
ಪಿಓಪಿ ಗಣೇಶ ಮೂರ್ತಿಗಳಿಗೆ ಕಡ್ಡಾಯವಾಗಿ ನಿಷೇಧ ಮಾಡಲಾಗಿದೆ. ಅಲ್ಲದೆ ಬಣ್ಣದ ಗಣಪಗಳನ್ನ ಬಳಸಬಾರದು, ಪರಿಸರ ಸ್ನೇಹಿ ಮಣ್ಣಿನ ಗಣಪಗಳಿಗೆ ಮಾತ್ರ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಹೇಳಿದರು.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಗೌರಿ ಗಣೇಶ, ಈದ್ ಮಿಲಾದ್ ಹಬ್ಬದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಗಣೇಶ ಪ್ರತಿಷ್ಠಾಪನೆಗೆ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಸಿಂಗಲ್ ವಿಂಡೋ ಮೂಲಕ ಅನುಮತಿ ನೀಡಲಾಗುವುದು. ಅವಘಡಗಳು ಸಂಭವಿಸಿದರೆ ಮುಖ್ಯಸ್ಥರೆ ಜವಾಬ್ದಾರಿಯಾಗಿರುತ್ತಾರೆ. ಪರಿಸರಕ್ಕೆ ಧಕ್ಕೆಯಾಗದಂತೆ ವಿಸರ್ಜನೆ ಮಾಡಬೇಕು. ಡಿಜೆಗೆ ಸರ್ಕಾರದ ಸೂಚನೆಗಳ ಪ್ರಕಾರ ಅನುಮತಿ ಪಡೆಯಬೇಕು. ಪ್ರತಿವರ್ಷದಂತೆ ಸೌಹಾರ್ದಯುತವಾಗಿ ಹಬ್ಬವನ್ನು ಆಚರಿಸಬೇಕು. ಒಬ್ಬರ ಮನಸ್ಸಿಗೆ ನೋವಾಗದಂತೆ ಪ್ರೀತಿ, ವಿಶ್ವಾಸದಿಂದ ಹಬ್ಬಗಳನ್ನ ಆಚರಿಸಲು ಸೂಚನೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ ಮಾತನಾಡಿ, ಜಿಲ್ಲೆಯ ಜನರ ಸುರಕ್ಷತೆ ನಮಗೆ ಮುಖ್ಯ, ಆಚರಣೆಗಳು ಸಂತೋಷದಿಂದ ಕೂಡಿರಬೇಕು. ಸರ್ಕಾರದ ನಿಯಮಾನುಸರ ಆಚರಿಸುವುದು ಸೂಕ್ತವಾಗಿದೆ. ಪರಿಸರಕ್ಕೆ ಹಾನಿಯಾಗದ ಮಣ್ಣಿನ ಗಣಪಗಳನ್ನು ಬಳಸಬೇಕು. ಗಣೇಶ ವಿಸರ್ಜನೆಗಳನ್ನು ತಾಲ್ಲೂಕು ಪಂಚಾಯತಿ, ನಗರಸಭೆ, ಪುರಸಭೆಗಳಿಂದ ಗುರುತಿಸಿದ ಸ್ಥಳಗಳಲ್ಲಿಯೇ ವಿಸರ್ಜಿಸಬೇಕು. ಡಿಜೆ ವಿಚಾರದಲ್ಲಿ ಸರ್ಕಾರ ಹೊರಡಿಸಿರುವ ಸುತ್ತೋಲೆಯ ಅಂತಿಮ ಅದನ್ನು ಪಾಲಿಸಲೇಬೇಕು. ಗಣಪತಿ ಪ್ರತಿಷ್ಠಾಪಿಸಿರುವವರು ರಾಜಕೀಯಕ್ಕೆ ಅವಕಾಶ ನೀಡಬಾರದು ಎಂದು ತಿಳಿಸಿದರು.
ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕಟೌಟ್, ಬಂಟ್ಟಿಂಗ್ಸ್, ಬ್ಯಾನರ್ ಗಳನ್ನು ರಸ್ತೆಗೆ ಅಡ್ಡಲಾಗಿ ಕಟ್ಟುವುದು, ವಿದ್ಯುತ್ ಕಂಬಗಳಿಗೆ, ಲೈನ್ ಗಳ ಮೇಲೆ ಕಟ್ಟಬಾರದು. ಪ್ರಚೋದನಕಾರಿ ಅಥವಾ ವಿವಾದಾತ್ಮಕ ಬ್ಯಾನರ್ಸ್, ಬಂಟಿಂಗ್ಸ್ ಗಳನ್ನು ಅಳವಡಿಸಬಾರದು ಎಂದರು.
ಹಬ್ಬದ ಸಮಯದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಹಬ್ಬಿಸುವುದು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ. ಒಂದು ವೇಳೇ ಹಾಗೇನಾದರು ಮಾಡಿದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಸಭೆಯಲ್ಲಿ ಸೌಂಡ್ ಸಿಸ್ಟಂ ಮಾಲೀಕರು ಡಿಜೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಎಸ್ಪಿ ಬಾಬಾ ರಾಜ್ಯಾದ್ಯಂತ ಸರ್ಕಾರದ ಆದೇಶ ಇದೆ. ನಿರ್ದಿಷ್ಟವಾದ ಸೂಚನೆಗಳಿವೆ. ಅದರ ಪ್ರಕಾರ ಪಾಲನೆ ಮಾಡಬೇಕು ಎಂದರು.
ಈದ್ ಮಿಲಾದ್ ಕುರಿತಾಗಿ ತಾಲ್ಲೂಕಿನಲ್ಲಿ ಈವರೆಗೆ ಯಾವುದೇ ಅಹಿತಕರ ಘಟನೆ ನಡೆದ ಇತಿಹಾಸವಿಲ್ಲ. ಹಿಂದೂ-ಮುಸ್ಲಿಂ ಬಾಂಧವರು ಅಣ್ಣ ತಮ್ಮಂದಿರಂತೆ ಇದ್ದೇವೆ. ಈದ್ ಮೀಲಾದ್ ಹಬ್ಬದಂದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು. ಸಿಹಿ ಹಂಚಿ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಮುಸ್ಲಿಂ ಸಮುದಾಯದ ಮುಖಂಡರು ತಿಳಿಸಿದರು.
ಪೌರಾಯುಕ್ತ ಕಾರ್ತಿಕೇಶ್ವರ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಗಣೇಶ ವಿಸರ್ಜನೆಗೆ ತಾತ್ಕಾಲಿಕವಾಗಿ ಹೊಂಡ ತೆರೆಯಲಾಗುವುದು. ಬೆಸ್ಕಾಂ, ಅಗ್ನಿಶಾಮಕ, ಪೊಲೀಸ್, ಇಲಾಖೆಗಳಿಂದ ಸಿಂಗಲ್ ವಿಂಡೋ ಸಿಸ್ಟಮ್ ಮೂಲಕ ಅನುಮತಿ ನೀಡಲಾಗುವುದು ಎಂದರು.

ಈ ವೇಳೆ ಉಪವಿಭಾಗಾಧಿಕಾರಿ ದುರ್ಗಾಶ್ರೀ, ತಹಶೀಲ್ದಾರ್ ವಿಭಾ ವಿದ್ಯಾ ರಾಠೊಡ್, ಡಿವೈಎಸ್ಪಿ ರವಿ.ಪಿ, ತಾಲ್ಲೂಕು ಪಂಚಾಯತಿ ಇಓ ಮಂಜುನಾಥ ಹರ್ತಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್, ಇನ್ಸ್ಪೆಕ್ಟರ್ ಗಳಾದ ಡಾ.ನವೀನ್ ಕುಮಾರ್ ಎಂ.ಬಿ, ಅಮರೇಶ್ ಗೌಡ, ಸಾಧಿಕ್ ಪಾಷಾ ಸೇರಿದಂತೆ ಮತ್ತಿತ್ತರರು ಇದ್ದರು.