ಚಾಲಕನ ನಿಯಂತ್ರಣ ತಪ್ಪಿ‌ ಮಗುಚಿ ಬಿದ್ದ 407 ಗೂಡ್ಸ್ ವಾಹನ

ದೊಡ್ಡಬಳ್ಳಾಪುರ-ನೆಲಮಂಗಲ ರಸ್ತೆಯ ಮಧುರೆ ಹೋಬಳಿ 11ನೇ ಮೈಲಿಯ ಎಚ್.ಪಿ ಬಂಕ್ ಬಳಿ 407 ಗೂಡ್ಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ‌ ಮಗುಚಿ ಬಿದ್ದಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

ವೇಗವಾಗಿ ಎದುರು ಬರುತ್ತಿದ್ದ ಬೈಕ್ ತಪ್ಪಿಸಲು ಹೋಗಿ ಚಾಲಕನ‌ ನಿಯಂತ್ರಣ ತಪ್ಪಿ 407 ಗೂಡ್ಸ್ ವಾಹನ ಮುಗುಚಿ ಬಿದ್ದಿದೆ.

ದಾಬಸ್ ಪೇಟೆ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯ ಹುಲಿಕುಂಟೆ ಟೋಲ್ ತಪ್ಪಿಸಲು ಗೂಡ್ಸ್ ವಾಹನಗಳು ನೆಲಮಂಗಲ ರಸ್ತೆಯನ್ನು ಬಳಸುತ್ತಿವೆ.‌ ಇದರಿಂದ ವಾಹನ ದಟ್ಟಣೆ ಹೆಚ್ಚಾಗಿ ಅಪಘಾತಗಳ ಸಂಖ್ಯೆ ಏರುತ್ತಿದೆ. ರಸ್ತೆ ಅಗಲೀಕರಣ ಆಗಲಿಲ್ಲ. ಅಲ್ಲಲ್ಲಿ ಮೊಣಕಾಲುದ್ದ ಗುಂಡಿಗಳು ಹೀಗೆ ನಾನಾ ರೀತಿಯ ಸಮಸ್ಯೆಗಳು ಇವೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸದೇ ಸಂಬಂಧಪಟ್ಟವರು ಕಂಡು ಕಾಣದ ರೀತಿ ಇರುವುದರಿಂದ ಸಾರ್ವಜನಿಕರು ಸಾವು ನೋವು ಅನುಭವಿಸವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರಳು‌ಮಲ್ಲಿಗೆ ಗ್ರಾಮದಲ್ಲಿ ರಸ್ತೆ ಇಕ್ಕೆಲಗಳಲ್ಲಿ ಮನೆಗಳು ಇದ್ದು, ಭಾರೀ ಗಾತ್ರದ ವಾಹನಗಳು ಸುಗಮವಾಗಿ ಚಲಿಸಲು ಹರಸಾಹಸಪಡುತ್ತವೆ. ಎರಡು ಭಾರೀ ಗಾತ್ರದ ವಾಹನಗಳು ಏಕಕಾಲದಲ್ಲಿ ಬಂದರೆ ಟ್ರಾಫಿಕ್ ಜಾಮ್ ಉಂಟಾಗಿ ಗಂಟೆಗಟ್ಟಲೇ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆ ಜಾಗದಲ್ಲಿ ರಸ್ತೆ ಅಗಲೀಕರಣ ಆಗಬೇಕಾಗಿದೆ. ರಸ್ತೆಗುಂಡಿಗಳನ್ನು ಮುಚ್ಚಬೇಕು. ಭಾರೀ ಗಾತ್ರದ ವಾಹನಗಳನ್ನು ಹೊಸಕೋಟೆ-ದಾಬಸ್ ಪೇಟೆ ಹೆದ್ದಾರಿಯಲ್ಲಿ ಹೋಗುವಂತೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.

Leave a Reply

Your email address will not be published. Required fields are marked *

error: Content is protected !!