ಚಿಕ್ಕಮಗಳೂರಿನಲ್ಲಿ ವಕೀಲ ಪ್ರೀತಂ ಅವರ ಮೇಲೆ ಹಲ್ಲೆ ಪ್ರಕರಣ: ತಪ್ಪಿತಸ್ಥ ಸಿಬ್ಬಂದಿಯನ್ನು ಬಂಧಿಸುವಂತೆ ಒತ್ತಾಯ: ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ

ಚಿಕ್ಕಮಗಳೂರಿನಲ್ಲಿ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೇ ಬಂದ ಯುವ ವಕೀಲ ಪ್ರೀತಂ ಅವರ ಮೇಲೆ ಪೊಲೀಸರು ಮನಸೋ ಇಚ್ಛೆ ಥಳಿಸಿ ಮಾರಣಾಂತಿಕ ಹಲ್ಲೆ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ  ತಪ್ಪಿತಸ್ಥ ಸಿಬ್ಬಂದಿಯನ್ನು ಬಂಧಿಸುವಂತೆ ಒತ್ತಾಯಿಸಿ ತಾಲ್ಲೂಕು ವಕೀಲರ ಸಂಘದಿಂದ ಶನಿವಾರ ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಯಿತು.

 ಪ್ರತಿಭಟನೆಯಲ್ಲಿ ಮಾತನಾಡಿದ ವಕೀಲರಾದ ಎ.ಕೃಷ್ಣಮೂರ್ತಿ, ಚಿಕ್ಕಮಗಳೂರಿನ ಯುವ ವಕೀಲ ಪ್ರೀತಂ ಅವರನ್ನು ಠಾಣೆಗೆ ಎಳೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯ. ಈ ಪ್ರಕರಣದಲ್ಲಿ ಕೊಲೆ ಆರೋಪದ ದೂರು ದಾಖಲಾಗಿದ್ದರು ಸಹ ಆರೋಪಿತರಾಗಿರುವ ಪೊಲೀಸ್ ಅಧಿಕಾರಿಗಳನ್ನು ಬಂಧಿಸದೆ ಇರುವುದು ತಾರತಮ್ಯದ ಧೋರಣೆಯಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಜನ ಸಾಮಾನ್ಯರಿಗೊಂದು ಕಾನೂನು, ಪೊಲೀಸರಿಗೊಂದು ಕಾನೂನು ಎನ್ನುವ ನಿಯಮ ಇಲ್ಲ. ಈ ದೇಶದ ಎಲ್ಲರಿಗೂ ಒಂದೇ ರೀತಿಯ ಕಾನೂನು ಪಾಲನೆಯಾಗಬೇಕು ಎನ್ನುವುದು ನಮ್ಮ ಸಂವಿಧಾನದ ಆಶಯವಾಗಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ರವಿ ಮಾವಿನಕುಂಟೆ ಮಾತನಾಡಿ, ಯಾವುದೇ ವ್ಯಕ್ತಿ ಹೆಲ್ಮೆಟ್ ಧರಿಸದೇ ಇದ್ದರೆ ಕಾನೂನು ರೀತಿಯಾಗಿ ದಂಡ ವಿಧಿಸಬೇಕೆ ವಿನಹ ಬೈಕ್ ಕೀ ಕಿತ್ತುಕೊಳ್ಳುವ ಅಥವಾ ಅವಾಚ್ಚವಾಗಿ ನಿಂಧಿಸುವ ಅಧಿಕಾರ ಪೊಲೀಸರಿಗೆ ಇಲ್ಲ. ಪ್ರೀತಂ ಅವರು ವಕೀಲರಾಗಿದ್ದ ಕಾರಣಕ್ಕೆ ಪೊಲೀಸರನ್ನು ಕಾನೂನು ಅಡಿಯಲ್ಲಿ ಪ್ರಶ್ನಿಸಿದ್ದಾರೆ. ಇಷ್ಟಕ್ಕೆ ಕೋಪಗೊಂಡಿರುವ ಪೊಲೀಸರು ಸರ್ವಾಧಿಕಾರಿಗಳಂತೆ ವರ್ತಿಸಿ ಹಲ್ಲೆ ನಡೆಸಿರುವುದು ಮಾನವ ಹಕ್ಕುಗಳ ಉಲ್ಲಂಘನೆಯು ಆಗಿದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಹಿರಿಯ ವಕೀಲ ರುದ್ರರಾಧ್ಯ ಮಾತನಾಡಿ, ಪೊಲೀಸರಿಂದ ಹಲ್ಲೆಗೆ ಒಳಗಾದ ವಕೀಲ ಪ್ರೀತಂ ಅವರ ಮೈ ಮೇಲೆ ಆಗಿರುವ ಗಂಭೀರ ಗಾಯಗಳನ್ನು ಗಮನಿಸಿದರೆ ಇದೊಂದು ಪೈಶಾಚಿಕ ಕೃತ್ಯವಾಗಿದೆ. ಪೊಲೀಸರು ಕಾನೂನು ರಕ್ಷಣೆಯ ಹೆಸರಲ್ಲಿ ನಡೆಸಿರುವ ಕ್ರೌರ್ಯವಾಗಿದೆ. ಈ ಕೌರ್ಯದ ವಿರುದ್ಧ ವಿವಿಧ ಐಪಿಸಿ ಕಲಂಗಳ ಅಡಿಯಲ್ಲಿ ದಾಖಲಾಗಿರುವ ದೂರಗಳಂತೆಯೇ ತಾರತಮ್ಯ ಇಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದರು.

ಪ್ರತಿಭಟನೆಯಲ್ಲಿ ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳು ಸೇರಿದಂತೆ ನೂರಾರು ಜನ ವಕೀಲರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *