ಚಿರತೆಗೆ ಮೇಕೆ ಬಲಿ- ಆತಂಕದಲ್ಲಿ ಕುಕ್ಕಲಳ್ಳಿ ಗ್ರಾಮಸ್ಥರು: ಎಚ್ಚೆತ್ತು ಕೊಳ್ಳದ ಅರಣ್ಯ ಇಲಾಖೆ: ಇಲಾಖೆ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

ಚಿರತೆಯೊಂದು ಮನೆ ಬಳಿ ಇದ್ದ ಮೇಕೆಯನ್ನು ಎಳೆದೊಯ್ದು ಕೊಂದು ಹಾಕಿರುವ ಘಟನೆ ಇಂದು‌ ಮುಂಜಾನೆ ಸುಮಾರು 3:45ರ ಸಮಯದಲ್ಲಿ ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಕ್ಕಲಳ್ಳಿ ಗ್ರಾಮದಲ್ಲಿ ನಡೆದಿದೆ.

ರೈತ ಶಶಿಧರ್ ಅವರಿಗೆ ಸೇರಿದ ಮೇಕೆಯನ್ನು ಚಿರತೆ ಬಲಿ ಪಡೆದಿದೆ.

ಎಂದಿನಂತೆ ಮನೆಯ ಕಾಂಪೌಂಡ್ ಒಳಗೆ ಎರಡು ಮೇಕೆಗಳನ್ನ ಕಟ್ಟಿಹಾಕಲಾಗಿತ್ತು. ಎರಡು ಮೇಕೆಗಳಲ್ಲಿ ಒಂದು ಮೇಕೆಯನ್ನು‌ ಊರ ಹೊರವಲಯದಲ್ಲಿರುವ ಹಳ್ಳದ ಕಡೆ ಹೊತ್ತೊಯ್ದು ಅರೆಬರೆ ತಿಂದು ಪರಾರಿಯಾಗಿದೆ.

ಸ್ಥಳದಲ್ಲಿ ಚಿರತೆಯ ಹೆಜ್ಜೆ ಗುರುತು ಸಹ ಪತ್ತೆಯಾಗಿದೆ.

ಇದರಿಂದ ಬೆಚ್ಚಿಬಿದ್ದಿರುವ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ‌‌ ಮುಟ್ಟಿಸಿದ್ದಾರೆ. ಆದರೆ ಇದೂವರೆಗೂ ಸ್ಥಳಕ್ಕೆ ಭೇಟಿ‌ ನೀಡದ ಸಿಬ್ಬಂದಿ. ಸಿಬ್ಬಂದಿಯ ನಿರ್ಲಕ್ಷ್ಯತನಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮೊನ್ನೆ ರಾತ್ರಿ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಚಿರತೆ ಚಲನವಲನ‌ ಕಂಡುಬಂದಿತ್ತು. ಭಾರೀ ಅನಾಹುತ ಆಗುವ ಮೊದಲು ಕೂಡಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಚಿರತೆಗಳ ಹಾವಳಿಯನ್ನ ತಪ್ಪಿಸಬೇಕು.

Leave a Reply

Your email address will not be published. Required fields are marked *