
ಪ್ರತಿ ವರ್ಷ ಚಳಿಗಾಲದಲ್ಲಿ ಬರುವ ಹಬ್ಬದಲ್ಲಿ, ಬೆಂಗಳೂರು ಮೆಡಿಕವರ್ ಆಸ್ಪತ್ರೆಗಳಲ್ಲಿ ಹೊಟ್ಟೆ ಸಂಬಂಧಿತ (ಗ್ಯಾಸ್ಟ್ರೋ) ಹೊರರೋಗಿ ವಿಭಾಗ (OPD) ಮತ್ತು ತುರ್ತು ಚಿಕಿತ್ಸಾ ಪ್ರಕರಣಗಳಲ್ಲಿ ಸುಮಾರು 20–25% ಏರಿಕೆ ಕಾಣಿಸುತ್ತಿದೆ. ವಿಶೇಷವಾಗಿ ಡಿಸೆಂಬರ್ನಿಂದ ಜನವರಿ ಮಧ್ಯವರೆಗೂ ಈ ಪ್ರವೃತ್ತಿ ಹೆಚ್ಚಾಗುತ್ತದೆ. ವೈದ್ಯರು ಈ ಸ್ಥಿತಿಯನ್ನು “ವಿಂಟರ್ ಪಾರ್ಟಿ ಸಿಂಡ್ರೋಮ್” ಎಂದು ಕರೆಯುತ್ತಾರೆ.
ಕರ್ನಾಟಕದ ಒಳಾಂಗಣ ಅಂಕಿಅಂಶಗಳ ಪ್ರಕಾರ, 18 ರಿಂದ 45 ವರ್ಷದ ವಯೋಮಾನದವರು ಆಸಿಡಿಟಿ, ಗ್ಯಾಸ್ಟ್ರೈಟಿಸ್ ಮತ್ತು ಆಸಿಡ್ ರಿಫ್ಲಕ್ಸ್ ಪ್ರಕರಣಗಳಲ್ಲಿ ಸುಮಾರು 60% ಪಾಲು ಹೊಂದಿದ್ದಾರೆ. ಇದರಲ್ಲಿ 55% ಪುರುಷರು ಮತ್ತು 45% ಮಹಿಳೆಯರು ಇದ್ದಾರೆ.
ರಾತ್ರಿ ತಡವಾಗಿ ಅತಿ ಹೆಚ್ಚು ಆಹಾರ ಸೇವಿಸೋದು ,ಎಣ್ಣೆಯುಕ್ತ ಅಥವಾ ಸಕ್ಕರೆಯುಕ್ತ ಆಹಾರ ಸೇವಿಸುವುದು ಮುಂದಿನ ದಿನ ತೀವ್ರವಾದ ಹೊಟ್ಟೆ ನೋವು, ಆಸಿಡಿಟಿ ಮತ್ತು ಹೊಟ್ಟೆ ಉಬ್ಬುವಿಕೆಯಾಗಿ ಪರಿಣಮಿಸುತ್ತಿದೆ.
ಇನ್ನೊಂದು ಗಂಭೀರ ಸಮಸ್ಯೆ ಎಂದರೆ ಮದ್ಯಪಾನದಿಂದ ಉಂಟಾಗುವ ಪ್ಯಾಂಕ್ರಿಯಾಟೈಟಿಸ್ (ಮೇದೋಜೀರಕ ಗ್ರಂಥಿಯ ಉರಿಯೂತ ). ವರ್ಷದ ಕೊನೆಯಲ್ಲಿ ನಡೆಯುವ ಪಾರ್ಟಿಗಳ ವೇಳೆ ಕಂಡುಬರುವ ಒಟ್ಟು ತೀವ್ರ ಪ್ಯಾಂಕ್ರಿಯಾಟೈಟಿಸ್ ಪ್ರಕರಣಗಳಲ್ಲಿ ಸುಮಾರು 30% ಮದ್ಯಪಾನದಿಂದ ಉಂಟಾಗುತ್ತಿದೆ. ಒಂದೇ ಬಾರಿ ಅತಿಯಾಗಿ ಮದ್ಯ ಸೇವಿಸಿದರೂ (ಮೇದೋಜೀರಕ ಗ್ರಂಥಿಗೆ ತೀವ್ರ ಹಾನಿ ಉಂಟಾಗಬಹುದು—ವಿಶೇಷವಾಗಿ ಫ್ಯಾಟಿ ಲಿವರ್, ಪಿತ್ತಕೋಶದಲ್ಲಿ ಕಲ್ಲು ಅಥವಾ ಹಿಂದಿನ ಪ್ಯಾಂಕ್ರಿಯಾಟೈಟಿಸ್ ಇತಿಹಾಸವಿರುವವರಲ್ಲಿ. ಇಂತಹ ರೋಗಿಗಳಿಗೆ ಹೊಟ್ಟೆಯಿಂದ ಬೆನ್ನಿನವರೆಗೂ ಹರಡುವ ತೀವ್ರ ನೋವು, ವಾಂತಿ ಮತ್ತು ಊಟ ಮಾಡಲು ಆಗದ ಸ್ಥಿತಿ ಕಾಣಿಸುತ್ತದೆ.
ಚಳಿಗಾಲದಲ್ಲಿ ಜೀರ್ಣಕ್ರಿಯೆ ನಿಧಾನಗೊಳ್ಳುತ್ತದೆ. ಗ್ಯಾಸ್ಟ್ರಿಕ್ ಚಲನೆಯು ಸುಮಾರು 15% ಕಡಿಮೆಯಾಗುತ್ತದೆ, ಇದರಿಂದ ಹೊಟ್ಟೆ ಭಾರವಾಗಿರುವ ಅನುಭವ ಉಂಟಾಗುತ್ತದೆ. ಇದರೊಂದಿಗೆ, ಚಳಿಗಾಲದಲ್ಲಿ ವೈರಲ್ ಸೋಂಕುಗಳ ಅಪಾಯವೂ ಹೆಚ್ಚಾಗುತ್ತದೆ, ಇದರಿಂದ ಅತಿಸಾರ, ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಳ್ಳಬಹುದು.
ವೈದ್ಯರ ಸಲಹೆ
ಮೆಡಿಕವರ್ ಆಸ್ಪತ್ರೆಯ ವೈದ್ಯರು ಸರಳ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಸಲಹೆ ನೀಡುತ್ತಾರೆ—
· ಕಡಿಮೆ ಪ್ರಮಾಣದಲ್ಲಿ ಊಟ ಮಾಡುವುದು
· ಮದ್ಯವನ್ನು ಸಕ್ಕರೆಯುಕ್ತ ಪಾನೀಯಗಳೊಂದಿಗೆ ಮಿಶ್ರಣ ಮಾಡದಿರುವುದು
· ಸಾಕಷ್ಟು ನೀರು ಕುಡಿಯುವುದು
· ಊಟ ಮತ್ತು ನಿದ್ರೆಯ ನಡುವೆ ಕನಿಷ್ಠ 2 ಗಂಟೆಗಳ ಅಂತರ ಇಡುವುದು
ಜೀರ್ಣಾಂಗ ಸಮಸ್ಯೆಗಳ ಇತಿಹಾಸವಿರುವವರು ವಿಶೇಷ ಎಚ್ಚರಿಕೆ ವಹಿಸಬೇಕು.
ವೈದ್ಯರ ಅಭಿಪ್ರಾಯ
“ಈ ಚಳಿಗಾಲದಲ್ಲಿ ನಾವು ಕಾಣುತ್ತಿರುವ ಹೆಚ್ಚಿನ ಪ್ರಕರಣಗಳು 20–40 ವಯೋಮಾನದವರಲ್ಲಿ ಕಂಡುಬರುತ್ತಿವೆ. ಸರಿಯಾದ ಸಮಯಕ್ಕೆ ಊಟ ಮಾಡದೇ ಇರುವುದು ಮತ್ತು ರಾತ್ರಿ ತಡವಾಗಿ ನಡೆಯುವ ಪಾರ್ಟಿಗಳು ಇದಕ್ಕೆ ಪ್ರಮುಖ ಕಾರಣ. ಊಟದ ಸಮಯವನ್ನು 2–3 ಗಂಟೆಗಳಷ್ಟು ಮುಂದೂಡುವುದರಿಂದ ದೇಹಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ಆಸಿಡಿಟಿ ಮತ್ತು ಹೊಟ್ಟೆ ಉಬ್ಬುವಿಕೆ ಉಂಟಾಗುತ್ತದೆ. ಸಕ್ಕರೆಯುಕ್ತ ಪಾನೀಯಗಳೊಂದಿಗೆ ಮದ್ಯ ಸೇವಿಸುವುದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಯುವ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ನಿದ್ರೆ, ನೀರಿನ ಸೇವನೆ ಮತ್ತು ಆಹಾರದ ಬಗ್ಗೆ ಹೆಚ್ಚು ಜಾಗರೂಕರಾಗಬೇಕು ಎಂದು ಡಾ. ಸಾಗರ್ ಜಿ, ಕನ್ಸಲ್ಟಂಟ್ ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್, ಮೆಡಿಕವರ್ ಆಸ್ಪತ್ರೆಗಳು, ಬೆಂಗಳೂರು ಹೇಳಿದರು.