ಚಿರತೆ ದಾಳಿಗೆ ನಾಯಿ ಬಲಿಯಾಗಿರುವ ಘಟನೆ ಇಂದು ಬೆಳಗ್ಗೆ ಸುಮಾರು 7 ಗಂಟೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಲಿಂಗದವೀರನಹಳ್ಳಿ ಸಮೀಪ ನಡೆದಿದೆ.
ಲಿಂಗದವೀರನಹಳ್ಳಿ ನಿವಾಸಿ ರೈತ ಕೆಂಪಯ್ಯನವರು ಬೆಳಗ್ಗೆ ಎಂದಿನಂತೆ ಊರ ಹೊರವಲಯದಲ್ಲಿರುವ ತಮ್ಮ ತೋಟಕ್ಕೆ ಬಂದಿದ್ದಾರೆ. ಕೆಂಪಯ್ಯನವರ ಜೊತೆ ನಾಯಿ ಕೂಡ ಬಂದಿದೆ. ನಾಯಿಯನ್ನು ಬೇಟೆಯಾಡಲು ಹೊಂಚುಹಾಕಿ ಪೊದೆಯಲ್ಲಿ ಅಡಗಿ ಕುಳಿತಿದ್ದ ಚಿರತೆ, ನಾಯಿ ಬಂದ ಕೂಡಲೇ ನಾಯಿ ಮೇಲೆ ಎರಗಿ ಬಗೆದು ತಿಂದಿದೆ. ಜೊತೆಯಲ್ಲಿ ಬಂದಿದ್ದ ನಾಯಿ ಕಾಣೆಯಾಗಿದ್ದನ್ನು ಗಮನಿಸಿದ ಕೆಂಪಯ್ಯ, ಸುತ್ತಾಮುತ್ತಾ ಹುಡುಕಿದ್ದಾರೆ. ಪೊದೆಯೊಂದರಲ್ಲಿ ನಾಯಿಯನ್ನು ಭಕ್ಷಿಸುತ್ತಿದ್ದ ಚಿರತೆ ಕೆಂಪಯ್ಯನವರನ್ನು ಕಂಡು ನಾಯಿಯನ್ನು ಅರೆಬರೆತಿಂದು ಅಲ್ಲಿಂದ ಪರಾರಿಯಾಗಿದೆ.
ಚಿರತೆ ಪರಾರಿಯಾಗುತ್ತಿರುವ ದೃಶ್ಯವನ್ನು ಕಂಪಯ್ಯನವರು ಕಣ್ಣಾರೇ ಕಂಡು ಗಾಬರಿಯಾಗಿ ಕೂಗಿಕೊಂಡಿದ್ದಾರೆ. ಅದೃಷ್ಟವಶಾತ್ ಕೆಂಪಯ್ಯನವರು ಚಿರತೆ ದಾಳಿಯಿಂದ ಪಾರಾಗಿದ್ದಾರೆ.
ಇತ್ತೀಚೆಗೆ ಇವರದ್ದೇ ನಾಯಿ ನಾಪತ್ತೆಯಾಗಿತ್ತು. ಆ ನಾಯಿಯೂ ಸಹ ಚಿರತೆ ದಾಳಿಗೆ ಬಲಿಯಾಗಿರಬಹುದು ಎಂದು ಊಹಿಸಲಾಗಿದೆ.
ಚಿರತೆಯನ್ನು ಕೂಡಲೇ ಸೆರೆ ಹಿಡಿದು ಜನ ಜಾನುವಾರುಗಳ ಪ್ರಾಣ ರಕ್ಷಣೆ ಮಾಡಬೇಕೆಂದು ಅರಣ್ಯ ಇಲಾಖೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ…