ಘಾಟಿ‌ ದನಗಳ ಜಾತ್ರೆ: ಉಚಿತ ಜಾನುವಾರು ಮೇವು ವಿತರಣೆ ಆರಂಭ

ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಯ ಅಂಗವಾಗಿ ನವ ಕರ್ನಾಟಕ ಯುವ ಶಕ್ತಿ ವೇದಿಕೆ ಆಯೋಜಿಸಿದ ಉಚಿತ ಜಾನುವಾರು ಮೇವು ವಿತರಣಾ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಉದ್ಘಾಟಿಸಿದರು.

ಉದ್ಘಾಟನೆ ಬಳಿಕ ಮಾತನಾಡಿದ ಅವರು, “ಜಾತ್ರೆಗೆ ಸರ್ಕಾರದ ವತಿಯಿಂದ ಮೂಲಭೂತ ಸೌಲಭ್ಯಗಳ ಜೊತೆಗೆ ಉಚಿತ ನೀರು ಮತ್ತು ಆಹಾರ ವ್ಯವಸ್ಥೆ ಮಾಡಲಾಗಿದೆ. ವೇದಿಕೆಯವರು ಉಚಿತ ಮೇವು ವಿತರಿಸುತ್ತಿರುವುದು ರೈತರಿಗೆ ಸಹಾಯಕವಾಗಿದೆ. ಜಾತ್ರೆಗೆ ಆಗಮಿಸಿರುವ ರೈತರು ಈ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು,” ಎಂದು ಹೇಳಿದರು.

ಜಾತ್ರೆ ಪ್ರದೇಶದಲ್ಲಿ ಅಳವಡಿಸಿರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಹಾಗೂ ಕಟೌಟ್‌ಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ವೇದಿಕೆ ಅಧ್ಯಕ್ಷ ಹಳ್ಳಿ ರೈತ ಅಂಬರೀಶ್ ಮಾತನಾಡಿ, “ಜಾತ್ರೆಗೆ ಬರುವ ಜಾನುವಾರುಗಳಿಗೆ ಉಚಿತ ಮೇವು ಮತ್ತು ನೀರು ಒದಗಿಸುವ ಮೂಲಕ ರೈತ ಸಮುದಾಯವನ್ನು ಬೆಂಬಲಿಸುವುದು ವೇದಿಕೆಯ ಉದ್ದೇಶ. ಈ ಸೇವೆಯನ್ನು ಮೂರು ವರ್ಷಗಳಿಂದ ನಿರಂತರವಾಗಿ ನೀಡುತ್ತಿದ್ದೇವೆ,” ಎಂದು ಹೇಳಿದರು.

ವೇದಿಕೆ ಕಾರ್ಯದರ್ಶಿ ಉದಯ ಆರಾಧ್ಯ ಮಾತನಾಡಿ, “ಇಂದು ಆರಂಭವಾದ ಮೇವು ವಿತರಣೆ ಇನ್ನೂ ಮೂರು–ನಾಲ್ಕು ದಿನ ನಡೆಯಲಿದೆ. ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ ರೈತರಿಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ,” ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಘಾಟಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರಂಗಪ್ಪ, ಪ್ರಗತಿಪರ ರೈತ ಭಾಸ್ಕರ್, ಕನ್ನಡ ಪರ ಹೋರಾಟಗಾರ ಪರಮೇಶ್, ಮುಖಂಡ ಕನಕದಾಸ, ವೇದಿಕೆಯ ಪದಾಧಿಕಾರಿಗಳಾದ ಶ್ರೀಧರ್, ಮಹೇಶ್, ಹಾಗೂ ಸ್ಥಳೀಯ ರೈತರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!