ಗೌರಿ ಗಣೇಶ ಹಬ್ಬ: ಗೌರಿ ಗಣೇಶ ಪ್ರತಿಷ್ಠಾಪನೆ-ವಿಸರ್ಜನೆಗೆ 21 ಷರತ್ತುಗಳ ಪಾಲನೆ ಕಡ್ಡಾಯ: ಪಾಲಿಸದೇ ಇದ್ದರೆ ಕಾನೂನು ಕ್ರಮ: ಪೊಲೀಸ್ ಇಲಾಖೆ ಖಡಕ್ ಎಚ್ಚರಿಕೆ

ಗೌರಿ ಗಣೇಶ ಹಬ್ಬ ಆಚರಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು, ಅಡೆತಡೆಗಳು ಉಂಟಾಗದಂತೆ ಪೊಲೀಸರು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಈ ಕೆಳಕಂಡ ಮಾರ್ಗಸೂಚಿಗಳಿಗೆ ಅನುಗುಣವಾಗಿ ಗೌರಿ ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮಾಡಬೇಕಾಗಿ ಪೊಲೀಸ್ ಇಲಾಖೆ ಷರತ್ತುಗಳನ್ನ ವಿಧಿಸಿದೆ.

ಷರತ್ತುಗಳ ವಿವರ

1) ಖಾಸಗಿ / ಸರ್ಕಾರಿ ಜಾಗದಲ್ಲಿ ಪ್ರತಿಷ್ಠಾಪನೆ ಮಾಡಲು ಸಂಬಂಧಪಟ್ಟ ಗ್ರಾಮ ಪಂಚಾಯಿತಿಯಿಂದ, ಸ್ಥಳೀಯ ಆಡಳಿತದಿಂದ ಪೂರ್ವಾನುಮತಿಯನ್ನು ಪಡೆದು ಸದರಿ ಪತ್ರವನ್ನು ಹಾಜರುಪಡಿಸುವುದು ಮತ್ತು ಗಣೇಶ ಆಚರಣೆಯನ್ನು ಗರಿಷ್ಠ 5 ದಿನಗಳಿಗೆ ಹೆಚ್ಚು ದಿನ ಆಚರಿಸುವಂತಿಲ್ಲ.

2) ಪ್ರತಿಷ್ಠಾಪನೆ ಸ್ಥಳ ಖಾಸಗಿ ಮಾಲೀಕತ್ವಕ್ಕೊಳಪಟ್ಟಲ್ಲಿ ಸ್ಥಳದ ಮಾಲೀಕರಿಂದ ನಿರಾಪೇಕ್ಷಣಾ ಪತ್ರ ಪಡೆಯುವುದು.

3) ರಸ್ತೆ ಸಂಚಾರಕ್ಕೆ ಅಡಚಣೆಯಾಗದಂತೆ ಶಡ್ / ಪೂಜಾ ಸ್ಥಳ ನಿರ್ಮಿಸಿಕೊಳ್ಳುವುದು.

4) ಧ್ವನಿ ವರ್ಧಕ ಅನುಮತಿ ಪತ್ರ ಸಂಬಂಧಪಟ್ಟ ಪ್ರಾಧಿಕಾರದಿಂದ ಪಡೆದುಕೊಳ್ಳುವುದು.

5) ಬೆಸ್ಕಾಂ ಇಲಾಖೆಯಿಂದ ಅನುಮತಿ ಪತ್ರ ತಪ್ಪದೇ ಪಡೆಯುವುದು.

6) ಪ್ರತಿಷ್ಠಾಪನೆ ದಿನಾಂಕದಿಂದ ವಿಸರ್ಜನೆ ದಿನಾಂಕದವರೆಗೆ ಪ್ರತಿ ದಿನ ಹಗಲು / ರಾತ್ರಿ ಪಾಳೀಯ ಕಾವಲುಗಾರ ಮಂಡಳಿ / ಸಂಘದ ಸದಸ್ಯರ ಹೆಸರು, ವಿವರ, ಮೊಬೈಲ್‌ ಸಂಖ್ಯೆಗಳನ್ನು ನೀಡುವುದು.

7)ಯಾವುದೇ ಮನರಂಜನಾ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ ಹಾಗೂ ಡಿ.ಜೆ ಸೌಂಡ್ / ಧ್ವನಿವರ್ಧಕ ಬಳಸುವಂತಿಲ್ಲ.

8) ಮೆರವಣಿಗೆ ಮಾರ್ಗಗಳನ್ನು ಅನುಮತಿ ಪಡೆಯುವ ಸಮಯದಲ್ಲಿ ಸೂಚಿಸಿದಂತೆ ಹೋಗತಕ್ಕದ್ದು. ಯಾವುದೇ ಕಾರಣಕ್ಕೂ ಮಾರ್ಗ ಬದಲಾಯಿಸುವಂತಿಲ್ಲ.

9) ಮೆರವಣಿಗೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವುದು.

10) ಗಣೇಶ ವಿಸರ್ಜನೆಯನ್ನು ಸಂಜೆ 6:00 ಗಂಟೆಯೊಳಗೆ ಮಾಡತಕ್ಕದ್ದು.

11) ಗಣೇಶ ಮೆರವಣಿಗೆ ಹಾಗೂ ವಿಸರ್ಜನೆ ಸಮಯದಲ್ಲಿ ಮಧ್ಯ ಸೇವನೆ ಮಾಡಿ ಭಾಗವಹಿಸಬಾರದು.

12) ಗಣೇಶ ವಿಸರ್ಜನೆ ಸಮಯದಲ್ಲಿ ನುರಿತ 4 ಜನ ಈಜುಗಾರರನ್ನು ವಿಸರ್ಜಿಸಲು ನೇಮಕಮಾಡತಕ್ಕದ್ದು, ಈ ಈಜುಗಾರರೂ ಸಹ ಮಧ್ಯ ಸೇವನೆ ಮಾಡಬಾರದು.

13) ವಿಸರ್ಜನೆ ಸ್ಥಳ ಯಾವುದೆಂದು ಮುಂಚಿತವಾಗಿ ಗೊತ್ತು ಪಡಿಸತಕ್ಕದ್ದು.

14) ಗೌರಿ-ಗಣೇಶ ಹಬ್ಬದ ಸಲುವಾಗಿ ಯಾವುದೇ ಅನಾಹುತಗಳಿಗೆ ಅವಕಾಶ ನೀಡದಂತೆ ಆಚರಿಸತಕ್ಕದ್ದು

15) ಸ್ವಯಂ ಸೇವಕರ ಗುರುತಿನ ಚೀಟಿ / ಗುರುತಿನ ಯೂನಿಫಾರಂ ಧರಿಸತಕ್ಕದ್ದು.

16) ಕಾನೂನು-ಸುವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ಭಂಗವನ್ನುಂಟು ಮಾಡದಂತೆ ಆಚರಿಸಬೇಕು.

17) ಗಣೇಶ ಹಬ್ಬವನ್ನು ಸರಳವಾಗಿ ಮತ್ತು ಭಕ್ತಿಪೂರ್ವಕವಾಗಿ ತಮ್ಮ ತಮ್ಮ ಮನೆಗಳಲ್ಲಿ ಹಾಗೂ ಖಾಸಗಿ/ಸರ್ಕಾರಿ/ಸಾರ್ವಜನಿಕ ಬಯಲು ಪ್ರದೇಶದಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಆಚರಿಸುವುದು.

18) ಗಣೇಶ ಮೂರ್ತಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಎತ್ತರ ಮೀರದಂತೆ ಹಾಗೂ ಮನೆಗಳಲ್ಲಿ 2 ಅಡಿ ಎತ್ತರ ಮೀರದಂತೆ ಪ್ರತಿಷ್ಠಾಪಿಸುವುದು.

19) ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿರ್ಸಜನೆ ಸಮಯದಲ್ಲಿ ಡಿ.ಜೆ ಗಳನ್ನು ಬಳಸಿ ಯಾವುದೇ ರೀತಿಯ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿರುವುದಿಲ್ಲ.

20) ಪೊಲೀಸ್‌ ಇಲಾಖೆಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕು ಹಾಗೂ ಪೊಲೀಸ್ ಇಲಾಖೆ ಆಗಿಂದ್ದಾಗ್ಗೆ ನೀಡುವ ಸಲಹೆ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.

21) ಯಾವುದಾದರೂ ಮಾಹಿತಿ ಇದ್ದಲ್ಲಿ ಅಥವಾ ತುರ್ತು ಸಂಧರ್ಭದಲ್ಲಿ ಕೂಡಲೇ 112 ಗೆ ಕರೆ ಮಾಡಿ ಮಾಹಿತಿ ನೀಡಲು ಸೂಚಿಸಿದೆ.

ಮೇಲ್ಕಂಡ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಿ ಗೌರಿ-ಗಣೇಶ ಹಬ್ಬವನ್ನು ಭಕ್ತಿಪೂರ್ವಕವಾಗಿ ಮತ್ತು ಶಾಂತಿಯುತವಾಗಿ ಆಚರಿಸಲು ಸೂಚಿಸಲಾಗಿದೆ. ಒಂದು ವೇಳೆ ಷರತ್ತುಗಳ ಉಲ್ಲಂಘನೆ ಕಂಡಬಂದಲ್ಲಿ ಇಲಾಖೆ ವತಿಯಿಂದ ನೀಡಿರುವ ಅನುಮತಿಯನ್ನ ರದ್ದುಪಡಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಪೊಲೀಸ್ ಇಲಾಖೆ ಖಡಕ್ ಎಚ್ಚರಿಕೆ ನೀಡಲಾಗಿದೆ.

Leave a Reply

Your email address will not be published. Required fields are marked *