ಊರಿನ ಒಳಿತಿಗಾಗಿ ಒಂದು ದಿನ ಊರಿನ ಎಲ್ಲಾ ಗ್ರಾಮಸ್ಥರು ಗಂಟುಮೂಟೆ ಕಟ್ಟಿಕೊಂಡು ಊರು ಬಿಡುವ ಆಚರಣೆ ದೊಡ್ಡಬಳ್ಳಾಪುರ ತಾಲೂಕು ಸಾಸಲು ಹೋಬಳಿ ಹೊಸಹಳ್ಳಿ ಪೋಸ್ಟ್ ವ್ಯಾಪ್ತಿಯಲ್ಲಿರುವ ಕೊಟ್ಟಿಗೆಮಾಚೇನಹಳ್ಳಿ ಗ್ರಾಮದಲ್ಲಿಂದು ಅದ್ಧೂರಿಯಾಗಿ ನಡೆಯಿತು.
ಗ್ರಾಮದಲ್ಲಿ ಯಾವುದೇ ರೀತಿಯ ಸಾವು-ನೋವುಗಳು, ಅನಾರೋಗ್ಯದ ಸಮಸ್ಯೆಗಳು, ದುಷ್ಟಶಕ್ತಿಗಳು, ಸೋಂಕಿನ ಸಮಸ್ಯೆಗಳು ತಾಗದೆ ಇರಲಿ. ಗ್ರಾಮದಲ್ಲಿ ಶಾಂತಿ ನೆಲಸಲಿ ಎಂದು ದೇವರಲ್ಲಿ ಮೊರೆ ಹೋಗಲು ಈ ಒಂದು ಪದ್ಧತಿಯನ್ನು ಪ್ರಾಚೀನ ಕಾಲದಿಂದಲೂ ಆಚರಣೆ ಮಾಡುತ್ತಾ ಬರಲಾಗಿದೆ.
ಈ ಆಚರಣೆಯನ್ನು ಸುಮಾರು 25 ವರ್ಷಗಳ ಹಿಂದೆ ಮಾಡಿಲಾಗಿತ್ತು. ಇದೀಗ ಇಂದು ಊರಿನ ಗ್ರಾಮಸ್ಥರೆಲ್ಲಾ ಸೇರಿ ಆಚರಣೆ ಮಾಡಲಾಗಿದೆ.
ಊರ ಹೊರವಲಯದಲ್ಲಿದ್ದುಕೊಂಡು ಊರನ್ನು ಕಾಪಾಡುತ್ತಿರುವ ವರ್ಪಣಮ್ಮ ದೇವಸ್ಥಾನ ಬಳಿ ಹೋಗಿ ಸಣ್ಣಪುಟ್ಟ ಶೆಡ್ ನಿರ್ಮಿಸಿಕೊಂಡು ದೇವತೆಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಸಾದ ಸೇವನೆ ಮಾಡಿಕೊಂಡು ಒಂದು ದಿನ ಪೂರ್ತಿ ಅಲ್ಲೇ ಗ್ರಾಮಸ್ಥರು ಹಾಗೂ ತಮ್ಮ ಸಾಕು ಪ್ರಾಣಿಗಳ ಸಮೇತ ವಾಸ್ತವ್ಯ ಹೂಡಿದ್ದರು.
ಈ ಆಚರಣೆ ಕೊಟ್ಟಿಗೆಮಾಚೇನಹಳ್ಳಿ ಗ್ರಾಮದಲ್ಲಿ ಪ್ರಾಚೀನ ಕಾಲದಿಂದಲೂ ಚಾಲ್ತಿಯಲ್ಲಿದ್ದು, ಅದನ್ನು ಪ್ರಸ್ತುತ ಗ್ರಾಮಸ್ಥರೆಲ್ಲಾ ಸೇರಿ ಆಚರಣೆ ಮಾಡುತ್ತಿದ್ದಾರೆ.
ಒಟ್ಟಾರೆ, ಈ ವಿಚಿತ್ರ ಆಚರಣೆಯಲ್ಲಿ ಗ್ರಾಮಸ್ಥರೆಲ್ಲಾ ಸೇರಿ ಸಂತೋಷ, ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಸಂಭ್ರಮಿಸಿದರು.