ಚಂದ್ರಯಾನ -3 ಯಶಸ್ವಿಯಾಗಲೆಂದು ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ

 

ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿಡಲು ಇನ್ನೇನು ಕೆಲವೇ ಗಂಟೆಗಳು ಬಾಕಿಯಿದ್ದು ಸುರಕ್ಷಿತವಾಗಿ ಯಶಸ್ವಿಯಾಗಲೆಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ದಕ್ಷಿಣ ಕಾಶಿ ಎಂದು ಪ್ರಸಿದ್ಧಿಯಾದ ಶಿವಗಂಗೆ ಶ್ರೀ ಗಂಗಾಧರೇಶ್ವರ ಹಾಗೂ ಹೊನ್ನಾದೇವಿ ದೇವಾಲಯದಲ್ಲಿ ಇಸ್ರೋ ಸಂಸ್ಥೆ ಹಾಗೂ ಚಂದ್ರಯಾನ – 3 ಹೆಸರಿನಲ್ಲಿ ಜಗದೀಶ್ ಚೌದರಿ, ಮುರುಳಿಗೌಡ ನೇತೃತ್ವದಲ್ಲಿ ಅರ್ಚನೆ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು.

ತಾಲೂಕಿನ ಬಿಜೆಪಿ ಉಪಾಧ್ಯಕ್ಷ ಜಗದೀಶ್ ಚೌಧರಿ ಮಾತನಾಡಿ, ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡಿಂಗ್ ಆಗಲಿ ಎಂದು ಸಂಕಲ್ಪ ಮಾಡಿದ್ದೇವೆ, 3.84ಲಕ್ಷ ಕಿಲೋಮೀಟರ್ ದೂರದಲ್ಲಿ ಇಸ್ರೋ ತನ್ನ ಸಾಧನೆಯನ್ನು ಹಲವಾರು ವರ್ಷಗಳಿಂದ ಮಾಡುತ್ತಾ ಬಂದಿದೆ, ಈ ಸಾರಿ 41 ದಿನದ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಪ್ರಾರ್ಥಿಸಿದ್ದೇವೆ, ತಾಲೂಕಿನ ದಕ್ಷಿಣಕಾಶಿ ಶಿವಗಂಗೆ ಐತಿಹಾಸಿಕ ಕ್ಷೇತ್ರದಲ್ಲಿ ಹರಕೆ ಈಡೇರಲಿ, ಚಂದ್ರಯಾನ-3 ಯಶಸ್ಸು ಕಾಣಲಿ ಎಂಬುದೇ ನಮ್ಮ ಉದ್ದೇಶ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಘಟಕದ ಹೋಬಳಿ ಅಧ್ಯಕ್ಷ ಕೆಂಗಲ್ ಕೆಂಪೋಹಳ್ಳಿ ಮುರುಳೀಧರ್(ಮಧು), ರುದ್ರಣ್ಣ, ಅರ್ಚಕರಾದ ರಾಜು ದೀಕ್ಷಿತ್, ಶ್ರೀಧರ್ ದೀಕ್ಷೀತ್, ಕಾರ್ತಿಕ್ ದೀಕ್ಷಿತ್, ಗುಂಡ ದೀಕ್ಷಿತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *