ಘಾಟಿ ಭಾರೀ ದನಗಳ ಜಾತ್ರೆಗೆ ಜಿಲ್ಲಾಡಳಿತದಿಂದ ನಿಷೇಧ; ಸ್ವಯಂಪ್ರೇರಿತರಾಗಿ ಜಾತ್ರೆಗೆ ದನಗಳನ್ನ ತರುತ್ತಿರುವ ರೈತರು

ಚರ್ಮಗಂಟು ರೋಗ ಉಲ್ಬಣಗೊಂಡಿರುವ ಹಿನ್ನೆಲೆ ಪಶುಗಳ ಆರೋಗ್ಯ ದೃಷ್ಟಿಯಿಂದ ಹಾಗೂ ಚರ್ಮಗಂಟು ರೋಗ ತಡೆಯುವ ಉದ್ದೇಶದಿಂದ ಜಿಲ್ಲಾಡಳಿತ ವತಿಯಿಂದ ಜಿಲ್ಲೆಯಲ್ಲಿ ಜಾನುವಾರುಗಳ ಸಾಗಾಣಿಕೆ ಮತ್ತು ಜಾನುವಾರುಗಳ ಜಾತ್ರೆ, ಸಂತೆ ನಿಷೇಧಿಸಲಾಗಿತ್ತು.

ಜಿಲ್ಲಾಡಳಿತದ ನಿಷೇಧದ ನಡುವೆಯು ಘಾಟಿ ದನಗಳ ಜಾತ್ರೆ ಪ್ರಾರಂಭವಾಗಿದೆ, ಸ್ವಯಂಪ್ರೇರಿತರಾಗಿ ರೈತರು ದನಗಳ ವ್ಯಾಪಾರಕ್ಕೆ ಸಜ್ಜು ಮಾಡಿಕೊಳ್ಳುತ್ತಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುವ ದನಗಳ ಜಾತ್ರೆ ದಕ್ಷಿಣ ಭಾರತದಲ್ಲೇ ಪ್ರಸಿದ್ಧಿಯನ್ನ ಪಡೆದಿದೆ. ಘಾಟಿ ದನಗಳ ಜಾತ್ರೆ ತಮಿಳುನಾಡು, ಆಂಧ್ರಪ್ರದೇಶ ರೈತರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ದನಗಳ ವ್ಯಾಪಾರಕ್ಕೆ ರೈತರು ಘಾಟಿಗೆ ಬರುತ್ತಾರೆ.

2022ರ ಸಾಲಿನ ಘಾಟಿ ದನಗಳ ಜಾತ್ರೆ ಡಿಸೆಂಬರ್ 20 ನಡೆಯಬೇಕಿತ್ತು, ಆದರೆ ಜಿಲ್ಲೆಯಲ್ಲಿ ಚರ್ಮಗಂಟು ರೋಗ ಉಲ್ಬಣಗೊಂಡಿರುವ ಹಿನ್ನೆಲೆ ಜಾನುವಾರುಗಳ ಆರೋಗ್ಯದ ಹಿತದೃಷ್ಟಿಯಿಂದ ಎರಡು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಜಾನುವಾರುಗಳ ಸಂತೆ, ಜಾತ್ರೆ ಮತ್ತು ಸಾಕಣಿಕೆಗೆ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು, 2022ರ ನವೆಂಬರ್ 30 ರಿಂದ 2023ರ ಜನವರಿ 31ರವರೆಗೂ ನಿಷೇಧದ ಆದೇಶ ಜಾಲ್ತಿಯಲ್ಲಿತ್ತು, ಆದರೆ ದನಗಳ ಜಾತ್ರೆಗೆ ರೈತರ ಒತ್ತಡ ಹೆಚ್ಚಾದ ಹಿನ್ನೆಲೆ ನಿಷೇಧದ ನಡುವೆಯೂ ದನಗಳ ಜಾತ್ರೆ ಘಾಟಿಯಲ್ಲಿ ಪ್ರಾರಂಭವಾಗಿದೆ.

ದನಗಳ ಜಾತ್ರೆ ನಡೆಯದಿದ್ದಾರೆ ಆರ್ಥಿಕ ಸಂಕಷ್ಟದಲ್ಲಿ ರೈತರು

ಜಾನುವಾರುಗಳನ್ನ ಅವಲಂಬಿಸಿ ರೈತರು ಕೃಷಿ ಮಾಡುತ್ತಾರೆ, ವರ್ಷಕ್ಕೊಮ್ಮೆ ನಡೆಯುವ ಘಾಟಿ ದನಗಳ ಜಾತ್ರೆಗೆ ಬರುವ ರೈತರು ತಮಗೆ ಬೇಕಾದ ದನಗಳ ಖರೀದಿ ಮಾಡುತ್ತಾರೆ, ಜೊತೆಗೆ ತಾವು ಜೋಡಿ ಮಾಡಿದ ದನಗಳನ್ನ ಮಾರುವ ಮೂಲಕ ಲಾಭ ಸಹ ಗಳಿಸುತ್ತಾರೆ.

ಆದರೆ ಈ ವರ್ಷ ಚರ್ಮಗಂಟು ರೋಗ ಹಿನ್ನಲೆ ಘಾಟಿ ದನಗಳ ಜಾತ್ರೆಗೆ ನಿಷೇಧಿಸಲಾಗಿತ್ತು, ಕಳೆದೊಂದು ತಿಂಗಳಿಂದ ಆದೇಶಕ್ಕೆ ಬೆಲೆ ಕೊಟ್ಟು ಸುಮ್ಮನಾಗಿದ್ದ ರೈತರು ಸ್ವಯಂ ಪ್ರೇರಿತರಾಗಿ ಜನವರಿ 16 ಯಿಂದ 23 ವರೆಗೂ ದನಗಳ ಜಾತ್ರೆಯನ್ನ ನಡೆಸಿದ್ದಾರೆ.

ವಿಷ ಕುಡಿತ್ತೀವಿ ಹೊರತು ದನಗಳ ಜಾತ್ರೆ ನಿಲ್ಲಿಸಲ್ಲ‌ ಎಂದು ರೈತರ ಪಟ್ಟು

ಪೆಂಡಾಲ್ ಗಳನ್ನು ಹಾಕಿರುವ ರೈತರು ದನಗಳ ವ್ಯಾಪಾರಕ್ಕೆ ಸಿದ್ಧತೆ ನಡೆಸಿದ್ದಾರೆ, ಜಾತ್ರೆಯಿಂದ ತೆರಳುವಂತೆ ಪಶು ಆರೋಗ್ಯಧಿಕಾರಿಗಳು ರೈತರಲ್ಲಿ ಮನವಿ ಮಾಡಿದ್ದಾರೆ, ಅಧಿಕಾರಿಗಳ ಮಾತಿಗೆ ಬಗ್ಗದ ರೈತರು ದನಗಳ ಜಾತ್ರೆ ನಡೆಸುವುದ್ದಾಗಿ ಹಠ ತೊಟ್ಟಿದ್ದಾರೆ, ಒಂದು ವೇಳೆ ದನಗಳ ಜಾತ್ರೆ ನಿಲ್ಲಿಸಲು ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾದರೆ ವಿಷ ಕುಡಿಯುವ ಬೆದರಿಕೆ ಹಾಕಿದ್ದಾರೆ ಕಣ್ಣೂರಿನ ರೈತ ವೆಂಕಟೇಶ್.

Leave a Reply

Your email address will not be published. Required fields are marked *