ರಾಜ್ಯಾದ್ಯಂತ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಉಲ್ಬಣಗೊಂಡ ಹಿನ್ನೆಲೆ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿಯ ದನಗಳ ಜಾತ್ರೆಗೆ ಸೇರಿದ್ದ ಜಾನುವಾರುಗಳನ್ನು ಜಿಲ್ಲಾಡಳಿತದ ಆದೇಶದ ಮೇರೆಗೆ ವಾಪಸ್ ಕಳುಹಿಸಲಾಯಿತು.
ಪೊಲೀಸ್ ಬಿಗಿ ಭದ್ರತೆಯಲ್ಲಿ ಪಶು ಇಲಾಖೆ ಅಧಿಕಾರಿಗಳು, ವೈದ್ಯರು, ತೂಬಗೆರೆ ಹೋಬಳಿ ಉಪತಹಶೀಲ್ದಾರ್, ಘಾಟಿಕ್ಷೇತ್ರದ ಸಿಬ್ಬಂದಿ ರೈತರಿಗೆ ತಿಳಿ ಹೇಳಿ ಆಟೋ ಪ್ರಚಾರ ಮಾಡಿ ರಾಸುಗಳೊಂದಿಗೆ ರೈತರನ್ನು ಹಿಂದಕ್ಕೆ ಕಳುಹಿಸಲಾಯಿತು.
ಜ.31ರವರೆಗೆ ಜಾನುವಾರು ಜಾತ್ರೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರೂ ರೈತರು ಸ್ವಯಂಪ್ರೇರಿತವಾಗಿ ಪೆಂಡಾಲ್ ಹಾಕಿ ಜಾನುವಾರು ಕರೆತಂದಿದ್ದರು. ಕಳೆದ ಮೂರು ದಿನಗಳಿಂದ ಜಾನುವಾರು ಕರೆತರದಂತೆ ಪಶು ವೈದ್ಯರು, ಅಧಿಕಾರಿಗಳು ಮನವಿ ಮಾಡಿದ್ದರೂ ರೈತರು ಪಟ್ಟು ಸಡಿಲಿಸಿರಲಿಲ್ಲ. ಜಿಲ್ಲಾಡಳಿತದ ಸೌಕರ್ಯ ನಮಗೆ ಬೇಡ, ರಾಸುಗಳನ್ನು ಮಾರಾಟ ಮಾಡಲು ಅವಕಾಶ ಕೊಡಬೇಕೆಂಬುದು ರೈತರ ವಾದವಾಗಿತ್ತು.
ಮಾಧ್ಯಮದವರೊಂದಿಗೆ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಶು ಇಲಾಖೆ ಉಪ ನಿರ್ದೇಶಕ ಡಾ.ಜಿ.ಎಂ.ನಾಗರಾಜ್ ಅವರು, ಗ್ರಾಮಾಂತರ ಜಿಲ್ಲೆಯಲ್ಲಿ 1 ಲಕ್ಷ 62 ಸಾವಿರ ರಾಸುಗಳಿವೆ, ಚರ್ಮಗಂಟು ರೋಗ ತಡೆಗಟ್ಟಲು ರೈತರ ಮನೆ ಮನೆಗೆ ತೆರಳಿ ರಾಸುಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ರೋಗಲಕ್ಷಣಗಳು ಕಂಡುಬಂದಲ್ಲಿ ಲಸಿಕೆ ನೀಡಲಾಗುತ್ತಿದೆ. ಚರ್ಮಗಂಟು ರೋಗದಿಂದ ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 204 ರಾಸುಗಳು ಸಾವನ್ನಪ್ಪಿವೆ. ಆದ್ದರಿಂದ ಜಾನುವಾರುಗಳ ಆರೋಗ್ಯದ ಹಿತದೃಷ್ಟಿಯಿಂದ ಈ ದನಗಳ ಜಾತ್ರೆಗೆ ಇಲಾಖೆಯಿಂದ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದರು.
ರೋಗ ಪೀಡಿತ ರಾಸುವಿನ ಮೇಲೆ ಕುಳಿತ ನೊಣ ಆರೋಗ್ಯಯುತ ರಾಸುವಿನ ಮೇಲೆ ಕುಳಿತರೆ ತಕ್ಷಣ ಆ ರಾಸುವಿಗೂ ಕಾಯಿಲೆ ಬರುತ್ತದೆ, ಗಾಳಿ, ನೀರು, ಮೇವು, ಸೊಳ್ಳೆಗಳಿಂದಲೂ ರೋಗ ಹರಡುತ್ತದೆ. ಈಗಾಗಲೇ ಈ ಜಾತ್ರೆಯಲ್ಲಿ ನಾಲ್ಕೈದು ಜೊತೆ ರಾಸುಗಳಲ್ಲಿ ಚರ್ಮಗಂಟು ರೋಗ ಕಂಡುಬಂದಿದೆ. ಇದು ಇನ್ನೂ ಹೆಚ್ಚು ಹಬ್ಬಿ ರಾಸುಗಳಿಗೆ ಬಾಧಿಸುವುದು ಬೇಡ ಎಂದು ಈ ಜಾತ್ರೆಗೆ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದರು.
ರೈತರ ಸ್ವಯಂಪ್ರೇರಿತ ದನಗಳ ಜಾತ್ರೆ ಪ್ರಾರಂಭವಾಗಿ ಮೂರ್ನಾಲ್ಕು ದಿನಗಳ ಬಳಿಕ ಇಂದು ಅಧಿಕಾರಿಗಳು ಸ್ಥಳಕ್ಕೆ ಬಂದು ಜಾಗ ಖಾಲಿ ಮಾಡುವಂತೆ ರೈತರಿಗೆ ಸೂಚಿಸಿದಾಗ ರೈತರಿಗೆ ದಿಕ್ಕು ತೋಚದಂತಾಗಿ ಪರದಾಡಿದರು. ಬೇರೆ ಬೇರೆ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ರೈತರು ರಾಸುಗಳನ್ನು ಸಾವಿರಾರು ರೂಪಾಯಿ ಖರ್ಚು ಮಾಡಿ ಕರೆತಂದಿದ್ದರು.
ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಜಾನುವಾರು ಜಾತ್ರೆ ಜ.16ರಿಂದಲೇ ರೈತರು ಜಾನುವಾರು ಕರೆತರಲು ಬಿಟ್ಟು ಶುಕ್ರವಾರ ಏಕಾಏಕಿ ರೈತರನ್ನು ತೆರವು ಮಾಡಿದ ಜಿಲ್ಲಾಡಳಿತದ ಕ್ರಮ ರೈತರ ಟೀಕೆಗೆ ಗುರಿಯಾಗಿದೆ. ಜಾನುವಾರು ನಿಷೇಧ ಹೇರಿದ್ದ ಜಿಲ್ಲಾಡಳಿತ ಅರಂಭದಲ್ಲೇ ರಾಸುಗಳಿಗೆ ನಿರ್ಬಂಧ ಹೇರಬೇಕಿತ್ತು. ಸಾವಿರಾರು ರೂಪಾಯಿ ಖರ್ಚುಮಾಡಿ ದೂರದಿಂದ ಬಂದ ರೈತರನ್ನು ಜಾತ್ರೆ ಮುಕ್ತಾಯಕ್ಕೆ ಎರಡು ದಿನ ಇರುವಂತೆ ವಾಪಸ್ ಕಳುಹಿಸುತ್ತಿರುವುದು ಸರಿಯಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರೈತರಿಗೆ ಸಾವಿರಾರು ರೂಪಾಯಿ ನಷ್ಟವಾಗಿದೆ. ಜೊತೆಗೆ ರೋಗವು ಹಬ್ಬುವಂತಾಗಿದೆ ಎಂದು ರೈತರು ಟೀಕಿಸಿದ್ದಾರೆ.