ನೀಡಲು ಸಾಧ್ಯವಿಲ್ಲದ ಗ್ಯಾರಂಟಿಗಳನ್ನು ಮುಂದಿಟ್ಟು, ಜನತೆಯನ್ನು ವಂಚಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಈಗ ಸಾಬೀತಾಗಿದೆ. ಪ್ರಮಾಣವಚನ ಸ್ವೀಕರಿಸಿದ ಕೂಡಲೇ ಜಾರಿಗೆ ತರುತ್ತೇವೆ ಎಂದಿದ್ದ ಗ್ಯಾರಂಟಿಗಳ ಲಾಭವನ್ನು ಯಾರಿಗೆ ಮತ್ತು ಹೇಗೆ ಕೊಡುತ್ತೇವೆ ಎಂಬ ಯಾವುದೇ ವಿವರ ನೀಡದೆ ಸಿದ್ದರಾಮಯ್ಯ ಸರ್ಕಾರ ಆದೇಶ ನೀಡುವ ನಾಟಕವಾಡಿದೆ.
ಇವು ಕೊಡುವ ಗ್ಯಾರಂಟಿಗಳಲ್ಲ, ಬದಲಾಗಿ ಕೈ ಎತ್ತುವ ಗ್ಯಾರಂಟಿಗಳು ಎಂಬುದನ್ನು ಕಾಂಗ್ರೆಸ್‌ನ ನಾಯಕರ ಹಾವಭಾವಗಳೇ ಸುಸ್ಪಷ್ಟವಾಗಿ ತೋರಿಸಿದೆ.
ಈಡೇರಿಸಲಾಗದ ಗ್ಯಾರಂಟಿಗಳನ್ನು ಕೇಂದ್ರ ಸರ್ಕಾರದ ಮೇಲೆ ಹಾಕುವ ಉದ್ದೇಶದಿಂದ ಈಗ ಸಂಪನ್ಮೂಲ ಕ್ರೋಢೀಕರಣ ಎಂಬ ಸಬೂಬು ಹೇಳಲಾಗುತ್ತಿದೆಯಷ್ಟೆ.
ಗ್ಯಾರಂಟಿಗಳನ್ನು ದಾರಿಯಲ್ಲಿ ಹೋಗುವವರಿಗೆಲ್ಲಾ ಕೊಡಲಾಗುತ್ತದೆಯೇ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಈಗ ಕೇಳುತ್ತಿದ್ದಾರೆ.
ಚುನಾವಣೆಗೂ ಮುನ್ನ ಹಾದಿಯಲ್ಲಿ ಹೋಗುವವರಿಗೆಲ್ಲಾ ಗ್ಯಾರಂಟಿ ಕಾರ್ಡ್ ನೀಡಿ ಈಗ ಈ ಧಾಟಿಯಲ್ಲಿ ಮಾತನಾಡುತ್ತಿದ್ದಾರೆ. ಹಾಗಾದರೆ ದಾರಿಯಲ್ಲಿ ಹೋಗುವವರು ಕನ್ನಡಿಗರಲ್ಲವೇ? ಪ್ರಶ್ನೆ ಮಾಡಿದ ಬಿಜೆಪಿ.
ರಾಜ್ಯದ ಇತಿಹಾಸದಲ್ಲೇ ಅತಿಹೆಚ್ಚು ಸಾಲ ಮಾಡಿ ಅದರ ಹೊಣೆಯನ್ನು ಮುಂದಿನ ಸರ್ಕಾರಗಳ ಹೆಗಲಿಗೆ ಹಾಕಿದ ಅಪಕೀರ್ತಿ ಸಿದ್ದರಾಮಯ್ಯನವರದ್ದು.
ಈಗಿನ ಗ್ಯಾರಂಟಿಗಳೂ ಜನರ ಒಂದು ಜೇಬಿನಿಂದ ತೆಗೆದು ಇನ್ನೊಂದು ಜೇಬಿಗೆ ಹಾಕುವ ನಾಟಕ. ಅದರಲ್ಲೂ ಸೋರಿಕೆಯಾಗಿ ಕಾಂಗ್ರೆಸ್ಸಿಗರ ಜೇಬುಗಳು ತುಂಬಿ ತುಳುಕಲಿರುವುದು ಇವರ ಗ್ಯಾರಂಟಿಯ ಅಸಲೀಯತ್ತು ಎಂದು ಬಿಜೆಪಿಯು ತನ್ನ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ವಿಚಾರಕ್ಕೆ ಪ್ರತಿಕ್ರಿಯಿಸಿದೆ.