ಮಡಿಕೇರಿಯಲ್ಲಿ ನಿರ್ಮಾಣವಾಗಿರುವ ಗ್ರೇಟರ್ ರಾಜಾ ಸೀಟ್ ಕಾಮಗಾರಿಯಲ್ಲಿ ಬಹು ಅಕ್ರಮ ನಡೆದಿದೆ ಹಾಗೂ ನಕಲಿ ಎಂ.ಬಿ.ಪುಸ್ತಕ ಸೃಷ್ಟಿಸಿ ಅಪರಾಧ ಎಸಗಿದ್ದಾರೆ ಎಂದು ಅಂದಿನ ಲೋಕೋಪಯೋಗಿ ಜ್ಯೂನಿಯರ್ ಇಂಜಿನಿಯರ್ ಕೆ.ಎಲ್.ದೇವರಾಜ್ ಮತ್ತು ಮೇಲಾಧಿಕಾರಿಗಳ ವಿರುದ್ಧ ಕಾಂಗ್ರೆಸ್ ಮುಖಂಡ ತೆನ್ನಿರ ಮೈನಾ ಕರ್ನಾಟಕ ಲೋಕಾಯುಕ್ತ ಕ್ಕೆ ಸಲ್ಲಿಸಿದ್ದ ದೂರಿನ ಹಿನ್ನಲೆಯಲ್ಲಿ ಇಂದು ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ತಾಂತ್ರಿಕ ವಿಭಾಗದ ತನಿಖಾಧಿಕಾರಿ ತೇಜಶ್ರೀ ಬಿ.ಮದ್ದೋಡಿ ಲೋಕೋಪಯೋಗಿ ಅಧಿಕಾರಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿ ದಾಖಲೆಗಳನ್ನು ಪರಿಶೀಲಿಸಿ ಸಂಗ್ರಹಿಸಿದರು.
ಆರಂಭದಲ್ಲಿ ಆರೋಪಿತ ಕಿರಿಯ ಇಂಜಿನಿಯರ್ ಎಂ.ಬಿ.ಪುಸ್ತಕ ಅಸಲಿ ಎಂದು ವಾದಿಸಿದರೂ ಕೊನೆಗೆ ತನಿಖಾಧಿಕಾರಿ ಎಲ್ಲಾ ಕೋನಗಳಲ್ಲಿ ಪರಿಶೀಲಿಸಿ ನಕಲಿ ಎನ್ನಲು ಒಟ್ಟು ಐದು ಆಧಾರಗಳನ್ನು ಗುರುತಿಸಿ ನೋಟ್ ಮಾಡಿಕೊಂಡರು.
ಕಾರ್ಯಪಾಲಕ ಅಭಿಯಂತರರಾದ ಸಿದ್ದೇ ಗೌಡ ರವರು ಕಾಮಗಾರಿಗಳ ವಿವರಣೆಗಳನ್ನು ಸಹಾಯಕ ಕಾರ್ಯಪಾಲಕ ಅಭಿಯಂತರರು ವರದಿ ಮಾಡಿ ಸಲ್ಲಿಸಿದ್ದನ್ನು ಲೋಕಾಯುಕ್ತ ಅಧಿಕಾರಿಣಿ ತೇಜಶ್ರೀ ರವರಿಗೆ ನೀಡಿದರು.
ನಂತರ ದೂರುದಾರ ತೆನ್ನಿರ ಮೈನಾ ಮತ್ತು ಲೋಕೋಪಯೋಗಿ ಅಧಿಕಾರಿಗಳೊಂದಿಗೆ ತೇಜಶ್ರೀ ರವರು ರಾಜಾಸೀಟ್ ಗೆ ತೆರಳಿ ಸ್ಥಳ ಪರಿಶೀಲನೆ ಮಾಡಿದರು.
2023 ರ ಮಾರ್ಚ್ 18 ರಂದು ಲೋಕಾರ್ಪಣೆ ಆದ ಗ್ರೇಟರ್ ರಾಜಾ ಸೀಟ್ ಇನ್ನೂ ತೋಟಗಾರಿಕೆ ಇಲಾಖೆಗೆ ಹಸ್ತಾಂತರ ಮಾಡದೇ ಇರುವ ಬಗ್ಗೆ ಲೋಕೋಪಯೋಗಿ ಇಂಜಿನಿಯರ್ ಗಳಿಂದ ವಿವರಣೆ ಪಡೆದರು. ಉತ್ತರ ನೀಡಲು ತಡಬಡಿಸಿದ ಇಂಜಿನಿಯರ್ ಅನ್ನು ತರಾಟೆಗೆ ತೆಗೆದುಕೊಂಡರು.
ಅಲ್ಲಲ್ಲಿ ಬಿರುಕು ಬಿಟ್ಟ ಕಾಮಗಾರಿಗಳು,ಹಾರಿಹೋದ ಹೆಂಚುಗಳು , ಕರೆಂಟ್ ಸಂಪರ್ಕ ಇಲ್ಲದ ಲೈಟುಗಳು. ಒಡೆದು ಹೋದ ಗ್ರಾನೆಟ್ ಕಲ್ಲುಗಳು
ಯದ್ವಾ ತದ್ವಾ ಹರಿದಾಡಿದ್ದ ಇಂಟರ್ ಲಾಕ್ ,ದೂರ ದೂರ ಇರುವ ಗಿಡಗಳು ಸೇರಿದಂತೆ ಎಲ್ಲವನ್ನೂ ತಮ್ಮ ಸಿಬ್ಬಂದಿಯಿಂದ ಚಿತ್ರೀಕರಿಸಿಕೊಂಡರು.
ನಾಳೆ ದಿನ ನಿರ್ವಹಣೆ ಹೊತ್ತ ಎ.ಇ.ಇ ಮತ್ತು ಇ.ಇ ರವರಿಗೆ ಮಡಿಕೇರಿಗೆ ಬಂದು ತನಿಖೆಗೆ ಹಾಜರಾಗಲು ಸೂಚನೆಯನ್ನು ನೀಡಿದ್ದಾರೆ.ನಾಳೆ ಪೂರ್ಣವಾಗಿ ತನಿಖೆ ನಡೆಯಲಿದೆ.
ಈ ಸಂದರ್ಭದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ತೆನ್ನಿರ ಮೈನಾ ರವರು ಈಗಾಗಲೇ ಕಿರಿಯ ಇಂಜಿನಿಯರ್ ಕೆ.ಎಲ್.ದೇವರಾಜ್ ನಕಲಿ ಎಂಬಿ ಪುಸ್ತಕ ರಚಿಸಿ ಅಪರಾಧ ಎಸಗಿದ್ದು ಕಂಡು ಬಂದಿದ್ದು ಮುಂದೆ ಅಕ್ರಮದ ವಿವರಗಳು ಬಹಿರಂಗವಾಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಮಡಿಕೇರಿ ನಗರ ಸಭೆಯ ಅಧ್ಯಕ್ಷರಾದ ಹೆಚ್.ಎಂ.ನಂದಕುಮಾರ್ ಉಪಸ್ಥಿತರಿದ್ದು, ಕಾಮಗಾರಿಯ ಗುಣಮಟ್ಟದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು.