ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ವೆಂಕಟಗಿರಿಕೋಟೆ ನಿವಾಸಿಯೊಬ್ಬರು ತಮ್ಮ ಮನೆಯ ಶೌಚಾಲಯದ ಒಳಚರಂಡಿ ಸಂಪರ್ಕದ ಪೈಪ್ ಲೈನ್ ಬ್ಲಾಕ್ ಆಗಿರುವುದನ್ನು ಖಾಸಗಿ ವ್ಯಕ್ತಿಗಳಿಂದ ರಸ್ತೆಯಲ್ಲಿರುವ ಮಾನ್ ಹೋಲ್ ಒಳಗೆ ಇಳಿಸಿ ಸ್ವಚ್ಛಗೊಳಿಸಿರುವುದು ಬೆಳಕಿಗೆ ಬಂದಿದೆ.
2024ರ ಡಿ. 22ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು 2025ರ ಜ.6 ರಂದು ಚಿಂತಾಮಣಿ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಘಟನೆಯನ್ನು ಅಪರಿಚಿತರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಘಟನಾ ಸ್ಥಳಕ್ಕೆ ಚಿಂತಾಮಣಿ ನಗರಸಭೆ ಕಿರಿಯ ಆರೋಗ್ಯ ನಿರೀಕ್ಷಕರು ವಿಜಯ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ನಡೆಸಿದ ನಂತರ ಚಿಂತಾಮಣಿ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡುತ್ತಾರೆ. ದೂರಿನಲ್ಲಿ ಏನಿದೆ….?
ಮ್ಯಾನುಯಲ್ ಸ್ಕ್ಯಾವೆಂಜರ್ಗಳ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013 ರನ್ವಯ ಯಾರೊಬ್ಬ ಮನುಷ್ಯನನ್ನು ಮ್ಯಾನ್ ಹೋಲ್ ನಲ್ಲಿ ಇಳಿಸಿ ಸ್ವಚ್ಛಗೊಳಿಸುವುದು ಕಾನೂನಿನಂತೆ ಅಪರಾಧವಾಗಿರುತ್ತದೆ.
ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಆಧುನಿಕ ಯಂತ್ರಗಳು ನಗರಸಭೆಯಲ್ಲಿ ಲಭ್ಯವಿದ್ದು, ಮ್ಯಾನ್ ಹೋಲ್ ಹಾಗೂ ಒಳಚರಂಡಿ ಕಟ್ಟಿಕೊಂಡಿರುವ ಬಗ್ಗೆ ಕಚೇರಿಗೆ ಬರುವ ದೂರುಗಳನ್ನು ಸದರಿ ಯಂತ್ರಗಳಿಂದ ಸ್ವಚ್ಛಗೊಳಿಸಲಾಗುತ್ತಿದೆ. ಮ್ಯಾನ್ ಹೋಲ್ ನಲ್ಲಿ ಮನುಷ್ಯನನ್ನು ಇಳಿಸಿ ಸ್ವಚ್ಛಗೊಳಿಸಿರುವುದು ಕಾನೂನಿನಂತೆ ಅಪರಾಧ. ಈ ಕುರಿತು ಕರಪತ್ರ ವಿತರಣೆ ಹಾಗೂ ಧ್ವನಿವರ್ಧಕದ ಮೂಲಕ ಪ್ರಚಾರವನ್ನು ಕೈಗೊಳ್ಳಲಾಗಿರುತ್ತದೆ. ಹಾಗಿದ್ದರೂ ಸಹ ಕಚೇರಿಗೆ ದೂರು ನೀಡದೇ ವ್ಯಕ್ತಿಯೊಬ್ಬರು ತಮ್ಮ ಮನೆ ಮುಂಭಾಗದಲ್ಲಿ ಸ್ವಚ್ಛತೆ ಕೈಗೊಳ್ಳಲು ಅನಧಿಕೃತವಾಗಿ ಮನುಷ್ಯನನ್ನು ಮ್ಯಾನ್ ಹೋಲ್ ಗೆ ಇಳಿಸಿರುವುದು ಕಂಡು ಬಂದಿರುತ್ತದೆ.
ಸ್ಚಚ್ಛಗೊಳಿಸುವಂತೆ ಕಚೇರಿಗೆ ದೂರು ನೀಡಿದ್ದಲ್ಲಿ ಕಚೇರಿಯಲ್ಲಿ ಲಭ್ಯವಿರುವ ಸಕ್ಕಿಂಗ್ ಮತ್ತು ಜೆಟ್ಟಿಂಗ್ ಯಂತ್ರವನ್ನು ಬಳಸಿ ತುರ್ತಾಗಿ ಸ್ವಚ್ಛಗೊಳಿಸಲಾಗುತ್ತಿತ್ತು. ಆದರೆ ಕಚೇರಿ ಗಮನಕ್ಕೆ ತರದೇ ಮನುಷ್ಯನನ್ನು ಮ್ಯಾನ್ ಹೋಲ್ ಗೆ ಇಳಿಸಿರುವುದು ಅಪರಾಧವಾಗಿರುತ್ತದೆ.
ಇದು ಮ್ಯಾನುಯಲ್ ಸ್ಕ್ಯಾವೆಂಜರ್ಗಳ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013 ರನ್ವಯ ಅಪರಾಧವಾಗಿರುತ್ತದೆ, ಆದ್ದರಿಂದ ಮನೆ ಮಾಲೀಕರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಚಿಂತಾಮಣಿ ನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.