ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿ ಜಾರಿ ಮತ್ತು ಯಶಸ್ಸಿಗೆ ಎಲ್ಲರೂ ಸಹಕರಿಸಿ- ವೈ ಶಿವಕುಮಾರ್

ಕೋಲಾರ: ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರವು‌ ಬಡವರು ಮತ್ತು ಸಾಮಾನ್ಯ ಜನರ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಐದು ಮಹಾತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಟಾನ ಮತ್ತು ಯಶಸ್ಸಿಗೆ ಅಧಿಕಾರಿಗಳು ಸಹಕರಿಸಬೇಕೆಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್ ಹೇಳಿದರು.

ನಗರದ ಜಿಲ್ಲಾ ಪಂಚಾಯತಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಮೊದಲ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಕ್ತಿ ಯೋಜನೆ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಯುವನಿಧಿ ಈ ಐದು ಯೋಜನೆಗಳು ರಾಜ್ಯದಲ್ಲಿ ಇತಿಹಾಸವನ್ನೇ ಸೃಷ್ಟಿಸಿದೆ. ಬಡ ಮತ್ತು ಸಾಮಾನ್ಯ ಜನರ ಬದುಕಿಗೆ ಶಕ್ತಿಯಾಗಿದೆ ಅವರ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿದ್ದು ಇಂತಹ ಯೋಜನೆಗಳ ಅನುಷ್ಟಾನದಲ್ಲಿ ಎದುರಾಗುವ ಸಣ್ಣ ಪುಟ್ಟ ತಾಂತ್ರಿಕ ಮತ್ತು ಇತರೆ ದೋಷಗಳನ್ನು ಅಧಿಕಾರಿಗಳು ಸರಿಪಡಿಸಿಕೊಂಡು ಮತ್ತು ಯೋಜನೆ ಕುರಿತು ಜನರಲ್ಲಿ ಅರಿವು ಮೂಡಿಸಿ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿನ ಗ್ಯಾರಂಟಿ ಫಲಾನುಭವಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ವರ್ಗಾವಣೆಯಾಗಿದ್ದ ಸಂದರ್ಭದಲ್ಲಿ ಮತ್ತೆ ಅವರಿಗೆ ಸೌಲಭ್ಯಗಳನ್ನು ಕೊಡುವ ಕೆಲಸ ಮಾಡಿ ಇದು ಪಕ್ಷಾತೀತವಾಗಿ ಎಲ್ಲ ಅರ್ಹರಿಗೂ ಸಿಗಬೇಕಾದ ಸೌಲಭ್ಯಗಳಾಗಿವೆ ಹೀಗಾಗಿ ಪ್ರಾಧಿಕಾರ ವಿಶೇಷ ಕಾಳಜಿಯಿಂದ ಪ್ರತಿ ತಾಲೂಕಿನಲ್ಲಿರುವ ಸಮಿತಿ ಸದಸ್ಯರಿಗೂ ಮಾಹಿತಿ ನೀಡಿ ಸಾಧ್ಯವಾದಷ್ಟು ಸಮಸ್ಯೆ ಪರಿಹಾರವಾಗುವ ನಿಟ್ಟಿನಲ್ಲಿ ಕ್ರಮ ವಹಿಸಿ ಯೋಜನೆಯ ಪಾಲಾನುಭವಿಗಳಾಗುವಂತೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಸಮಿತಿ ಸದಸ್ಯರು ಮಾತನಾಡಿ ಗ್ಯಾರಂಟಿ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕು ಯೋಜನೆಯ ಫಲಾನುಭವಿಗಳಾಗಿ ಆಯ್ಕೆ ಮಾಡುವ ಸಂದರ್ಭದಲ್ಲಿ ಏನಾದರೂ ನಿರ್ಲಕ್ಷ್ಯ ತೋರಿದ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕು ಯಾವುದೇ ಕಾರಣಕ್ಕೂ ತಾರತಮ್ಯವನ್ನು ಮಾಡಬಾರದು ಎಂದು ಸೂಚಿಸಿದರು‌.

ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಶಿವಕುಮಾರ್, ಸಮಿತಿಯ ಉಪಾಧ್ಯಕ್ಷರಾದ ಹಿದಾಯಿತ್ ಉಲ್ಲಾ ಷರೀಫ್, ನಾಗೇಶ್ವರಿ, ಸದಸ್ಯರಾದ ಮಂಗಳಾ, ಮಮತಾರೆಡ್ಡಿ, ನೀಲಕಂಠೇಗೌಡ, ಮಹಮ್ಮದ್ ಮುನೀರ್, ಉಮಾದೇವಿ, ಪಾರ್ಥಸಾರಥಿ, ಅಶ್ವಥ್ ರೆಡ್ಡಿ, ನಾಗರಾಜ್, ಭಾಗ್ಯಮ್ಮ, ಆಹಾರ ಇಲಾಖೆಯ ಲತಾ, ಬೆಸ್ಕಾಂ ಇಲಾಖೆಯ ಶುಭಾ, ಕೆ.ಎಸ್.ಆರ್.ಟಿ.ಸಿ ಡಿಸಿ ಶ್ರೀನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಂಶಿಕೃಷ್ಣ ಯುವಜನ ಇಲಾಖೆಯ ಮುನಿಕೃಷ್ಣ ಇದ್ದರು,

Leave a Reply

Your email address will not be published. Required fields are marked *

error: Content is protected !!