ಗ್ರಾಮೀಣ ಭಾಗದಲ್ಲಿ ಮಿತಿಮೀರಿದ ಜೂಜಾಟ: ದುಶ್ಟಕ್ಕೆ ಬೇಕಿದೆ ಕಡಿವಾಣ

ದೊಡ್ಡಬಳ್ಳಾಪುರ: ನಗರದ ಪ್ರದೇಶಗಳಲ್ಲಿ ನಡೆಯುತ್ತಿದ್ದ ಜೂಜಾಟ ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಿಗೂ ಹಬ್ಬುತ್ತಿದೆ. ಜೂಜುಕೋರರ ಹಾವಳಿ ಮಿತಿ ಮೀರಿದ್ದು, ನಗರ ಕೇಂದ್ರಿತವಾಗಿದ್ದ ಜೂಜು ಅಡ್ಡೆಗಳು ಈಗ ಗ್ರಾಮಾಂತರ ಪ್ರದೇಶಗಳಲ್ಲಿ ತಮ್ಮ ಜಾಲ ಹಬ್ಬಿದೆ.

ತಾಲೂಕಿನ ಮೆಳೆಕೋಟೆ, ರಾಜಘಟ್ಟ, ರಾಮಯ್ಯನಪಾಳ್ಯ, ಮೇಡಿಹಳ್ಳಿ ಹಾಗೂ ಜಕ್ಕಲಮಡಗು ರಸ್ತೆಗಳ ತೋಟದ ಮನೆಗಳು, ನೀಲಗಿರಿ ತೋಪುಗಳು ಜೂಜುಕೋರರ ಉಪಟಳದಿಂದ ನಲುಗುತ್ತಿವೆ ಎಂಬ ದೂರುಗಳು ಕೇಳಿಬಂದಿವೆ.

ಇಸ್ಪೀಟ್, ಮಟ್ಕಾ, ಬೆಟ್ಟಿಂಗ್ ದಂಧೆಗೆ ಗ್ರಾಮೀಣ ಭಾಗದ ಯುವಜನರೇ ಹೆಚ್ಚು ದಾಸರಾಗುತ್ತಿದ್ದು, ಜೂಜಾಟಕ್ಕೆ ಬಲಿಯಾದ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕೂಲಿ ಕಾರ್ಮಿಕರು ದಿನವಿಡೀ ಬೆವರು ಹರಿಸಿ ದುಡಿದ ಹಣವನ್ನು ಕ್ಷಣಾರ್ಧದಲ್ಲಿ ಜೂಜಿಗೆ ಬಳಸಿ ಖಾಲಿ ಕೈಯಲ್ಲಿ ಮನೆಗೆ ತೆರಳುವಂತಾಗಿದೆ. ಚಟಕ್ಕೆ ಬಿದ್ದ ಬಹುತೇಕರು ತೋಟ, ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.

ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ತಲೆ ಎತ್ತಿರುವ ಜೂಜು ಅಡ್ಡೆಗಳಿಗೆ ಯಲಹಂಕ, ವಿಜಯಪುರ, ದೇವನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ತಾಲೂಕುಗಳಿಂದ ಜೂಜು ಕೋರರು ಬರುತ್ತಾರೆ. ತೋಟದ ಮನೆ, ನೀಲಗಿರಿ ತೋಪುಗಳಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಜೂಜಾಟಕ್ಕೆ ಪೊಲೀಸರು ಕೂಡಲೇ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಗ್ರಾಮಾಂತರ ಪ್ರದೇಶದ ಜೂಜು ಅಡ್ಡೆಗಳ‌ ಮೇಲೆ ಪೊಲೀಸರು ನಿಯಮಿತವಾಗಿ ದಾಳಿ ನಡೆಸಿದರೂ ತಹಬದಿಗೆ ಬಂದಿಲ್ಲ. ಪೊಲೀಸರು ಪರಿಣಾಮಕಾರಿ ಗಸ್ತು ವ್ಯವಸ್ಥೆ ಮಾಡಿದರೆ ಸಾಕಷ್ಟು ಕುಟುಂಬಗಳು ಬಚಾವಾಗಲಿವೆ ಎಂಬುದು ಗ್ರಾಮೀಣ ಭಾಗದ ಜನರ ಅಭಿಪ್ರಾಯವಾಗಿದೆ.

Leave a Reply

Your email address will not be published. Required fields are marked *