ದೊಡ್ಡಬಳ್ಳಾಪುರ: ಪತಂಗ ಮತ್ತು ಚಿಟ್ಟೆಗಳೆರಡು ಒಂದೇ ಗುಂಪಿಗೆ ಸೇರಿದ ಕೀಟಗಳಾದರೂ ಎರಡರ ಉಪಗುಂಪುಗಳು ಬೇರೆ ಬೇರೆ. ಭೂಮಿಯ ಮೇಲೆ ಸುಮಾರು 1,40,000 ಪತಂಗದ ಪ್ರಭೇದಗಳಿದ್ದು,18,000 ಚಿಟ್ಟೆಯ ಪ್ರಭೇದಗಳಿವೆ. ನಮ್ಮ ದೇಶದಲ್ಲಿ 12,000 ಪತಂಗದ ಪ್ರಭೇದಗಳಿದ್ದರೆ, 1,400 ಚಿಟ್ಟೆಯ ಪ್ರಭೇದಗಳಿವೆ. ಭೂಮಿಯ ಮೇಲೆ ಚಿಟ್ಟೆಗಳಿಗಿಂತ ಮೊದಲೇ ಪತಂಗಗಳ ವಿಕಾಸಗೊಂಡವು. ಆದರೂ, ಚಿಟ್ಟೆಗಳಷ್ಟು ಪತಂಗಗಳು ಜನರ ಗಮನ ಸೆಳೆದಿಲ್ಲ. ಇದಕ್ಕೆ ಕಾರಣ ಹೆಚ್ಚಿನ ಪತಂಗ ಪ್ರಭೇದಗಳು ನಿಶಾಚರಿ ಮತ್ತು ಇದರ ಬಣ್ಣ ಮತ್ತು ವಿನ್ಯಾಸಗಳು ಆಕರ್ಷಕವಾಗಿದ್ದರೂ ಪರಿಸರದಲ್ಲಿ ಚಿಟ್ಟೆಗಳಂತೆ ಎದ್ದು ಕಾಣುವುದಿಲ್ಲ. ಈ ಕಾರಣಗಳಿಂದಲೇ ಪತಂಗಗಳ ಮೇಲೆ ಅಧ್ಯಯನಗಳು ಕಡಿಮೆ ಮತ್ತು ಚಿಟ್ಟೆಯ ಛಾಯಾಚಿತ್ರಗಳಷ್ಟು ಪತಂಗಗಳ ಛಾಯಾಚಿತ್ರಗಳ ದಾಖಲೆ ಕಡಿಮೆ ಎನ್ನುತ್ತಾರೆ ಚಿಟ್ಟೆಗಳ ಕುರಿತು ವಿಶೇಷ ಅಧ್ಯಯನ ನಡೆಸುತ್ತಿರುವ ಹಾಗೂ ಛಾಯಾಚಿತ್ರ ಗ್ರಾಹಕ ವೈ.ಟಿ.ಲೋಹಿತ್.
2012ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಪತಂಗ ವಾರವನ್ನು ವಿಶ್ವದ 90ಕ್ಕೂ ಹೆಚ್ಚಿನ ದೇಶಗಳ ಆಸಕ್ತರು, ಸಂಘ ಸಂಸ್ಥೆಗಳು ಪತಂಗಗಳನ್ನು ಗಮನಿಸುವ ಮತ್ತು ಅರಿವು ಮೂಡಿಸುವ ಮೂಲಕ ಪತಂಗ ವಾರವನ್ನು ಆಚರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಪತಂಗಗಳ ವೀಕ್ಷಣೆ ಮತ್ತು ಛಾಯಾಗ್ರಹಣದ ಆಸಕ್ತಿ ಮೂಡುತ್ತಿದ್ದು, ಇದು ಪತಂಗಗಳ ವೈಜ್ಞಾನಿಕ ಅಧ್ಯಯನ ಮತ್ತು ದಾಖಲಾತಿಯಲ್ಲಿ ತೊಡಗಿರುವವರಿಗೆ ಅನುಕೂಲವಾಗಲಿದೆ.
ಮರ್ಕ್ಯುರಿ ಲೈಟ್ ಮತ್ತು ಬಿಳಿ ಬಟ್ಟೆಯನ್ನು ಬಳಸಿ ಪತಂಗಗಳನ್ನು ಆಕರ್ಷಿಸಬಹುದು ಮತ್ತು ಆ ಪ್ರದೇಶದಲ್ಲಿರುವ ಪತಂಗಗಳ ಪ್ರಭೇದಗಳನ್ನು ದಾಖಲಿಸಬಹುದು, ರಾತ್ರಿ ಪೂರ್ತಿ ದೀಪವನ್ನು ಉರಿಸದೆ ಕಡಿಮೆ ಸಮಯದಲ್ಲಿ ಈ ಚಟುವಟಿಕೆ ನಡೆಸಿದರೆ ವಿಜ್ಞಾನ ಲೋಕಕ್ಕೂ ಮತ್ತು ಪತಂಗ ಲೋಕಕ್ಕೂ ಅನುಕೂಲ.
ಪತಂಗ ಮತ್ತು ಚಿಟ್ಟೆಗಳಿಗೆ ಇರುವ ವ್ಯತ್ಯಾಸ:
ಹೆಚ್ಚಿನ ಪಂತಂಗಗಳು(ಮಾತ್,Moth)ನಿಶಾಚರಿಗಳಾಗಿದ್ದು ರಾತ್ರಿ ವೇಳೆ ಮಾತ್ರ ಸಂಚರಿಸುತ್ತವೆ. ಪರಿಸರದಲ್ಲಿ ಮಿಲನಗೊಂಡು ಎದ್ದು ಕಾಣದ ಬಣ್ಣಗಳು, ತೆಳ್ಳಗಿನ ದಾರದಂತಿರುವ ಮತ್ತು ಗರಿಗಳಂತಿರುವ ಆಂಟೆನಗಳು, ಆಹಾರ ಸೇವನೆಗೆ ಕೊಳವೆಯಾಕಾರದ ಪ್ರೊಬೋಸಿಸ್ ಒಳಗೊಂಡಿರುತ್ತವೆ. ಕೆಲವೊಂದು ಪ್ರಭೇದದ ಪತಂಗಗಳಲ್ಲಿ ಮಾತ್ರ ಇರುವುದಿಲ್ಲ. ಹೆಚ್ಚಿನ ಪ್ರಭೇದಗಳಲ್ಲಿ ಕಂಬಳಿ ಹುಳುಗಳ ಕೂದಲುಗಳು ಅಥವಾ ಮುಳ್ಳಿನ ಆಕಾರವನ್ನು ಹೊಂದಿರುತ್ತವೆ. ಕೆಲ ಪ್ರಭೇದಗಳು ಕಂಬಳಿ ಹುಳುಗಳು ಗುಂಪಾಗಿ ಇರುತ್ತವೆ. ರೇಷ್ಮೆಯಂತ ಗೂಡಿನೊಳಗೆ ಕೋಶಾವಸ್ಥೆಯನ್ನು (ಪೊರೆಹುಳು) ಕಳೆಯುತ್ತವೆ.
ಪತಂಗಗಳು ಪರಿಸರ ವ್ಯವಸ್ಥೆಯ ಆರೋಗ್ಯದ ನೈಸರ್ಗಿಕ ಸೂಚಕಗಳಾಗಿವೆ. ಅಲ್ಲದೆ ಬಾಂಬಿಕ್ಸ್ ಮೋರಿ ಪತಂಗಗಳು ತನ್ನ ರೇಷ್ಮೆಯ ಕೊಡುಗೆಯಿಂದಾಗಿ ಗ್ರಾಮೀಣ ಆರ್ಥಿಕತೆ ಮತ್ತು ನಗರಗಳ ಉದ್ಯೋಗ ಸೃಷ್ಟಿಗೆ ಬೆನ್ನೆಲುಬಾಗಿ ನಿಂತು ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡಿದೆ.
ರೇಷ್ಮೆ ಉತ್ಪಾದನೆಯಲ್ಲಿ ಭಾರತ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ. ಪತಂಗಗಳು ಬೆಳಕಿನೆಡೆಗೆ ಆಕರ್ಷಿತಗೊಳ್ಳುತ್ತವೆ. ರಾತ್ರಿಯ ವೇಳೆ ಸಂಚರಿಸಲು ಚಂದ್ರನ ಕಿರಣಗಳನ್ನು ಅವಲಂಬಿಸುತ್ತವೆ. ಇಂತಹ ಇರುಳಿನ ಸಂದರ್ಭಗಳಲ್ಲಿ ಮಾನವ ನಿರ್ಮಿತ ಬೆಳಕು ಪತಂಗಗಳನ್ನು ವಿಚಲಿತಗೊಳಿಸುತ್ತವೆ. ಇದರಿಂದ ಪತಂಗಗಳ ಆಹಾರದ ಹುಡುಕಾಟ, ಸಂತಾನೋತ್ಪತ್ತಿ, ಪರಾಗಸ್ಪರ್ಶ ದಂತ ಕ್ರಿಯೆಗಳಿಗೆ ಇದು ಅಡ್ಡಿಯಾಗಲಿದೆ.
ಬಹುತೇಕ ಜಾತಿಯ ಚಿಟ್ಟೆಗಳು (ಬಟರ್ ಫ್ಲೈ) ಹಗಲಿನಲ್ಲಿ ಚಟುವಟಿಕೆಯಿಂದ ಇರುತ್ತವೆ.ಅತ್ಯಾಕರ್ಷಕ ಬಣ್ಣ, ತೆಳ್ಳಗಿನ ದಾರದಂತಿರುವ ತುದಿಯಲ್ಲಿ ಗುಂಡಾಗಿರುವ ಆಂಟೆನಗಳು,ಆಹಾರ ಸೇವನೆಗೆ ಕೊಳವೆಯಾಕಾರದ ಪ್ರೊಬೋಸಿಸ್ ಹೊಂದಿರುತ್ತವೆ.ಕೋಶವು ಕಣ್ಣಿಗೆ ಕಾಣುವಂತೆ ಹೊರಗಿರುತ್ತವೆ.ಪರಾಗಸ್ಪರ್ಶ ಕ್ರಿಯೆಯಲ್ಲಿ ಪತಂಗಗಳ ಕೊಡುಗೆ ಮಹತ್ವದ್ದು ಮತ್ತು ಆಹಾರ ಸರಪಳಿಯ ಭಾಗವೂ ಹೌದು.
ಕ್ಷೀಣಿಸುತ್ತಿರುವ ಪತಂಗಗಳ ಸಂತತಿ; ಮಾನನಿರ್ಮಿತ ಬೆಳಕಿನ ಮಾಲಿನ್ಯ, ವೈವಿಧ್ಯಮಯ ಸಸ್ಯಗಳ ಕೊರತೆ, ಹವಾಮಾನ ಬದಲಾವಣೆ, ಏಕರೂಪ ಬೆಳೆ ಪದ್ಧತಿ, ಕಳೆ ಗಿಡಗಳ ನಾಶ ಮತ್ತು ರಾಸಾಯನಿಕಗಳ ಅತಿಯಾದ ಬಳಕೆ, ಕಾಡು ನಾಶ ಮತ್ತು ಕಾಡು ಬೆಟ್ಟಗಳಿಗೆ ಬೆಂಕಿ ಬೀಳುತ್ತಿರುವುದು, ನಗರೀಕರಣ, ಅರಿವು ಹಾಗೂ ವೈಜ್ಞಾನಿಕ ಅಧ್ಯಯನಗಳ ಕೊರತೆಗಳು ಸಹ ಪತಂಗಗಳ ಸಂತತಿ ಕ್ಷೀಣಿಸುತ್ತಿರುವುದಕ್ಕೆ ಕಾರಣವಾಗುತ್ತಿದೆ. ಇದರಿಂದ ಬೆಳೆಗಳ ಇಳುವರಿ ಕುಂಟಿ, ಕೀಟ ಪ್ರಪಂಚದ ಜೀವ ಸರಪಣಿಯು ಸಡಿಲವಾಗುತ್ತಿದೆ.
ಪರಿಸರದ ಉಳುವಿನಲ್ಲಿ ಪತಂಗಳ ಪಾತ್ರವು ಮಹತ್ವದ್ದಾಗಿದೆ. ಇವುಗಳ ಸಂತತಿಯ ಬೆಳವಣಿಗೆಗೆ ಅಗತ್ಯ ವಾತಾವರಣವನ್ನು ಸೃಷ್ಠಿಸುವುದು ಹಾಗೂ ಇವುಗಳ ಮಹತ್ವದ ಅರಿವನ್ನು ಜನರಲ್ಲಿ ಮೂಡಿಸಬೇಕಿದೆ. ಪತಂಗಳು ಸಹ ಪರಿಸರದಲ್ಲಿನ ಇತರೆ ಪ್ರಾಣಿ, ಪಕ್ಷಿ, ಕೀಟಗಳಷ್ಟೆ ಪ್ರಮುಖವಾಗಿವೆ.