ಚಿರತೆ ದಾಳಿಗೆ ಸುಮಾರು 30 ಸಾವಿರ ಬೆಲೆ ಬಾಳುವ ಹಸು ಬಲಿಯಾಗಿರುವ ಘಟನೆ ತಾಲೂಕಿನ ಕೆಳಗಿನಜೂಗಾನಹಳ್ಳಿ ಗ್ರಾಮದ ಹೊರವಲಯದ ಕಾಡಿನಲ್ಲಿ ನಡೆದಿದೆ.
ಕೆಳಗಿನಜೂಗಾನಹಳ್ಳಿ ಗ್ರಾಮದ ನಿವಾಸಿ ರೈತ ಮಹಿಳೆ ಗೌರಮ್ಮ ಎಂದಿನಂತೆ ತಮ್ಮ ಹಸುಗಳನ್ನು ಮೇಯಿಸಲು ಕಾಡಿಗೆ ಹೋಗಿದ್ದಾರೆ. ಮೇ.30 (ನಿನ್ನೆ) ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಪ್ರತಿದಿನ ನೀರು ಕುಡಿಸುವ ಜಾಗದಲ್ಲಿ ಚಿರತೆ ಏಕಾಏಕಿ ಹಸುವಿನ ಮೇಲೆ ಎರಗಿ ಗಾಯಪಡಿಸಿದೆ. ಗಾಯಪಡಿಸುವುದನ್ನು ಕಂಡ ಗೌರಮ್ಮ ತಮ್ಮ ಹಸುವನ್ನು ಕಾಪಾಡಲು ಜೋರಾಗಿ ಕೂಗಿಕೊಂಡಾಗ ಅಲ್ಲಿಂದ ಓಡಿಹೋಗಿರುವ ಚಿರತೆ.
ಚಿರತೆ ಇಲ್ಲದ ಸಮಯದಲ್ಲಿ ಬಂದು ನೋಡಿದಾಗ ಹಸು ಸ್ಥಳದಲ್ಲೇ ಪ್ರಾಣ ಬಿಟ್ಟಿರುವುದನ್ನು ಕಂಡಿದ್ದಾರೆ. ಹೇಗೋ ಪ್ರಾಣ ಹೋಗಿದೆ ಎಂದು ಸ್ಥಳದಲ್ಲೇ ಮೃತ ಹಸುವನ್ನು ಬಿಟ್ಟು ಮಿಕ್ಕುಳಿದ ಹಸುಗಳನ್ನು ಮನೆಗೆ ಹೊಡೆದುಕೊಂಡು ಬಂದಿರುವ ಗೌರಮ್ಮ.
ಇಂದು (ಮೇ.31) ಅದೇ ಸ್ಥಳಕ್ಕೆ ಹೋಗಿ ನೋಡಿದಾಗ ಹಸುವನ್ನು ಪೂರ್ತಿಯಾಗಿ ತಿಂದು ತೇಗಿರುವ ಚಿರತೆ. ಸಾವಿರಾರು ರೂ. ಮೌಲ್ಯದ ಹಸುವನ್ನು ಕಳೆದುಕೊಂಡ ರೈತ ಮಹಿಳೆ ಗೌರಮ್ಮ ಸಂಕಷ್ಟದಲ್ಲಿದ್ದಾರೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇಂತಹದ್ದೇ ಘಟನೆ ಮೇ.29ರಂದು ತಾಲೂಕಿನ ತೂಬಗೆರೆ ಹೋಬಳಿಯ ಹಿರೇಮುದ್ದೇನಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಮತ್ತೊಂದು ಘಟನೆ ಸಂಭವಿಸಿದೆ. ಪ್ರಾಣಿಗಳ ಮೇಲೆ ಚಿರತೆ ದಾಳಿ ಕಂಡು, ಕೇಳಿ ಭಯ ಭೀತರಾಗಿರುವ ಜನ.
ಚಿರತೆಯಿಂದ ಅದೃಷ್ಟವಶಾತ್ ಮನುಷ್ಯನಿಗೆ ಯಾವ ಹಾನಿಯಾಗಿಲ್ಲ. ಹಾನಿಯಾಗುವುದಕ್ಕೂ ಮುನ್ನ ಚಿರತೆಯನ್ನ ಸೆರೆಹಿಡಿದು ನೆಮ್ಮದಿ ಜೀವನ ನಡೆಸಲು ಅನುವುಮಾಡಿಕೊಡುವಂತೆ ಅರಣ್ಯ ಇಲಾಖೆಗೆ ಜನ ಮನವಿ ಮಾಡಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.