಳಲುತ್ತಿದೆ…..

ನಮ್ಮ ಮಕ್ಕಳಿಗಾಗಿ ಸ್ನೇಹದ ಬಗ್ಗೆ ಯಾರೂ ಪ್ರಚಾರ ಮಾಡಲಿಲ್ಲ,
ಸ್ನೇಹ ಸೊರಗುತ್ತಿದೆ…..

ಕರುಣೆಯ ಬಗ್ಗೆ ಯಾರೂ ಪ್ರಚಾರ ಮಾಡಲಿಲ್ಲ,
ಕರುಣೆ ಕೊರಗುತ್ತಿದೆ……

ತ್ಯಾಗದ ಬಗ್ಗೆ ಯಾರೂ ಪ್ರಚಾರ ಮಾಡಲಿಲ್ಲ,
ತ್ಯಾಗ ದುಃಖಿಸುತ್ತಿದೆ……

ಕ್ಷಮೆಯ ಬಗ್ಗೆ ಯಾರು ಪ್ರಚಾರ ಮಾಡಲಿಲ್ಲ,
ಕ್ಷಮೆ ಮರುಗುತ್ತಿದೆ…..

ಸಭ್ಯತೆಯ ಬಗ್ಗೆ ಯಾರೂ ಪ್ರಚಾರ ಮಾಡಲಿಲ್ಲ,
ಸಭ್ಯತೆಯ ಮನ ನೋಯುತ್ತಿದೆ……

ಸಹಕಾರದ ಬಗ್ಗೆ ಯಾರೂ ಪ್ರಚಾರ ಮಾಡಲಿಲ್ಲ,
ಸಹಕಾರ ಸಂಕಟಪಡುತ್ತಿದೆ……

ಸಮನ್ವಯದ ಬಗ್ಗೆ ಯಾರೂ ಪ್ರಚಾರ ಮಾಡಲಿಲ್ಲ, ಸಮನ್ವಯ ನಾಶವಾಗುತ್ತಿದೆ…..

ಸಂಬಂಧಗಳ ಪಾವಿತ್ರ್ಯತೆ ಬಗ್ಗೆ ಯಾರೂ ಪ್ರಚಾರ ಮಾಡುತ್ತಿಲ್ಲ, ಸಂಬಂಧಗಳು ವ್ಯಾಪಾರಿಕರಣವಾಗುತ್ತಿದೆ……

ನ್ಯಾಯದ ಬಗ್ಗೆ ಪ್ರಚಾರ ಮಾಡುವವರು ಯಾರೂ ಇಲ್ಲ, ನ್ಯಾಯ ಅಳುತ್ತಿದೆ……..,

ನೀತಿ – ಸಂಸ್ಕಾರ – ಸಂಸ್ಕೃತಿಗಳ ಬಗ್ಗೆ ಪ್ರಚಾರ ಮಾಡುವವರು ಯಾರೂ ಇಲ್ಲ,
ಅವು ಅಳಿವಿನ ಅಂಚಿನಲ್ಲಿವೆ….

ಪ್ರಾಮಾಣಿಕತೆಯ ಬಗ್ಗೆ ಪ್ರಚಾರ ಮಾಡುವವರು ಯಾರೂ ಇಲ್ಲ,
ಪ್ರಾಮಾಣಿಕತೆ ಮರೆಯಾಗುತ್ತಿದೆ…..

ಶಿಸ್ತಿನ ಬಗ್ಗೆ ಪ್ರಚಾರ ಮಾಡುವವರು ಯಾರೂ ಇಲ್ಲ, ಶಿಸ್ತು ಮಾಯವಾಗುತ್ತಿದೆ…..

ಸಂಯಮದ ಬಗ್ಗೆ ಪ್ರಚಾರ ಮಾಡುವವರು ಯಾರೂ ಇಲ್ಲ, ಸಂಯಮ ಇಲ್ಲವಾಗುತ್ತಿದೆ…….

ಮನುಷ್ಯರ ಶೀಲ – ಚಾರಿತ್ರ್ಯದ ಬಗ್ಗೆ ಪ್ರಚಾರ ಮಾಡುವವರು ಯಾರೂ ಇಲ್ಲ,
ಶೀಲ ಸಮಸ್ಯೆಯಾಗುತ್ತಿದೆ…..

ನೈತಿಕತೆಯ ಬಗ್ಗೆ ಪ್ರಚಾರ ಮಾಡುವವರು ಯಾರೂ ಇಲ್ಲ,
ನೈತಿಕತೆ ನಿರ್ನಾಮವಾಗುತ್ತಿದೆ…..

ಜಾತಿಗಳ ಬಗ್ಗೆ ಪ್ರಚಾರವಾಗುತ್ತದೆ,
ಧರ್ಮಗಳ ಬಗ್ಗೆ ಪ್ರಚಾರ ಮಾಡುತ್ತಾರೆ,
ಎಲ್ಲಾ ವಸ್ತುಗಳ ಬಗ್ಗೆ ಪ್ರಚಾರ ಮಾಡುತ್ತಾರೆ, ಆದರೆ ಮಾನವೀಯ ಮೌಲ್ಯಗಳ ಬಗ್ಗೆ ಪ್ರಚಾರ ಮಾಡುವವರು ಯಾರೂ ಇಲ್ಲ…..

ಪ್ರತಿಯೊಬ್ಬರಿಗೂ ಅತ್ಯಂತ ಅವಶ್ಯಕವಾದ, ಮನುಷ್ಯರ ಮೂಲಭೂತ ಭಾವನೆಗಳಾದ ಮಾನವೀಯ ಮೌಲ್ಯಗಳೆಂಬ ಜೀವ ದ್ರವ್ಯಗಳ ಬಗ್ಗೆ ಯಾರಿಗೂ ಕಾಳಜಿ ಇಲ್ಲ…..

ಎಲ್ಲಾ ಇಲ್ಲವುಗಳ ನಡುವೆ ಈ ಪದಗಳ, ಭಾವಗಳ ವಿರುದ್ಧ ಪದಗಳು, ಭಾವಗಳು ಈ ಸಮಾಜದಲ್ಲಿ ಮಾನ್ಯತೆ ಪಡೆಯುತ್ತಿವೆ. ಅದಕ್ಕೆ ಎಲ್ಲಾ ಕ್ಷೇತ್ರಗಳ ಎಲ್ಲರೂ ತಮ್ಮ ಕೈಲಾದಷ್ಟು ಕೊಡುಗೆ ನೀಡುತ್ತಿದ್ದಾರೆ…….

ಈಗಲಾದರೂ ಎಚ್ಚೆತ್ತುಕೊಂಡು ಚುನಾವಣಾ ಪ್ರಚಾರಕ್ಕಿಂತ ಮಾನವೀಯ ಮೌಲ್ಯಗಳ ಪ್ರಚಾರ – ಪ್ರಸಾರ ಈ ಸಮಾಜದ ಪ್ರಮುಖ ಆದ್ಯತೆಯಾಗಲಿ. ಇಲ್ಲದಿದ್ದರೆ ಮುಂದಿನ ಭವಿಷ್ಯ ಕರಾಳವಾಗಲಿದೆ……..

ಒಂದು ಸಣ್ಣ ಚುನಾವಣಗೆ ಇಷ್ಟೊಂದು ಮಹತ್ವ ನೀಡಿ, ನಿಜವಾದ ಮಾನವೀಯ ಮೌಲ್ಯಗಳನ್ನು ನಿರ್ಲಕ್ಷಿಸಿದರೆ, ಮುಂದೆ ಭಾರಿ ಬೆಲೆ ತೆರಬೇಕಾಗುತ್ತದೆ ಎಚ್ಚರ ಎಂದು ಮನವಿ ಮಾಡಿಕೊಳ್ಳುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Leave a Reply

Your email address will not be published. Required fields are marked *