ಚರ್ಚ್‌ಸ್ಟ್ರೀಟ್‌ನನ್ನು ಕಸಮುಕ್ತ ರಸ್ತೆಯನ್ನಾಗಿಸಲು ಸ್ಥಳೀಯ ನಿವಾಸಿಗಳು, ವ್ಯಾಪಾರಸ್ಥರ ಸಭೆ ಆಯೋಜನೆ

ಬೆಂಗಳೂರು: ಬೆಂಗಳೂರಿನ ಸಾಂಪ್ರದಾಯಕ ಬೀದಿಗಳಲ್ಲಿ ಒಂದಾದ ಚರ್ಚ್‌ಸ್ಟ್ರೀಟ್‌ನನ್ನು ಕಸಮುಕ್ತ ರಸ್ತೆಯನ್ನಾಗಿಸುವ ಮಹತ್ವಾಕಾಂಕ್ಷೆಯಿಂದ ಅನ್‌ಬಾಕ್ಸಿಂಗ್‌ಬಿಎಲ್‌ಆರ್‌ ಫೌಂಡೇಷನ್‌ “ಫೇಸ್‌ಲಿಫ್ಟ್”‌ ಯೋಜನೆಯ ಭಾಗವಾಗಿ ಸಮಗ್ರ ಕಸ ನಿರ್ವಹಣೆ ಮಾಡಲು ಆ ಭಾಗದ ಪ್ರಮುಖ ನಿವಾಸಿಗಳು, ವ್ಯಾಪಾರಸ್ಥರ ಸಭೆ ನಡೆಸಿತು.

ಚರ್ಚ್‌ಸ್ಟ್ರೀಟ್‌ನಲ್ಲಿರುವ ವ್ಯಾಪಾರ, ಅಂಗಡಿ ಮಾಲೀಕರು, ಸಂಚಾರ ಪೊಲೀಸರು ಮತ್ತು ಬಿಬಿಎಂಪಿ ಆರೋಗ್ಯಾಧಿಕಾರಿಗಳು, ನಿವಾಸಿಗಳು ಸೇರಿದಂತೆ ಆ ಭಾಗದಲ್ಲಿ ನೆಲೆಸಿರುವ ಎಲ್ಲಾ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರನ್ನು ಒಟ್ಟುಗೂಡಿಸಿ ಸಭೆ ನಡೆಸಲಾಯಿತು. ಚರ್ಚ್‌ಸ್ಟ್ರೀಟ್‌ ಪ್ರತಿದಿನ ಉತ್ಪತ್ತಿಯಾಗುವ 5000 ಕೆಜಿ ತ್ಯಾಜ್ಯವನ್ನು ಯಾವ ರೀತಿ ನಿರ್ವಹಣೆ ಮಾಡಬೇಕು ಎಂಬುದರ ಸಂಪೂರ್ಣ ವಿವರಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.

ಅನ್‌ಬಾಕ್ಸಿಂಗ್‌ ಬಿಎಲ್‌ಆರ್‌ ಫೌಂಡೇಷನ್‌ ಚರ್ಚ್‌ಸ್ಟ್ರೀಟ್‌ನ ನಿರ್ವಹಣೆಗಾಗಿ ಅನುದಾನ ಮೀಸಲಿಟ್ಟಿದ್ದು, ಇದರ ಭಾಗವಾಗಿ ಕಸ ನಿರ್ವಹಣೆ ಮೊದಲ ಆದ್ಯತೆಯಿಂದ ಕೆಲಸ ಮಾಡಲಾಗುತ್ತಿದೆ. ಇದರ ಜೊತೆಗೆ, ಚರ್ಚ್‌ಸ್ಟ್ರೀಟ್‌ನಲ್ಲಿ ಹಾನಿಗೊಳಗಾದ ದಾರಿದೀಪ ಸಹ ಸರಿಪಡಿಸುವುದು, ರಸ್ತೆಬದಿಯಲ್ಲಿರುವ ಸಸಿಗಳ ಹಾಗೂ ಪಾರ್ಕ್‌ಗಳ ನಿರ್ವಹಣೆ ಸೇರಿದಂತೆ ಕೆಲವು ಸಿವಿಲ್ ಕೆಲಸವನ್ನು ಪೂರ್ಣಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದೆ. 2025 ರ ಜನವರಿಯ ಆರಂಭದೊಳಗೆ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡು ಸುಂದರ ರಸ್ತೆಯಾಗಿ ಹೊರಹೊಮ್ಮಲು ಚರ್ಚ್‌ಸ್ಟ್ರೀಟ್‌ ಸಿದ್ಧಗೊಳ್ಳುತ್ತಿದೆ.

ಈ ಕುರಿತು ಮಾತನಾಡಿದ ಶಾಸಕ ಎನ್‌.ಎ. ಹ್ಯಾರಿಸ್, ಚರ್ಚ್‌ಸ್ಟ್ರೀಟ್‌ನನ್ನು ಸುಂದರ ಬೀದಿಯನ್ನಾಗಿ ಮಾಡುವ ನಿಟ್ಟಿನಲ್ಲಿ ನಡೆಯುತ್ತಿರುವ ಕೆಲಸ ಪ್ರಶಂಸನೀಯ. ಇದಕ್ಕೆ ಸಂಬಂಧಪಟ್ಟ ನಿವಾಸಿಗಳು, ವಾಣಿಜ್ಯ ಸಂಘ ಸಂಸ್ಥೆಗಳು ಮತ್ತು ಸರ್ಕಾರ ಸಹಕಾರದೊಂದಿಗೆ ಈ ಯೋಜನೆ ಯಶಸ್ಸಿನತ್ತ ಸಾಗುತ್ತಿದೆ. ನಮ್ಮ ಪಾರಂಪರಿಕ ರಸ್ತೆಯನ್ನು ಕಾಪಾಡಿಕೊಳ್ಳುವುದು ಹಾಗೂ ಸುಂದರವಾಗಿ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಕಬ್ಬನ್ ಪಾರ್ಕ್‌ನ ಸಂಚಾರ ನಿರೀಕ್ಷಕ ವಿನೋದ್ ಮಾತನಾಡಿ, ಚರ್ಚ್ ಸ್ಟ್ರೀಟ್‌ನಲ್ಲಿ ನೀರಿನ ಟ್ಯಾಂಕರ್‌ಗಳು ಕಳೆಯುವ ಸಮಯವನ್ನು ಕಡಿಮೆ ಮಾಡಲು ವ್ಯಾಪಾರ ಮಾಲೀಕರಿಗೆ ಸಲಹೆ ನೀಡಲಾಗಿದೆ. ರಸ್ತೆಯಲ್ಲಿ ಭಾರೀ ವಾಹನ ಓಡಾಡುವುದನ್ನು ನಿಯಂತ್ರಿಸುವುದು, ನೋ ಪಾರ್ಕಿಂಗ್ ವಲಯದಲ್ಲಿ ವಾಹನ ನಿಲುಗಡೆ ಮಾಡದಂತೆ ಸುಗಮ ಸಂಚಾರವನ್ನು ಕಾಪಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಬಿಬಿಎಂಪಿ ಆರೋಗ್ಯ ನಿರೀಕ್ಷಕ ರಮೇಶ್‌ ಆರ್‌ ಮಾತನಾಡಿ, ತ್ಯಾಜ್ಯ ವಿಂಗಡಿಸದೇ ಸಾಕಷ್ಟು ಕಸ ಬರುತ್ತಿರುವುದರಿಂದ ಕಸ ವಿಲೇವಾರಿ ಮಾಡುವುದೇ ಸವಾಲಾಗಿದೆ. ಜೊತೆಗೆ, ಕಸ ಸಂಗ್ರಹಿಸುವ ವಾಹನ ಬಾರದೆ ಇರುವುದರಿಂದಲೂ ದಿನವಿಡೀ ತ್ಯಾಜ್ಯ ಫುಟ್‌ಪಾತ್‌ನಲ್ಲಿಯೇ ಉಳಿಯುತ್ತಿರುವ ದೂರು ಕೇಳಿಬರುತ್ತಿದೆ. ಈ ಎಲ್ಲದರ ಬಗ್ಗೆ ಕ್ರಮಕೈಗೊಳ್ಳಲಾಗುತ್ತಿದೆ. ಜೊತೆಗೆ ಇಲ್ಲಿನ ನಿವಾಸಿಗಳಿಗೆ ತ್ಯಾಜ್ಯ-ನಿರ್ವಹಣೆಯ ಅಭ್ಯಾಸವನ್ನು ಬದಲಿಸಲು ಸಹ ಸಲಹೆ ನೀಡಿದ್ದೇವೆ ಎಂದರು.

ಅನ್‌ಬಾಕ್ಸಿಂಗ್‌ಬಿಎಲ್‌ಆರ್ ಫೌಂಡೇಶನ್‌ ಸಿಇಒ ಮಾಲಿನಿ ಗೋಯಲ್ ಮಾತನಾಡಿ, ಚರ್ಚ್‌ಸ್ಟ್ರೀಟ್‌ನನ್ನು ಸುಂದರಗೊಳಿಸಲು ಸಾಕಷ್ಟು ಶ್ರಮವಹಿಸುತ್ತಿದ್ದೇವೆ, ನಮ್ಮೊಂದಿಗೆ ಇಲ್ಲಿಯೇ ವಾಸಿಸುವ ಜನರು ಹಾಗೂ ವ್ಯಾಪಾರಸ್ಥರು ಸಹಕಾರ ನೀಡಿದರೆ, ಈ ರಸ್ತೆ ಸುಂದರಮಯವಾಗಿ ಕಂಗೊಳಿಸುವುದರಲ್ಲಿ ಅನುಮಾನವಿಲ್ಲ. ನಮ್ಮ ಪ್ರಯತ್ನಕ್ಕೆಎಲ್ಲರ ಬೆಂಬಲ ಸಿಗುತ್ತಿರುವುದು ಸಹ ಸಂತಸ ತಂದಿದೆ ಎಂದರು.

Leave a Reply

Your email address will not be published. Required fields are marked *

error: Content is protected !!