ಗ್ಯಾರೆಂಟಿ ಯೋಜನೆಗಳು ಸೂಕ್ತ ರೀತಿಯಲ್ಲಿ ಜನರಿಗೆ ತಲುಪಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ- ವಿರೋಧಪಕ್ಷದ ನಾಯಕ ಆರ್.ಅಶೋಕ್ 

ಬಿಜೆಪಿ ಸರ್ಕಾರ ಇದ್ದಾಗ ಜಾರಿಗೆ ತಂದಿರುವ ಯೋಜನೆ, ಅನುದಾನಗಳನ್ನ ಮುಂದುವರಿಸಿಕೊಂಡು ಹೋದರೆ ಸಾಕು. ಅದನ್ನ ಬಿಟ್ಟು ಎಲ್ಲಾ ಯೋಜನೆಗಳ ಅನುದಾನವನ್ನ ಕಡಿತ ಮಾಡಿದೆ. ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಜನರಿಗೆ ಮರಳು ಮಾಡಲಾಗುತ್ತಿದೆ. ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನ ಈಡೇರಿಸದೇ ಸಿದ್ದರಾಮಯ್ಯ ನಿದ್ದೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಇದಿಯಾ? ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಇಂದು ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗ್ಯಾರೆಂಟಿ ಯೋಜನೆಗಳಿಂದ ಜನರಿಗೆ ನಯಾಪೈಸೆ ಲಾಭ ಇಲ್ಲ, ಜನ ದಿನನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆಯನ್ನ ಏರಿಕೆ ಮಾಡಲಾಗಿದೆ. ನಾನು ಸಾರಿಗೆ ಸಚಿವನಾಗಿದ್ದಾಗ ದೊಡ್ಡಬಳ್ಳಾಪುರಕ್ಕೆ ಬಿಎಂಟಿಸಿ ಬಸ್ ಭಾಗ್ಯ ಕಲ್ಪಿಸಿಕೊಟ್ಟೆ,‌ ಇಂತಹ ಒಂದೇ ಒಂದು ಸೌಲಭ್ಯವನ್ನ ಈ ತಾಲೂಕಿಗೆ ಕಾಂಗ್ರೆಸ್ ಸರ್ಕಾರ ನೀಡಿದಿಯೇ? ಎಂದು ಪ್ರಶ್ನೆ ಮಾಡಿದರು.

ನಂತರ ಮಾಜಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಗ್ಯಾರೆಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜನರಿಗೆ ತಲುಪಿಸುವಲ್ಲಿ ಸಂಪೂರ್ಣವಾಗಿ ಸೋತಿದೆ. ಗ್ಯಾರೆಂಟಿ ಎಂಬ ಅಸ್ತ್ರ ಬಳಸಿ ಚುನಾವಣೆ ಗೆದ್ದ ಕಾಂಗ್ರೆಸ್ ಪಕ್ಷ ಜನರಿಗೆ ದ್ರೋಹ ಮಾಡಿದೆ ಎಂದು ಆರೋಪಿಸಿದರು.

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿರುವ ಭರವಸೆಗಳು ಯಶಸ್ವಿಯಾಗಿ ಜಾರಿಯಾಗುತ್ತಿಲ್ಲ. ತಾಲೂಕು, ಜಿಲ್ಲಾ ಕಚೇರಿ‌ ಸೇರಿದಂತೆ ಎಲ್ಲಾ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಅಭಾವ, ವಿದ್ಯುತ್ ಅಭಾವ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ತಾಂಡವಾಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿಗೆ ಮಂಜೂರಾಗಿರುವ 250 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ವಿಳಂಬವಾಗಿದೆ. 250 ಹಾಸಿಗೆಗಳ ಜಿಲ್ಲಾಸ್ಪತ್ರೆ ನಿರ್ಮಾಣಕ್ಕಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡಲು ಮುಂದಾಗಿದ್ದೇವೆ ಎಂದು ಶಾಸಕ ಧೀರಜ್ ಮುನಿರಾಜ್ ಹೇಳಿದರು.

ನಮ್ಮ ಜಿಲ್ಲೆಯಲ್ಲಿ ರೈತರ ಸಮಸ್ಯೆ ಬಿಗಡಾಯಿಸಿದೆ. ಕಾಂಗ್ರೆಸ್ ಸರ್ಕಾರ ರೈತರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಜನ ವಿರೋಧಿ ಕೆಲಸಗಳನ್ನ ಮಾಡುತ್ತಾ ಕಾಲಕಳೆಯುತ್ತಿದೆ. ಸರ್ಕಾರವನ್ನ ಬಡಿದೆಬ್ಬಿಸಲು ಇಂತಹ ಪ್ರತಿಭಟನೆಗಳು ನಿರಂತರವಾಗಿ ನಡೆಸಬೇಕು ಎಂದರು.

ನಂತರ ನೆಲದಾಂಜನೇಯಸ್ವಾಮಿ ದೇವಾಲಯದಿಂದ ತಾಲೂಕು‌ ಕಚೇರಿಯವರೆಗೆ ಮುಖಂಡರು, ಕಾರ್ಯಕರ್ತರೊಂದಿಗೆ ಮೆರವಣಿಗೆ ಮಾಡುವ ಮೂಲಕ ಜಾಥಾ ನಡೆಸಿ ಕಾಂಗ್ರೆಸ್ ಸರ್ಕಾರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶವ್ಯಕ್ತಪಡಿಸಲಾಯಿತು.

Leave a Reply

Your email address will not be published. Required fields are marked *

error: Content is protected !!