ಕೋಲಾರ: ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ, ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬುಧವಾರ ಸಿಐಟಿಯು ನೇತೃತ್ವದ ಗ್ರಾಪಂ ನೌಕರರ ಸಂಘವು ನಗರದ ಜಿಲ್ಲಾ ಪಂಚಾಯತಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ನೌಕರರ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಅಧಿಕಾರಿಗಳು ಗ್ರಾಪಂ ನೌಕರರನ್ನು ಹೀನಾಯವಾಗಿ ನೋಡಿಕೊಳ್ಳುತ್ತಾರೆ ಕೆಲಸ ಮಾಡಲಿಕ್ಕೆ ನೌಕರರು ಬೇಕು ಸಂಬಳ ಮಾತ್ರ ಕೇಳಬಾರದು ಅಂತ ಪರಿಸ್ಥಿತಿಯಲ್ಲಿ ಇದ್ದು ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯತಿ ನೌಕರರು ಎಂದು ಪರಿಗಣಿಸುವ ಬಿಲ್ ಕಲೆಕ್ಟರ್, ನೀರಗಂಟಿ, ಕಂಪ್ಯೂಟರ್ ಆಪರೇಟರ್, ಜವಾನ, ಕ್ಲರ್ಕ್‌ಗಳಿಗೆ ಕನಿಷ್ಠ 31 ಸಾವಿರ ರೂ. ವೇತನ ನಿಗದಿಗೊಳಿಸಲು ಒತ್ತಾಯಿಸಿ 2022 ರಿಂದ ಪ್ರತಿಭಟನೆ ನಡೆಸಿದರೂ ಬೇಡಿಕೆ ಈಡೇರಿಲ್ಲ. ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ, ಇಲಾಖಾ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ನೀಡಿದ್ದ ಭರವಸೆಗಳು ಜಾರಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿವೃತ್ತ ನೌಕರರಿಗೆ ವರ್ಷಕ್ಕೆ 15 ದಿನಗಳ ವೇತನ ಆಧರಿಸಿ ಪಿಂಚಣಿ ನೀಡಬೇಕು. ಕನಿಷ್ಠ ಆರು ಸಾವಿರ ರೂ.ಗಳ ಪಿಂಚಣಿ ನೀಡಬೇಕಿದ್ದರೂ ಕೈಗೆ ನಿಲುಕಿಲ್ಲ. ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್, ಗ್ರೇಡ್-2 ಕಾರ್ಯದರ್ಶಿ ಇತರೆ ಹುದ್ದೆಗಳಿಗೆ ಬಡ್ತಿ ಅವಕಾಶ ಇದೆ. ಆದರೆ, ಅನೇಕ ಗ್ರಾಪಂಗಳು ಮೇಲ್ದರ್ಜೆಗೇರದ್ದರಿಂದ ಹಿನ್ನಡೆಯಾಗಿದೆ. 5626 ಗ್ರಾಮ ಪಂಚಾಯತ್‌ಗಳಲ್ಲಿ 1500 ಮಾತ್ರ ಮೇಲ್ದರ್ಜೆಗೇರಿವೆ. ಅರ್ಹ ಗ್ರಾಪಂಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಪದೋನ್ನತಿಗೆ ದಾರಿ ಮಾಡಬೇಕೆಂದು ಒತ್ತಾಯಿಸಿದರು.
ಈ ಪ್ರತಿಭಟನೆಯ ನೇತೃತ್ವವನ್ನು ಗ್ರಾಮ ಪಂಚಾಯತಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಅಮರನಾರಾಯಣ, ಖಜಾಂಚಿ ಕೇಶವರಾವ್, ವಿವಿಧ ತಾಲೂಕುಗಳ ಪದಾಧಿಕಾರಿಗಳಾದ ಮೋಹನ್, ತ್ಯಾಗರಾಜ್, ರಾಣಿ, ರಾಮಕೃಷ್ಣಪ್ಪ, ಸುಬ್ರಮಣಿ, ಜೈಶಂಕರಪ್ಪ, ಚಂದ್ರಪ್ಪ, ನಾರಾಯಣಸ್ವಾಮಿ, ಶ್ರೀನಿವಾಸ್, ಶಿವರಾಜ್, ಮುನಿವೆಂಕಟಪ್ಪ, ರಾಮೇಗೌಡ,ಮುಂತಾದವರು ವಹಿಸಿದ್ದರು.