ಹುಲುಕುಂಟೆ ಗ್ರಾಮ ಪಂಚಾಯತಿ ಮುಂದೆ ಏಕಾಂಗಿಯಾಗಿ ಧರಣಿ ಆರಂಭಿಸಿದ್ದ ಪತ್ರಿಕಾ ವಿತರಕ ಹಾಗೂ ವಕೀಲರಾದ ಹುಲುಕುಂಟೆ ಮಹೇಶ ಅವರು ಧರಣಿ ಆರಂಭಿಸುತ್ತಿದ್ದಂತೆಯೇ ಆಗಮಿಸಿದ ಹುಲುಕುಂಟೆ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರುಗಳು ಫೆಬ್ರವರಿ ಅಂತ್ಯದ ವೇಳೆಗೆ ಆಂಜನೇಯ ಸ್ವಾಮಿ ಇನಾಮ್ತ ಜಮೀನು ಹಾಗೂ ಸರ್ವೆ ನಂ.162 ರಲ್ಲಿ ಕಟ್ಟಿಕೊಂಡಿರುವ ಮನೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಕಾರಣ ಧರಣಿಯನ್ನು ಸದ್ಯ ನಿಲ್ಲಿಸಲಾಗಿದೆ.
ಫೆಬ್ರುವರಿ 28 ರೊಳಗೆ ಕ್ರಮ ಕೈಗೊಳ್ಳದಿದ್ದರೆ ಮಾರ್ಚ್ 1 ರಿಂದ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ವಕೀಲರ ಸಂಘ, ಮಾನವ ಹಕ್ಕುಗಳ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ದೊಡ್ಡ ಮಟ್ಟದ ಧರಣಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹುಲುಕುಂಟೆ ಮಹೇಶ ಅವರು ತಿಳಿಸಿದ್ದಾರೆ.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಚಿಕ್ಕೀರಪ್ಪ ಮಾತನಾಡಿ, ಮಹೇಶ್ ಅವರ ಬೇಡಿಕೆಗಳು ನ್ಯಾಯಯುತವಾಗಿದ್ದು, ಹೊಸ ದಿಶಾಂಕ್ ಅಪ್ಲಿಕೇಷನ್ ಇಂದ ಸಮಸ್ಯೆ ಆಗಿದೆ. ಇದನ್ನು ಸರಿಪಡಿಸಲು ದೊಡ್ಡಬಳ್ಳಾಪುರ ತಹಶೀಲ್ದಾರ್ ಹಾಗೂ ಸರ್ವೇಯರ್ ರವರಿಗೆ ಅನೇಕ ಬಾರಿ ಮನವಿ ಮಾಡಿದರೂ ಕ್ರಮ ಕೈಗೊಳ್ಳದ ಕಾರಣ ಸಮಸ್ಯೆ ಉದ್ಭವವಾಗಿದೆ. ಸಚಿವರ ಮೂಲಕ ತಹಶೀಲ್ದಾರ್ ಗಮನಕ್ಕೆ ವಿಷಯ ತಂದು ಫೆಬ್ರವರಿ ಅಂತ್ಯದೊಳಗೆ ಸಮಸ್ಯೆ ಪರಿಹರಿಸಲಾಗುವುದು ಎಂದರು.
ಸ್ಥಳದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಗೀತಾ, ಸದಸ್ಯರಾದ ಸವಿತ, ಕೆಂಪವೆಂಕಟಯ್ಯ, ಮೂರ್ತಿ, ಗ್ರಾಮಸ್ಥರಾದ ಶಿವಕುಮಾರ್, ಕುಮಾರ್, ಮುನಿರಾಜು, ಮುಂತಾದವರು ಉಪಸ್ಥಿತರಿದ್ದರು.