Categories: ಲೇಖನ

ಚಿನ್ನದ ಗಿರವಿ ಜಾಹೀರಾತು ಮತ್ತು ನಮ್ಮ ಸಮಾಜ…….

” ನೀವು ನಿಮ್ಮ ಒಡವೆಗಳನ್ನು ಅಡವಿಟ್ಟಿರುವಿರಾ. ( ಗಿರವಿ ) ಹಾಗಾದರೆ ಚಿಂತೆ ಬಿಡಿ. ನಾವು ಅದನ್ನು ಬಿಡಿಸಿ ಇಂದಿನ ಮಾರುಕಟ್ಟೆ ಬೆಲೆಗಿಂತ ಹೆಚ್ಚು ದರದಲ್ಲಿ ಕೊಂಡು ಉಳಿದ ಹಣವನ್ನು ನಿಮಗೆ ಕೂಡಲೇ ಕೊಡುತ್ತೇವೆ ”

ಹೀಗೆ ದಿನದ 24 ಗಂಟೆಯೂ ಟಿವಿಗಳಲ್ಲಿ ಪ್ರಖ್ಯಾತ ನಟನಟಿಯರು ವಿವಿಧ ಕಂಪನಿಗಳ ಹೆಸರಿನಲ್ಲಿ ಜಾಹೀರಾತು ನೀಡುತ್ತಾರೆ. ಅದು ಎಲ್ಲರಿಗೂ ತಿಳಿದಿದೆ.

ಗೆಳೆಯರೊಬ್ಬರು ಒಂದು ರಾತ್ರಿ ಕರೆ ಮಾಡಿ ದುಃಖದಿಂದ ಇದನ್ನು ವಿವರಿಸಿ ತುಂಬಾ ಭಾವುಕರಾದರು. ಬದುಕೇ ಜಿಗುಪ್ಸೆ ಮೂಡಿದೆ ಎಂದರು. ಆ ಜಾಹೀರಾತಿಗೂ ಅವರ ಜಿಗುಪ್ಸೆಗೂ ಇರುವ ಕಾರಣ ಸೂಕ್ಷ್ಮ ಮನಸ್ಸಿನವರಿಗೆ ಮತ್ತು ಈ ಸಮಾಜದ ಬಗ್ಗೆ ಆಳವಾಗಿ ತಿಳಿದಿರುವವರಿಗೆ ಖಂಡಿತ ಅರ್ಥವಾಗುತ್ತದೆ.

ಅವರು ಹೇಳಿದ್ದು ” ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಟಿವಿ ಸದಾ ಚಾಲನೆಯಲ್ಲಿರುತ್ತದೆ. ಮನೆಯಲ್ಲಿ ಒಬ್ಬರಲ್ಲ ಒಬ್ಬರು ನೋಡುತ್ತಲೇ ಇರುತ್ತಾರೆ. ನಾವು ತಿಂಡಿ ಊಟ ಎಲ್ಲವನ್ನೂ ಟಿವಿ ನೋಡುತ್ತಲೇ ತಿನ್ನುತ್ತೇವೆ. ಆಗ ಈ ಜಾಹಿರಾತು ಪ್ರತಿ ಹತ್ತು ನಿಮಿಷಕ್ಕೆ ಬರುತ್ತಲೇ ಇರುತ್ತದೆ. ನಾನು ಕಳೆದ ವರ್ಷ ತೀರಾ ಅನಿವಾರ್ಯ ಕಾರಣದಿಂದ ನಮ್ಮ ಮನೆಯಲ್ಲಿದ್ದ ಒಡವೆ ಗಿರವಿ ಇಟ್ಟಿದ್ದೇನೆ. ಈ ಏಪ್ರಿಲ್ ನಲ್ಲಿ ಅದನ್ನು ಬಿಡಿಸಿಕೊಳ್ಳಲು ಒಂದು ಹಣಕಾಸಿನ ವ್ಯವಸ್ಥೆ ಮಾಡಿದ್ದೆ. ಆದರೆ ಯಾವುದೋ ಕಾರಣದಿಂದ ಆ ಹಣಕಾಸಿನ ಒಪ್ಪಂದ ಸಾಧ್ಯವಾಗಲಿಲ್ಲ. ಈಗ ಈ ಜಾಹೀರಾತು ನನ್ನ ಮನಸ್ಸಿನ ಮೇಲೆ ಅಗಾಧ ಒತ್ತಡ ಹೇರುತ್ತಿದೆ. ಅದನ್ನು ನೋಡಿದಾಗಲೆಲ್ಲ ನನ್ನ ಮನಸ್ಸು ಉದ್ವೇಗಕ್ಕೆ ಒಳಗಾಗುತ್ತದೆ. ನೋವು ಅವಮಾನ ಅಸಹಾಯಕತೆಯಿಂದ ಮುದುಡುತ್ತದೆ. ಅದನ್ನು ಬಿಡಿಸಿ ಕೊಳ್ಳಲು‌ ಸಾಧ್ಯವಾಗದಿದ್ದಕ್ಕೆ ನನ್ನಲ್ಲಿ ಕೀಳರಿಮೆ ಉಂಟಾಗಿ ಮನಸ್ಸು ಖಿನ್ನತೆ ಒಳಗಾಗುತ್ತದೆ. ಊಟ ಸೇರುವುದಿಲ್ಲ. ಬಡ್ಡಿಯ ಕಂತುಗಳನ್ನು ಕೆಲವು ತಿಂಗಳುಗಳಿಂದ ಕಟ್ಟಿಲ್ಲ. ಬಹುಶಃ ಬಡ್ಡಿ ಜಾಸ್ತಿಯಾಗಿ ಆ ಒಡವೆಗಳು ನಮ್ಮಿಂದ ದೂರವಾಗಬಹುದು. ಈಗಾಗಲೇ ಕುಸಿದಿರುವ ನನ್ನ ಮಾನ ಮರ್ಯಾದೆ ಕುಟುಂಬದವರ ದೃಷ್ಟಿಯಲ್ಲಿ ಮತ್ತಷ್ಟು ಪಾತಾಳಕ್ಕೆ ಇಳಿಯುತ್ತದೆ. ಏನಾದರೂ ಮಾಡಿ ಆ ಜಾಹೀರಾತು ನಿಲ್ಲಿಸಲು ಸಾಧ್ಯವೇ ? ”

ಇದಕ್ಕೆ ಹೇಗೆ ಪ್ರತಿಕ್ರಿಯಿಸುವುದು ? ಸಮಸ್ಯೆಯ ಮೂಲ ಇರುವುದಾದರೂ ಎಲ್ಲಿ ? ಬಡತನವೇ ಒಂದು ಶಾಪವಾಗಿ ಕಾಡುತ್ತಿರುವುದೇಕೆ ? ಸಾಲ ಇಲ್ಲದ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿರುವುದು ಏಕೆ ? ಲಕ್ಷಾಂತರ ಹಣ ನೀಡಿ ಈ ರೀತಿಯ ಹತ್ತಾರು ಕಂಪನಿಗಳು ಜಾಹೀರಾತು ನೀಡುವಷ್ಟು ಬೆಳೆದಿರುವುದು ಈ ವ್ಯವಹಾರ ಎಷ್ಟು ಆಳವಾಗಿ ಬೆಳೆದಿದೆ ಎಂಬುದಕ್ಕೆ ಒಂದು ಉದಾಹರಣೆ ಎಂದು ಪರಿಗಣಿಸಿದರೆ ನಮ್ಮ ಜನರ ಪರಿಸ್ಥಿತಿ ಎಷ್ಟು ಅಧೋಗತಿಗೆ ಇಳಿದಿರಬಹುದು ?

ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ದುರ್ಬಲವಾಗಿ ನಿರ್ಮಿಸಲಾಗಿದೆ, ಅದರ ಪರಿಣಾಮ ವೈಯಕ್ತಿಕ ಮಾನಸಿಕ ಸ್ಥಿಮಿತತೆ ಕೂಡ ದುರ್ಬಲವಾಗಿದೆ. ಅದು ಕೌಟುಂಬಿಕ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿದೆ.
ಅದರ ಫಲಿತಾಂಶ ಒಂದು ಜಾಹೀರಾತು ಸಹ ನಮ್ಮನ್ನು ಅಲುಗಾಡಿಸುತ್ತಿದೆ.

ಹಣದ ದುರ್ಬಲ ನಿರ್ವಹಣೆ ನಮ್ಮ ಸಾಮಾನ್ಯ ಜನರ ಬಹುದೊಡ್ಡ ಸಮಸ್ಯೆ. ಕುಟುಂಬದ ಬೇಡಿಕೆ ಮತ್ತು ಪೂರೈಕೆಗಳ ಮಧ್ಯೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ಸುತ್ತಮುತ್ತಲಿನ ಜನರ ಜೀವನ ಕ್ರಮದ ಒತ್ತಡ ನಮ್ಮ ಮೇಲೆ ಬೀಳುತ್ತದೆ. ಅವರಂತೆ ನಾವು ಅಥವಾ ಅವರಿಗಿಂತ ಹೆಚ್ಚು ಇರಬೇಕು ಎಂಬ ಮನೋಭಾವ, ಅವರ ದೌರ್ಬಲ್ಯ ಗುರುತಿಸದೆ ಬಾಹ್ಯ ಚಟುವಟಿಕೆಗಳು ಮಾತ್ರ ನಮ್ಮ ಕಣ್ಣಿಗೆ ಕಾಣುವುದು, ಹೆಂಡತಿ ಮಕ್ಕಳ ಆಸೆ ಪೂರೈಸುವ ತವಕ, ಸ್ವಂತ ಮನೆ, ಟಿವಿ, ಫ್ರಿಡ್ಜ್, ವಾಷಿಂಗ್ ಮಿಷನ್, ಮೊಬೈಲ್, ಕಾರು, ಪ್ರತಿಷ್ಠಿತ ಶಾಲೆ, ಬಟ್ಟೆಗಳು ಎಲ್ಲವನ್ನೂ ಈಗ ಅವಶ್ಯಕ ವಸ್ತುಗಳು ಎಂದು ಪರಿಗಣಿಸಿರುವುದು, ಅದಕ್ಕೆ ತಕ್ಕಂತೆ ನಿರ್ದಿಷ್ಟ ಆದಾಯ ಇಲ್ಲದಿರುವುದು, ಅದು ನಮಗೆ ಅರಿವಾಗದಿರುವುದು ಎಲ್ಲವೂ ಒಟ್ಟಾಗಿ ಸೇರಿ ನಮ್ಮ ಮೂಲ ಮಾನಸಿಕ ಸ್ಥಿತಿ ಸಂಪೂರ್ಣ ಬದಲಾಗಿದೆ. ಆದ್ಯತೆಗಳನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗುತ್ತಿಲ್ಲ. ಗುರುತಿಸಿದರೂ ಕುಟುಂಬ ವ್ಯವಸ್ಥೆ ಅದನ್ನು ಪಾಲಿಸಲು ಬಿಡುತ್ತಿಲ್ಲ.

ಅದರ ಪರಿಣಾಮವೇ ಈ ಜಾಹೀರಾತುಗಳ ಉಗಮ. ಅದನ್ನು ತಡೆಯುವುದು ಸಾಧ್ಯವಿಲ್ಲ. ನಮ್ಮನ್ನು ನಿಯಂತ್ರಿಸಿಕೊಳ್ಳಬೇಕು ನಿಜ, ಆದರೆ ಅದೂ ಕಷ್ಟ. ಮೊದಲೇ ಕುಂಟುತ್ತಾ ಸಾಗುತ್ತಿದ್ದ ಬಹಳಷ್ಟು ಜನರ ಜೀವನ ಅತಿಯಾದ ಬೆಲೆ ಏರಿಕೆ ಮತ್ತು ತೆರಿಗೆಯ ಕಾರಣದಿಂದ ಮಲಗಿಬಿಟ್ಟಿದೆ. ಬಹಿರಂಗವಾಗಿ ಹೇಳಿಕೊಳ್ಳಲಾಗದ ಒತ್ತಡ ಕುಟುಂಬದ ಜವಾಬ್ದಾರಿ ನಿರ್ವಹಿಸುವವರ ಮೇಲಿದೆ. ಮುಂದಿನ ಕೆಲವು ವರ್ಷಗಳು ಇನ್ನೂ ಒತ್ತಡ ಹೆಚ್ಚಿಸುತ್ತವೆ.

ಪರಿಹಾರ ?….

ಈ ವಿಚಿತ್ರ ಸನ್ನಿವೇಶಕ್ಕೆ ಎಲ್ಲರಿಗೂ ಸಮನಾಗಿ ಅನ್ವಯವಾಗುವ ಯಾವುದೇ ಫಾರ್ಮುಲ ಇಲ್ಲ. ಹಣದ ಹರಿವು ಹೆಚ್ಚಿಸಿಕೊಳ್ಳುವುದು ಕಷ್ಟ. ಒಬ್ಬೊಬ್ಬರ ಮಾನಸಿಕ ಮತ್ತು ಆರ್ಥಿಕ ಪರಿಸ್ಥಿತಿ ಭಿನ್ನವಾಗಿದೆ. ಆದ್ದರಿಂದ ನಮ್ಮ ಇಡೀ ಪರಿಸ್ಥಿತಿಯನ್ನು ತಾವೇ ಪರಾಮರ್ಶಿಸಿಕೊಂಡು ಬಂದದ್ದೆಲ್ಲಾ ಬರಲಿ ಧೈರ್ಯವಾಗಿ ಎದುರಿಸೋಣ ಎಂದು ದೃಢ ನಿರ್ಧಾರ ಮಾಡಬೇಕು. ನಮಗಿಂತ ಕಷ್ಟದಲ್ಲಿರುವ ಎಷ್ಟೋ ಜನರನ್ನು ನೋಡಿ ಅವರಿಗಿಂತ ನಾವು ಉತ್ತಮ ಸ್ಥಿತಿಯಲ್ಲಿ ಇದ್ದೇವೆ ಎಂದು ಸಮಾಧಾನ ಮಾಡಿಕೊಳ್ಳಬೇಕು. ಮಾನ ಮರ್ಯಾದೆ ಅವಮಾನ ಎಂಬುದನ್ನು ಸ್ವಲ್ಪ ದಿನ ಮೂಟೆ ಕಟ್ಟಿ ಮನೆಯ ಅಟ್ಟದ ಮೇಲೆ ಇಡಬೇಕು. ಎಲ್ಲರ ನಿಂದನೆ ಸಹಿಸಿಕೊಳ್ಳುವ ಸ್ಥಿತ ಪ್ರಜ್ಞೆತೆ ಬೆಳೆಸಿಕೊಳ್ಳಬೇಕು.

ಮುಂದಿನ ದಿನಗಳು ಯಾವುದೇ ಕ್ಷಣದಲ್ಲಿ ಬದಲಾಗಿ ಪರಿಸ್ಥಿತಿ ಉತ್ತಮವಾಗುತ್ತದೆ ಎಂಬ ಆಶಾಭಾವನೆಯಿಂದ ಬದುಕನ್ನು ಎದುರಿಸಬೇಕು. ಕಷ್ಟಗಳನ್ನೇ ಸೋಲಿಸುವ, ಕಷ್ಟಗಳೇ ನಾಚಿಕೆ ಪಡುವಂತ, ಕಷ್ಟಗಳೇ ಅರಿವಾಗದಂತ ಮಾನಸಿಕ ಸ್ಥಿತಿ ತಲುಪಲು ಪ್ರಯತ್ನಿಸಬೇಕು. ಅದು ನಮ್ಮ ಮೊದಲ ಆದ್ಯತೆಯಾಗಬೇಕು. ಮುಂದೆ ನೋಡೋಣ.
ಎಲ್ಲರಿಗೂ ಒಳ್ಳೆಯದಾಗಲಿ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

ಕುಸುಮ್ (ಸೌರ ವಿದ್ಯುತ್) ಯೋಜನೆ ಹೆಸರಲ್ಲಿ ದೇಶ ಕಾಯೋ ಯೋಧರ ಭೂಮಿಗೆ ಬೇಲಿ: ತಬ್ಬಿಬ್ಬಾದ ಯೋಧರ ಕುಟುಂಬ

ಕಳೆದ 10 ವರ್ಷಗಳಿಂದ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಕನ್ನಮಂಗಲ ಗ್ರಾಮದ ಸರ್ವೇ ನಂಬರ್ 50ರ ಗೋಮಾಳದಲ್ಲಿ 53-57 ಅರ್ಜಿ…

1 hour ago

ಟೋಲ್ ರಸ್ತೆಯಲ್ಲಿ ಮಿತಿಮೀರಿದ ಅಪಘಾತ: ರಸ್ತೆ ಸುರಕ್ಷತೆ ಕಾಪಾಡದ ಸುಂಕವಸೂಲಿ(ಟೋಲ್) ಗುತ್ತಿಗೆದಾರರು: ಹೆದ್ದಾರಿಯಲ್ಲಿ ಕುಳಿತು ಟೋಲ್ ವಿರುದ್ಧ ಧಿಕ್ಕಾರ ಕೂಗಿದ ರೈತರು, ಸಂಘಟನೆಗಾರರು…

ರಸ್ತೆ ನಿಯಮಗಳನ್ನು ಪಾಲಿಸದೆ ವಾಹನಸವಾರರಿಗೆ ಸಮಸ್ಯೆ ಮಾಡುತ್ತಿರುವ ಟೋಲ್ ಸಿಬ್ಬಂದಿ ವಿರುದ್ದ ರಾಜ್ಯ ರೈತ ಸಂಘ ಮತ್ತು ವಿವಿಧ ಕನ್ನಡಪರ…

1 hour ago

ವಿಜಯಪುರದ ಬಸವ ಕಲ್ಯಾಣ ಮಠದಲ್ಲಿ 38ನೇ ವರ್ಷದ ಕಡ್ಲೆಕಾಯಿ ಪರಿಷೆ

ವಿಜಯಪುರ(ದೇವನಹಳ್ಳಿ): ಇಂದಿನ ಮಕ್ಕಳಿಗೆ ಶಿಕ್ಷಣದಷ್ಟೇ, ಆಚಾರ-ವಿಚಾರ ಒಳಗೊಂಡ ಸಂಸ್ಕಾರವನ್ನು ನೀಡುವುದು ಅವಶ್ಯವಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕರೆತರುವ…

2 hours ago

ಸಾಸಲು ಹೋಬಳಿಯಲ್ಲಿ ಮಿತಿಮೀರಿದ ಕೃಷಿ ಬೋರ್ ವೆಲ್ ಕೇಬಲ್ ಕಳ್ಳರ ಹಾವಳಿ: ಒಂದೇ ದಿನ ಹಲವು ಕಡೆ ಕೇಬಲ್ ಕಟ್

ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯಲ್ಲಿ ಬೋರ್ ವೆಲ್ ಗಳ ವಿದ್ಯುತ್ ಕೇಬಲ್ ಕಳ್ಳರ ಹಾವಳಿ ಮಿತಿಮೀರಿದೆ. ಕಳೆದ ರಾತ್ರಿ ಹತ್ತಾರು…

5 hours ago

ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಬರೋಬ್ಬರಿ 14.22 ಕೋಟಿ ರೂ ಮೌಲ್ಯದ ಗಾಂಜಾ ಜಪ್ತಿ

ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬರೋಬ್ಬರಿ 14.22 ಕೋಟಿ ರೂ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ. ವಿದೇಶಗಳಿಂದ…

8 hours ago

ದಲಿತರು, ದಲಿತ ಕಾಲೋನಿಗಳೆಂದರೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ನಿರ್ಲಕ್ಷ್ಯ, ಬೇಜವಾಬ್ದಾರಿ, ಅಸಡ್ಡೆ: ದಲಿತ ಕಾಲೋನಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಹಾಡೋನಹಳ್ಳಿ ಗ್ರಾಪಂ ವಿಫಲ: ಸಿಡಿದ್ದೆದ್ದ ದಲಿತರು

ದಲಿತರು, ದಲಿತ ಕಾಲೋನಿಗಳೆಂದರೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಏಕಿಷ್ಟು ನಿರ್ಲಕ್ಷ್ಯ, ಬೇಜವಾಬ್ದಾರಿ, ಅಸಡ್ಡೆ. ದಲಿತ ಕಾಲೋನಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಹಾಡೋನಹಳ್ಳಿ…

10 hours ago