ಗ್ರಾಮ ಸಹಾಯಕರು, ರೆವಿನ್ಯೂ ಇನ್ಸ್‌ಪೆಕ್ಟರ್ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಕೆಲಸವೇನು..? ಅವರ ಜವಾಬ್ದಾರಿ ಏನು..? ತಾಲೂಕು ಕಚೇರಿಯಲ್ಲಿ ಬ್ರೋಕರ್ ಕೆಲಸ ಮಾಡೋದು ಬಿಟ್ಟು ಸಾರ್ವಜನಿಕರ ಸಮಸ್ಯೆ ಆಲಿಸಿ ಶೀಘ್ರ ಪರಿಹರಿಸುವ ಕೆಲಸ ಮಾಡಬೇಕು- ಭ್ರಷ್ಟಾಚಾರ ಸಹಿಸುವುದಿಲ್ಲ- ಭ್ರಷ್ಟತೆ ಕಂಡುಬಂದಲ್ಲಿ ಕ್ರಮ ಗ್ಯಾರೆಂಟಿ- ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಶಾಸಕ ಧೀರಜ್ ಮುನಿರಾಜ್ 

ಕಂದಾಯ ಇಲಾಖೆಯಲ್ಲಿ ಗ್ರಾಮ ಸಹಾಯಕರು, ರೆವಿನ್ಯೂ ಇನ್ಸ್‌ಪೆಕ್ಟರ್ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಕೆಲಸವೇನು..? ಅವರ ಜವಾಬ್ದಾರಿ ಏನು..? ಎಷ್ಟು ಪೆನ್ಷನ್ ನೋಂದಣಿ ಮಾಡಿಸುತ್ತಿದ್ದಾರೆ..? ಎಷ್ಟು ಹೌಸ್ ಸರ್ವೇ ಮಾಡುತ್ತಿದ್ದಾರೆ..? ಎಷ್ಟು ಜಮೀನುಗಳ ಬೆಳೆ ಸಮೀಕ್ಷೆ ಮಾಡುತ್ತಿದ್ದಾರೆ..? ಇವರ ನಿಜವಾದ ಕೆಲಸ ಕಾರ್ಯವೇನು..? ನಿಜವಾಗಿ ಇವರು ಅವರ ಅವರ ವ್ಯಾಪ್ತಿಯಲ್ಲಿ ಕೂತು ಕೆಲಸ ಮಾಡುತ್ತಿದ್ದಾರಾ…? ಗ್ರಾಮ ಲೆಕ್ಕಾಧಿಕಾರಿಗಳು ಕನಿಷ್ಠ ಇಬ್ಬರನ್ನು ಆಪ್ತ ಸಹಾಯಕರನ್ನ ಇಟ್ಟಿಕೊಂಡಿರುತ್ತಾರೆ. ರೆವೆನ್ಯೂ ಇನ್ಸ್ ಪೆಕ್ಟರ್ ನಾಡಕಚೇರಿಯಲ್ಲಿ ಕುಳಿತುಕೊಳ್ಳುವುದು ಬಿಟ್ಟು‌ ನಗರದಲ್ಲಿ ಬಂದು ಕಮರ್ಷಿಯಲ್ ಕಟ್ಟಡದಲ್ಲಿ ಆಫೀಸ್ ಮಾಡಿಕೊಂಡಿರುತ್ತಾರೆ… ಇದರ ಬಗ್ಗೆ ಸಾರ್ವಜನಿಕವಾಗಿ ಹಾಗೂ ಸದನದಲ್ಲೂ ಮಾತನಾಡುತ್ತೇನೆ ಎಂದು ಶಾಸಕ ಧೀರಜ್ ಮುನಿರಾಜ್ ಅವರು ಗ್ರಾಮ ಸಹಾಯಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ವಿರುದ್ಧ ಕಿಡಿಕಾರಿದರು.

ತಾಲೂಕು ಪಂಚಾಯಿತಿ ಕಚೇರಿಯಲ್ಲಿಂದು ಶಾಸಕ ಧೀರಜ್ ಮುನಿರಾಜ್ ನೇತೃತ್ವದಲ್ಲಿ ಕೆಡಿಪಿ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂತವರಿಂದ ಜನಕ್ಕೆ ಯಾವ ಕೆಲಸ ಆಗುತ್ತದೆ. ಗ್ರಾಮಗಳು ಎಷ್ಟರ ಮಟ್ಟಿಗೆ ಉದ್ಧಾರ ಆಗುತ್ತವೆ. ಜನರ ಕಷ್ಟಗಳನ್ನು ಕೇಳುವವರು ಯಾರು..? ಎಂದು ಪ್ರಶ್ನೆ ಮಾಡಿದರು.

1999-2004 ಸಾಲಿನಲ್ಲಿ ದೊಡ್ಡಬಳ್ಳಾಪುರದಲ್ಲಿ ಅತಿಹೆಚ್ಚು‌ ಮಂಜೂರಾತಿ ಆಗಿತ್ತು. ಇಂದಿಗೂ ಸಹ ಶೇ.50ರಷ್ಟು ಮಂದಿಗೆ ಸಾಗುವಳಿ ಚೀಟಿ ನೀಡಿಲ್ಲ. ಸುಮಾರು 20ವರ್ಷವಾದರೂ ಶೇ.50ರಷ್ಟು ರೈತರು ಸಾಗುವಳಿ ಚೀಟಿ ತೆಗೆದುಕೊಳ್ಳಲು ಆಗಲಿಲ್ಲ. ಇದರ ಅರ್ಥ ಏನು..? ತಾಲೂಕಿನ 50, 53 ಅರ್ಜಿಗಳ ಮಾಹಿತಿಯನ್ನು ಇಲ್ಲಿ ಕೊಡಲ್ಲ ಎಂದು ಗೊತ್ತಾಗಿ ಸದನದಲ್ಲಿ ಕೇಳಿದ್ದೇನೆ. 53 ಅರ್ಜಿಗಳನ್ನು, ಕೆಲ ಬುಕ್ಕುಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ. ಕೆಲ ಅಧಿಕಾರಿಗಳಿಂದ ಭ್ರಷ್ಟಾಚಾರ ಇನ್ನೂ ಹೆಚ್ಚಾಗುತ್ತಿದೆ. ಕೆಲ ಮೂಲ ಕಡತ, ದಾಖಲೆಗಳನ್ನು ಕಣ್ಮರೆ ಮಾಡಿಬಿಟ್ಟಿದ್ದಾರೆ. ಮೊದಲು ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಕೈಗೆ ಸಿಗಬೇಕು, ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಕೆಲಸ‌ ಮಾಡಬೇಕು. ಅದನ್ನು ಬಿಟ್ಟು ತಾಲೂಕು ಕಚೇರಿಯಲ್ಲಿ ಬ್ರೋಕರ್ ಕೆಲಸ ಮಾಡಿಕೊಂಡಿದ್ದರೆ ಹೇಗೆ ಎಂದು ಪ್ರಶ್ನೆ ಮಾಡಿದರು.

ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡಬೇಕು ಎಂದು ನನ್ನ ಅಪೇಕ್ಷೆ. ಅಧಿಕಾರಿಗಳ ಬಳಿ ಯಾವುದಾದರೂ ಸರ್ಕಾರಿ ಕೆಲಸ ಮಾಡಿಸಿಕೊಳ್ಳಬೇಕೆಂದರೆ ನಮಗೇ ಜಿಗುಪ್ಸೆ ಬಂದು ನಾವೇ ದುಡ್ಡು ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತೇವೆ ಆ ಮಟ್ಟಕ್ಕೆ ಇವರು ನಮಗೆ ಕಾಟ ಕೊಡುತ್ತಾರೆ ಎಂದು ಆರೋಪಿಸಿದರು. ಹಣ ಕೇಳುವ ಅಧಿಕಾರಿಗಳ ಬಗ್ಗೆ ಸಾಕ್ಷಿ, ದಾಖಲೆ ಸಮೇತ ನಮ್ಮ ಗಮನಕ್ಕೆ ತಂದರೆ ನಾವು ಅದಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದರು.

Leave a Reply

Your email address will not be published. Required fields are marked *

error: Content is protected !!