ಗ್ರಾಪಂ ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಅ.1ರಂದು ಕಲ್ಬುರ್ಗಿಯ ಪ್ರಿಯಾಂಕ ಖರ್ಗೆ ಮನೆ ಮುಂದೆ ಪ್ರತಿಭಟನೆ

ಕೋಲಾರ: ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ 31 ಸಾವಿರಕ್ಕೆ ಏರಿಸಬೇಕು ಮತ್ತು ನಿವೃತ್ತರಿಗೆ ಪಿಂಚಣಿಯನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿ ಕಲ್ಬುರ್ಗಿಯಲ್ಲಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆರವರ ಮನೆ ಮುಂದೆ ಅಕ್ಟೋಬರ್1 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ತಿಳಿಸಿದರು,

ನಗರದಲ್ಲಿ ನಡೆದ ಗ್ರಾಮ ಪಂಚಾಯಿತಿ ನೌಕರರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷದಿಂದ ನಿರಂತರವಾಗಿ ಹೋರಾಟಗಳನ್ನು ನಡೆಸುತ್ತಿದ್ದರೂ ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಗಳನ್ನು ಈಡೇರಿಸದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡುವ ಎಲ್ಲಾ ನೌಕರರನ್ನು ಏಕಕಾಲಕ್ಕೆ ಸರ್ಕಾರಿ ನೌಕರರನ್ನಾಗಿ ಘೋಷಿಸಬೇಕು, ಆದಾಯಕ್ಕೆ ಅನುಗುಣವಾಗಿ ಕರವಸೂಲಿಗಾರರ ಹುದ್ದೆಗಳನ್ನು ನಿಗದಿಗೊಳಿಸಬೇಕು, ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಲೆಕ್ಕ ಸಹಾಯಕ ಹುದ್ದೆಗಳನ್ನು ಸೃಷ್ಠಿಸಬೇಕು, ಗ್ರೇಡ್ 1 ಕಾರ್ಯದರ್ಶಿ ಹುದ್ದೆಗಳಿಗೆ ಶೇ.100 ರಷ್ಟು ಸ್ಥಾನಗಳನ್ನು, ಗ್ರೇಡ್ 2 ಕಾರ್ಯದರ್ಶಿಗಳಿಗೆ ಶೇಕಡ 50 ರಷ್ಟು, ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಶೇ.50 ರಷ್ಟು ಸ್ಥಾನಗಳನ್ನು ಬಡ್ತಿ ನೀಡಬೇಕು, ಅನ್ಯ ಇಲಾಖೆಯವರಿಗೆ ಬಡ್ತಿ ನೀಡಬಾರದು ಎಂದು ಒತ್ತಾಯಿಸಿದರು.

ಎಸ್‌ಎಸ್‌ಎಲ್‌ಸಿ ಪಾಸಾಗಿ ಸತತವಾಗಿ 5 ವರ್ಷ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಬಿಲ್ ಕಲೆಕ್ಟರ್ ಹುದ್ದೆಗೆ ಬಡ್ತಿ ನೀಡಬೇಕು, ನಿವೃತ್ತರಾದ ಸಿಬ್ಬಂದಿಯ ಕುಟುಂಬಕ್ಕೆ ಖಾಲಿ ಇರುವ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನೀಡಬೇಕು ಮತ್ತಿತರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೋರಾಟವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಿಂದ ಒಂದು ಸಾವಿರಕ್ಕೂ ಅಧಿಕ ಮಂದಿ ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು

ಸಭೆಯಲ್ಲಿ ಜಿಲ್ಲಾಧ್ಯಕ್ಷ ಅಮರನಾರಾಯಣ, ಖಜಾಂಚಿ ಕೇಶವರಾವ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ವಿಜಯಕೃಷ್ಣ, ಮುಖಂಡರಾದ ಮೋಹನ್, ಶಿವರಾಜ್, ಶ್ರೀರಾಮ್, ಮಂಜುನಾಥ್, ವೆಂಕಟರಾಮೇಗೌಡ, ತ್ಯಾಗರಾಜ್, ಚಂದ್ರು ರಾಮನಬೋವಿ, ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!