ಕನಸವಾಡಿ ಗ್ರಾಮ ಪಂಚಾಯಿತಿ ವ್ತಾಪ್ತಿಯ ಕನಸವಾಡಿ, ಮಾರಸಂದ್ರ, ಕನ್ನಮಂಗಲ ಸೇರಿದಂತೆ ಇತರೆ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಫಲರಾಗಿದ್ದಾರೆ ಎಂದು ಕನಸವಾಡಿ ಗ್ರಾಮ ಪಂಚಾಯಿತಿ ಸದಸ್ಯ ಟಿ.ವಿಜಯಕುಮಾರ್ ಅವರು ಆರೋಪಿಸಿದ್ದಾರೆ.
ಕನಸವಾಡಿ ಗ್ರಾಮಪಂಚಾಯಿತಿ ಎದುರು ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಕುಡಿಯುವ ನೀರಿನ ಸಮಸ್ಯೆ, ಚರಂಡಿ ದುರಸ್ತಿ, ಚರಂಡಿ ಸ್ವಚ್ಛತೆ, ರಸ್ತೆ ದುರಸ್ತಿ, ಸ್ವಚ್ಛತೆ ಸೇರಿದಂತೆ ಇನ್ನಿತರೆ ಸೌಕರ್ಯಗಳು ಇಲ್ಲವೆಂದು ಊರಿನ ಗ್ರಾಮಸ್ಥರು ನಮನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪಿಡಿಒ ನಿರ್ಲಕ್ಷ್ಯದಿಂದ ಗ್ರಾಮಸ್ಥರ ಕೆಂಗಣ್ಣಿಗೆ ನಾವು ಗುರಿಯಾಗಿದ್ದೇವೆ. ಗ್ರಾಮಸ್ಥರಿಗೆ ಏನು ಉತ್ತರ ಕೊಡುವುದಕ್ಕೆ ಆಗದೇ ಇಲ್ಲಿ ಬಂದು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ನಂತರ ಸದಸ್ಯೆ ಕೆ.ಪಿ.ಶೋಭಾ ಮಾತನಾಡಿ, ನಮ್ಮ ಗ್ರಾಮಕ್ಕೆ ಸೂಕ್ತ ಸವಲತ್ತು ಒದಗಿಸಿ ಎಂದು ಹಲವು ಬಾರಿ ಪಿಡಿಒ ಅವರಿಗೆ ಮನವಿ ಮಾಡಿದ್ದೇವೆ. ನಮ್ಮ ಮನವಿಗೆ ಸ್ಪಂದಿಸದೇ ಪಿಡಿಒ ಅವರು ನಿರ್ಲಕ್ಚ್ಯವಹಿಸುತ್ತಿದ್ದಾರೆ. ಇವರಿಂದ ನಾವು ಊರಲ್ಲಿ ಪಂಚಾಯಿತಿ ಸದಸ್ಯರಾಗಿ ತಲೆ ಎತ್ತಿ ತಿರುಗಾಡಲು ಆಗುತ್ತಿಲ್ಲ. ಕೂಡಲೇ ನಮ್ಮ ಮನವಿಗೆ ಸ್ಪಂದಿಸಿ ಗ್ರಾಮಕ್ಕೆ ಸವಲತ್ತುಗಳನ್ನು ಒದಗಿಸಿಕೊಡಬೇಕು ಎಂದು ಮನವಿ ಮಾಡುತ್ತಿದ್ದೇವೆ ಎಂದರು.
ನಂತರ ಪಿಡಿಒ ಎಲ್.ರಾಮಯ್ಯ ಮಾತನಾಡಿ, ಸದಸ್ಯರ ಆರೋಪ ಸತ್ಯಕ್ಕೆ ದೂರವಾದ ಮಾತು. ಕನಸವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಮೂಲಭೂತ ಸೌಕರ್ಯಗಳನ್ನು ಸಮನಾವಾಗಿ ನೀಡಲಾಗುತ್ತಿದೆ. ಗ್ರಾಮಸ್ಥರಿಂದ ಯಾವುದೇ ರೀತಿಯ ಸಮಸ್ಯೆಗೆ ಸಂಬಂಧಿಸಿದ ದೂರ ಬಂದಲ್ಲಿ ಖುದ್ದಾಗಿ ನಾನೇ ಭೇಟಿ ನೀಡಿ ಪರಿಶೀಲನೆ ಮಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದರು.
ಈ ವೇಳೆ ಉಪಾಧ್ಯಕ್ಷ ಕೃಷ್ಣಮೂರ್ತಿ, ಸದಸ್ಯರಾದ ರಂಗನಾಥ್, ಕೆ.ಬಿ. ಶ್ರೀನಿವಾಸ್, ಕೆ.ವಿ.ಶ್ರೀಕಾಂತ್, ಮಾಜಿ ಗ್ರಾ.ಪಂ ಸದಸ್ಯ ವೆಂಕಟಮಣಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.