ಚಳಿಗಾಲದ ಒಲಿಂಪಿಕ್ಸ್ 2026 ಕ್ರೀಡಾಕೂಟ: 10 ಸಾವಿರ ಕಾಂಡೋಮ್ ಗಳು ಕೇವಲ 3 ದಿನದಲ್ಲಿ ಖಾಲಿ: ಇನ್ನೂ ಹೆಚ್ಚಿನ ಕಾಂಡೋಮ್ ಗಳು ಬೇಕು ಎಂಬ ಬೇಡಿಕೆ

ಚಳಿಗಾಲದ ಒಲಿಂಪಿಕ್ಸ್ 2026 ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವವರಿಗಾಗಿ ಕ್ರೀಡಾಗ್ರಾಮದಲ್ಲಿ ಸರಬರಾಜು ಮಾಡಲಾಗಿದ್ದ ಬರೊಬ್ಬರಿ 10 ಸಾವಿರ ಕಾಂಡೋಮ್ ಗಳು ಕೇವಲ 3 ದಿನದಲ್ಲಿ ಖಾಲಿಯಾಗಿರುವ ಕುರಿತು ವರದಿಯಾಗಿದೆ.

ಇಟಲಿಯ ಮಿಲಾನ್-ಕೊರ್ಟಿನಾದಲ್ಲಿ ನಡೆಯುತ್ತಿರುವ 2026ರ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಕ್ರೀಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕ್ರೀಡಾಗ್ರಾಮಕ್ಕೆ ನೀಡಲಾಗಿದ್ದ ಸುಮಾರು 10 ಸಾವಿರ ಕಾಂಡೋಮ್ ಗಳು ಕೇವಲ ಮೂರೇ ದಿನದಲ್ಲಿ ಖಾಲಿಯಾಗಿವೆ. ಅಲ್ಲದೆ ಇನ್ನೂ ಹೆಚ್ಚಿನ ಕಾಂಡೋಮ್ ಗಳು ಬೇಕು ಎಂಬ ಬೇಡಿಕೆ ಕೂಡ ವ್ಯಾಪಕವಾಗಿದೆ.

ಈ ವಿಲಕ್ಷಣ ಬೇಡಿಕೆ ಕ್ರೀಡಾಕೂಟದ ಆಯೋಜಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಚಳಿಗಾಲದ ಒಲಿಂಪಿಕ್ಸ್ ಇತಿಹಾಸದಲ್ಲಿ ಇಷ್ಟು ವೇಗವಾಗಿ ಕಾಂಡೋಮ್‌ಗಳು ಖಾಲಿಯಾಗಿರುವುದು ಇದೇ ಮೊದಲು ಎನ್ನಲಾಗಿದೆ.

ಕ್ರೀಡಾ ಗ್ರಾಮದಲ್ಲಿ ಸುಮಾರು 2,900 ಅಥ್ಲೀಟ್‌ಗಳು ಸೇರಿ 4 ಸಾವಿರಕ್ಕೂ ಅಧಿಕ ಮಂದಿ ಉಳಿದುಕೊಂಡಿದ್ದು, 2026ರ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ 92 ದೇಶಗಳಿಂದ 2,900ಕ್ಕೂ ಹೆಚ್ಚು ಕ್ರೀಡಾಪಟುಗಳು 116 ಸ್ಪರ್ಧೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಎಲ್ಲಾ ಸ್ಪರ್ಧಿಗಳಲ್ಲಿ 47% ಮಹಿಳೆಯರು ಇದ್ದಾರೆ. ಇದು ಚಳಿಗಾಲದ ಕ್ರೀಡಾಕೂಟದ ಇತಿಹಾಸದಲ್ಲಿ ಅತ್ಯಧಿಕ ಶೇಕಡಾವಾರು ಪ್ರಮಾಣವಾಗಿದೆ ಎಂದು ಹೇಳಲಾಗಿದೆ.

ಅವರಿಗಾಗಿ ಸುಮಾರು 9,700 ಪ್ಯಾಕೆಟ್‌ಗಳನ್ನು ಮೊದಲ ಹಂತದಲ್ಲಿ ಪೂರೈಸಲಾಗಿತ್ತು. ಆದರೆ, ಅಥ್ಲೀಟ್‌ಗಳ ಅತಿಯಾದ ಬೇಡಿಕೆಯಿಂದಾಗಿ ಮೂರು ದಿನಗಳಲ್ಲಿ ಬಾಕ್ಸ್‌ಗಳು ಖಾಲಿಯಾಗಿವೆ. ಆದರೆ ಈ ಅನಿರೀಕ್ಷಿತ ಬೆಳವಣಿಗೆ ಸಂಘಟಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅಧಿಕಾರಿಗಳು ಅನಿರೀಕ್ಷಿತ ಕಾಂಡೋಮ್ ಕೊರತೆಯನ್ನು ನೀಗಿಸಲು ಪರದಾಡುವಂತಾಗಿದೆ.

ಮೂಲಗಳ ಪ್ರಕಾರ 2024ರ ಪ್ಯಾರಿಸ್ ಒಲಿಂಪಿಕ್ಸ್ ಗೆ ಹೋಲಿಸಿದರೆ ಮಿಲನ್‌ನಲ್ಲಿ ಪೂರೈಕೆ ಪ್ರಮಾಣ ತೀರಾ ಕಡಿಮೆ ಇತ್ತು ಎಂದು ವಿಶ್ಲೇಷಿಸಲಾಗುತ್ತಿದೆ. ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 10,500 ಅಥ್ಲೀಟ್‌ಗಳಿಗೆ ಸುಮಾರು 3 ಲಕ್ಷ ಕಾಂಡೋಮ್ ವಿತರಿಸಲಾಗಿತ್ತು.

ಹೀಗಾಗಿ ಪೂರೈಕೆ ಕಡಿಮೆಯಾಗಿದ್ದರಿಂದ ಅಥ್ಲೀಟ್‌ಗಳ ಗ್ರಾಮವಾದ ‘ಕೊರ್ಟಿನಾ ಡಿ ಅಂಪೆಝೊ’ದಲ್ಲಿ ಈಗ ಕಾಂಡೋಮ್‌ಗಳಿಗೆ ವ್ಯಾಪಕ ಬೇಡಿಕೆ ಸೃಷ್ಟಿಯಾಗಿದೆ.

ಅತ್ತ ಕ್ರೀಡಾಗ್ರಾಮದಲ್ಲಿ ಕಾಂಡೋಮ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಲೇ ಶೀಘ್ರದಲ್ಲೇ ಹೊಸ ಸ್ಟಾಕ್ ತರಿಸಲಾಗುವುದು ಮತ್ತು ಕ್ರೀಡಾಕೂಟ ಮುಗಿಯುವವರೆಗೆ ಯಾವುದೇ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮಿಲನ್ ಒಲಿಂಪಿಕ್ಸ್ ಸಂಘಟನಾ ಸಮಿತಿ ತಿಳಿಸಿತ್ತು. ಅದರಂತೆ ಇದೀಗ ಕ್ರೀಡಾಗ್ರಾಮಕ್ಕೆ ಸುಮಾರು 1 ಲಕ್ಷ ಕಾಂಡೋಮ್ ಗಳನ್ನು ತರಿಸಲಾಗಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.

ಇದೇ ವಿಚಾರವಾಹಗಿ ಮೊದಲ ಬಾರಿಗೆ ಮೌನ ಮುರಿದಿರುವ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (IOC), ನಿರೀಕ್ಷೆಗಿಂತ ಹೆಚ್ಚಿನ ಬೇಡಿಕೆಯಿಂದಾಗಿ ಪೂರೈಕೆಯಾಗಿದ್ದ ಸ್ಟಾಕ್ ಖಾಲಿಯಾಗಿದೆ. ಅಂತೆಯೇ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕ್ರೀಡಾಕೂಟದ ಅಂತ್ಯದವರೆಗೆ ನಿರಂತರವಾಗಿ ಮರುಪೂರಣ ಮಾಡಲು ಯೋಜಿಸಲಾಗಿದೆ. ಕ್ರೀಡಾ ಗ್ರಾಮದಲ್ಲಿ ಪ್ರೇಮಿಗಳ ದಿನವನ್ನು ಭರ್ಜರಿಯಾಗಿ ಆಚರಿಸಲಾಗುತ್ತಿದೆ. ನಾನು ಅದಕ್ಕೆ ಹೆಚ್ಚಿನದನ್ನು ಸೇರಿಸಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಐಒಸಿ ವಕ್ತಾರ ಮಾರ್ಕ್ ಆಡಮ್ಸ್ ತಿಳಿಸಿದ್ದಾರೆ.

ಒಲಿಂಪಿಕ್ ಕ್ರೀಡಾ ಗ್ರಾಮದಲ್ಲಿ ಅಥ್ಲೀಟ್‌ಗಳ ಆರೋಗ್ಯ ಮತ್ತು ಸುರಕ್ಷಿತ ಲೈಂಗಿಕತೆಗಾಗಿ ಉಚಿತವಾಗಿ ಕಾಂಡೋಮ್ ವಿತರಿಸುವ ಸಂಪ್ರದಾಯ 1988ರ ಸಿಯೋಲ್ ಒಲಿಂಪಿಕ್ಸ್‌ನಿಂದ ನಡೆದುಕೊಂಡು ಬಂದಿದೆ. ಕ್ರೀಡಾಕೂಟದ ಒತ್ತಡದ ನಡುವೆ ಅಥ್ಲೀಟ್‌ಗಳ ದೈಹಿಕ ಆರೋಗ್ಯ ಕಾಪಾಡುವುದು ಇದರ ಮುಖ್ಯ ಉದ್ದೇಶ. ಕಾಂಡೋಮ್‌ಗಳಿಗೆ ಹೆಚ್ಚಿನ ಬೇಡಿಕೆ ಇರುವುದು ನಿಜ.

Leave a Reply

Your email address will not be published. Required fields are marked *

error: Content is protected !!