ಗ್ರಾ.ಪಂ ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ

ಕೋಲಾರ: ಗ್ರಾ.ಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯತಿ ನೌಕರರಿಗೆ ವಿವಿಧ ಹುದ್ದೆಗಳಿಗೆ ಬಡ್ತಿ ನೀಡಬೇಕು ಮತ್ತು ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಬುಧವಾರ ನಗರದ ಹೊರವಲಯದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಗೌರವ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ಗ್ರಾಮ ಪಂಚಾಯತಿಗಳಲ್ಲಿ ಕನಿಷ್ಠ 6 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ನೌಕರರಿಗೆ ಜೇಷ್ಠತಾ ಪಟ್ಟಿಯಂತೆ ಬಡ್ತಿ ಆದೇಶ ನೀಡಬೇಕು. ಅನುಕುಂಪದ ಹುದ್ದೆಗಳಿಗೆ ನೌಕರನ ಕುಟಂಬದವರ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗಕ್ಕೆ ಪರಿಗಣಿಸಬೇಕು. ಗ್ರಾಮ ಪಂಚಾಯಿತಿ ಕಾರ್ಯನಿರ್ವಹಿಸಿದ ನೌಕರರಿಗೆ ನಿವೃತ್ತಿ ನಂತರ ಉಪದಾನ (ಗ್ರ್ಯಾಚ್ಯುಟಿ)ನೀಡಬೇಕು ಎಂದು ಒತ್ತಾಯಿಸಿದರು.

ಸುಮಾರು ವರ್ಷಗಳಿಂದ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇದ್ದ ಬಿಲ್ ಕಲೆಕ್ಟರ್ ಹಾಗೂ ಕ್ಲರ್ಕ್ ಹುದ್ದೆಗಳಿಗೆ ನಮ್ಮಲ್ಲಿಯೇ ಸೇವೆ ಸಲ್ಲಿಸಿದ ನೌಕರರನ್ನು ಪರಿಗಣಿಸಬೇಕು. ಜೊತೆಗೆ ಕರ ವಸೂಲಿಗಾರರು, ಕ್ಲರ್ಕ್‌, ಡಾಟಾ ಎಂಟ್ರಿ ಆಪರೇಟರ್ಸ್, ನೀರುಗಂಟಿಗಳು, ಜವಾನ್, ಸ್ವಚ್ಛತಾಗಾರರು ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರೂ ಸರ್ಕಾರಿ ನೌಕರರೆಂದು ಘೋಷಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಜನಸಂಖ್ಯೆಗೆ ಆಧರಿಸಿ ಪಂಚಾಯಿತಿಗಳನ್ನು ಮೇಲ್ದರ್ಜೆಗೇರಿಸಬೇಕು. ಲೆಕ್ಕ ಸಹಾಯಕ ಹುದ್ದೆ ಸೃಷ್ಟಿಸಬೇಕು. ಸೇವಾ ಹಿರಿತನ ಪರಿಗಣಿಸಿ ವೇತನ ಹೆಚ್ಚಳ ಮಾಡಬೇಕು. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ. ಮುಖ್ಯಮಂತ್ರಿ ಹಾಗೂ ಸಚಿವರಿಗೂ ಮನವಿ ಸಲ್ಲಿಸಲಾಗಿದೆ. ಆದರೆ, ಇದುವರೆಗೂ ನಮ್ಮ ಬೇಡಿಕೆ ಈಡೇರಿಲ್ಲ ಮುಂಬರುವ ದಿನಗಳಲ್ಲಿ ಬೇಡಿಕೆ ಈಡೇರಿಸದಿದ್ದರೆ, ಗಂಭೀರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಪಂ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಅಮರಾನಾರಾಯಣಪ್ಪ ಮಾತನಾಡಿ, ಗ್ರಾಪಂ ನೌಕರರಿಗೆ ಕನಿಷ್ಠ ವೇತನ, ತುಟ್ಟಿ ಭತ್ಯೆಯನ್ನು ಇಎಫ್‌ಎಂಎಸ್‌ ಮುಖಾಂತರ ಪ್ರತಿ ತಿಂಗಳು 5ನೇ ತಾರೀಖಿನೊಳಗೆ ನೇರವಾಗಿ ನೌಕರನ ಖಾತೆಗೆ ಜಮಾವಣೆ ಮಾಡಬೇಕು. ಬಾಕಿ ಇರುವ ಎಲ್ಲ ನೌಕರರ ವೇತನವನ್ನು 14ನೇ ಹಣಕಾಸು ಯೋಜನೆ ಸೇರಿದಂತೆ ಇತರೆ ಸರಕಾರದ ಅನುದಾನವನ್ನು ಸೇರಿಸಿ ನೀಡಬೇಕು. 60 ವರ್ಷ ಮೇಲ್ಪಟ್ಟ ನಿವೃತ್ತಿ ಹೊಂದಿದ ನೌಕರರಿಗೆ ಉಪಧನ ಮತ್ತು ಮರಣ ಪರಿಹಾರ ಧನವನ್ನು ನೀಡಬೇಕು. ಡಾಟಾ ಎಂಟ್ರಿ ಅಪರೇಟರ್‌ಗಳನ್ನು ಪದೋನ್ನತಿಗೆ ಅವಕಾಶ ಕಲ್ಪಿಸಬೇಕು. ಅಕ್ರಮ ನೇಮಕಾತಿ ನಿಲ್ಲಿಸಬೇಕು ಎಂದು ಅಗ್ರಹಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ನೌಕರರ ಸಂಘದ ಜಿಲ್ಲಾ ಖಜಾಂಚಿ ಕೇಶವರಾವ್, ಸಂಘಟನಾ ಸಂಚಾಲಕ ಎಂ.ವಿಜಯಕೃಷ್ಣ, ವಿವಿಧ ತಾಲೂಕು ಅಧ್ಯಕ್ಷ ಕಾರ್ಯದರ್ಶಿಗಳಾದ ಶಿವರಾಮಯ್ಯ, ರೆಡ್ಡೆಪ್ಪ, ವೆಂಕಟರಾಮೇಗೌಡ, ಶಿವಶಂಕರ್, ನಾರಾಯಣಸ್ವಾಮಿ, ಚಂದ್ರಪ್ಪ, ಮೋಹನ್, ರಾಮಕೃಷ್ಣ, ಜಯಶಂಕರ್, ಮುಂತಾದವರು ಇದ್ದರು

Leave a Reply

Your email address will not be published. Required fields are marked *