ಕುಖ್ಯಾತ ಕಿಡ್ನಾಪರ್ಸ್ ಟಾರ್ಗೆಟ್ ಏನಿದ್ದರೂ ರಿಯಲ್ ಎಸ್ಟೇಟ್ ಕುಳಗಳು. ಉದ್ಯಮಿಗಳನ್ನೇ ಗುರಿಯಾಗಿಸಿಕೊಂಡು, ಕಿಡ್ನಾಪ್ ಮಾಡಿ ಅವರಿಂದ ಲಕ್ಷಾಂತ ರೂ. ಹಣ ವಸೂಲಿ ಮಾಡುತ್ತಿದ್ದ ಗ್ಯಾಂಗ್. ಹಣ ವಸೂಲಿ ಮಾಡಿ ಬೇರೆ ರಾಜ್ಯಗಳಿಗೆ ಹೋಗಿ ತಲೆ ಮರಿಸಿಕೊಳ್ಳುತ್ತಿದ್ದ ಗ್ಯಾಂಗ್ ಈಗ ಪೊಲೀಸರ ಅತಿಥಿಗಳಾಗಿದ್ದಾರೆ.
ಪೊಲೀಸ್ ಠಾಣೆಯ ಮುಂದೆ ಟೇಬಲ್ ಮೇಲೆ ಕಂತೆ ಕಂತೆ ಹಣದ ಕಟ್ಟುಗಳು, ಚಿನ್ನದ ಸರಗಳನ್ನು ಇಟ್ಟು ಆರೋಪಿಗಳ ತಲೆಗೆ ಟೋಪಿ ಹಾಕಿ ನಿಲ್ಲಿಸಿರುವ ದೃಶ್ಯಗಳು ಕಂಡು ಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಎಸ್ಪಿ ಕಚೇರಿಯ ಮುಂದೆ. ಹೌದು, ಉದ್ಯಮಿಗಳನ್ನ ಗುರಿಯಾಗಿಸಿಕೊಂಡು ಕಿಡ್ನಾಪ್ ಮಾಡಿ ಅವರಿಂದ ಲಕ್ಷಾಂತರ ರುಪಾಯಿ ಹಣ ವಸೂಲಿ ಮಾಡುತ್ತಿದ್ದ ಗ್ಯಾಂಗ್ ನ್ನು ಚಿಕ್ಕಬಳ್ಳಾಪುರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಜು.20 ರಂದು ಚಿಕ್ಕಬಳ್ಳಾಪುರದ ಲೇಔಟ್ ನಲ್ಲಿ ವಾಕಿಂಗ್ ಮಾಡುತ್ತಿದ್ದ ವೇಳೆ ನವೀನ್ ಕುಮಾರ್ ಮತ್ತು ಜೂ18 ರಂದು ಸಮೀವುಲ್ಲಾ ರನ್ನು ಕಿಡ್ನಾಪ್ ಮಾಡಲಾಗಿತ್ತು. ಇವರಿಂದ 78 ಲಕ್ಷ ಹಣವನ್ನ ವಸೂಲಿ ಮಾಡಲಾಗಿತ್ತು. ಈ ಪ್ರಕರಣ ಕುರಿತು ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚನೆ ಮಾಡಿ ಆರೋಪಿಗಳನ್ನು ಬಂಧನ ಮಾಡಲಾಗಿದೆ.
ಆರೋಪಿಗಳು ಬಹಳ ನಟೋರಿಯಸ್ ಇದ್ದ ಕಾರಣ, ಬಹಳ ನಾಜೂಕಾಗಿ ಆರೋಪಿಗಳಿಗಾಗಿ ಬಲೆ ಬೀಸಲಾಗಿತ್ತು. ಈ ಮೊದಲೇ ಬೇರೆ ಪೊಲೀಸ್ ಠಾಣೆಯ ಸಿಬ್ಬಂದಿ ಮೇಲೆ ಈ ಗ್ಯಾಂಗ್ ಅಟ್ಯಾಕ್ ಮಾಡಿತ್ತು. ಹಾಗಾಗಿ ಒಬ್ಬೊಬ್ಬರು ಒಂದು ಕಡೆ ತಲೆ ಮರೆಸಿಕೊಂಡಿದ್ದರು. ಕೆಲವು ಬೇರೆ ಬೇರೆ ರಾಜ್ಯಗಳಲ್ಲಿ ಅಡಗಿ ಕುಳಿತಿದ್ದರು. ಚಿಕ್ಕಬಳ್ಳಾಪುರ ಪೊಲೀಸರು ಈಗ ಆರೋಪಿಗಳನ್ನ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಬರ್ಕತ್ ವುಲ್ಲಾ, ಬೆಂಗಳೂರು ನಗರದ ಬಿಟಿಎಂ ಲೇಔಟ್ ನ ಲೋಹಿತ್ ಕುಮಾರ್, ಪ್ರವೀಣ ಅಲಿಯಾಸ್ ನೇಪಾಳಿ, ಕೋಲಾರದ ರಾಮಸಂದ್ರ ಸಂತೋಷ್, ಕೋಲಾರದ ಚಿನ್ನಾಪುರದ ವೆಂಕಟೇಶ್, ಬೆಂಗಳೂರಿನ ಎ.ಜೆ.ಕಾಲೋನಿಯ ಮಾರುತಿ ಪ್ರಸನ್ನ, ಬೆಂಗಳೂರಿನ ಹುಳಿಮಾವು ಭರತ್ ಕುಮಾರ್ ರನ್ನು ಪೊಲೀಸರು ಬಂಧಿಸಿದ್ದಾರೆ.
ಸದ್ಯ ಆರೋಪಿಗಳಿಂದ 41 ಲಕ್ಷ ರೂ, ನಗದು, ನಾಲ್ಕು ಕಾರು, ಒಂದು ಚಿನ್ನದ ಸರ, ವಿವಿಧ ಕಂಪನಿಯ ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಇವರ ಮೇಲೆ ಹೊರ ರಾಜ್ಯಗಳಲ್ಲಿಯೂ ಪ್ರಕರಣ ದಾಖಲಾಗಿದೆ. ಈ ಗ್ಯಾಂಗ್ ನ ಕೆಲವು ಸದಸ್ಯರು ಮಾಜಿ ಸಚಿವ ವರ್ತೂರ್ ಪ್ರಕಾಶ್ ಕಿಟ್ನಾಪ್ ಪ್ರಕರಣದಲ್ಲಿಯೂ ಭಾಗಿಯಾಗಿದ್ದು ಕಂಡು ಬಂದಿದೆ ಎನ್ನಲಾಗಿದೆ.
ಒಟ್ಟಾರೆ, ಉದ್ಯಮಗಳನ್ನೇ ಟಾರ್ಗೆಟ್ ಮಾಡಿ ಕಿಡ್ನಾಪ್ ಮಾಡುತ್ತಿದ್ದ ಗ್ಯಾಂಗ್ ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಇವರು ಇನ್ನಷ್ಟು ಜನರನ್ನು ಕಿಡ್ನಾಪ್ ಮಾಡುವ ಪ್ಲಾನ್ ಹೊಂದಿದ್ದರು. ಎಲ್ಲವನ್ನೂ ಈಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.