ಸರ್ಕಾರಿ ಗೋಮಾಳವನ್ನು ಒತ್ತುವರಿ ಮಾಡಿರುವ ಭೂಗಳ್ಳರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ತಹಶೀಲ್ದಾರ್ ಕಚೇರಿ ಎದುರು ಕರ್ನಾಟಕ ಭೀಮ್ ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಭೀಮ್ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿರಾಜ್, ತಾಲ್ಲೂಕಿನ ಕಸಬಾ ಹೋಬಳಿ, ಪಾಲನಜೋಗಹಳ್ಳಿ ಗ್ರಾಮದ ಸರ್ವೆ ನಂ.21ರಲ್ಲಿ, 18 ಎಕರೆ 20 ಗುಂಟೆ ಸಂಪೂರ್ಣ ಜಮೀನು ಗೋಮಾಳ ಎಂದು ಸರ್ಕಾರಿ ದಾಖಲೆಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದೆ, ಅದರಲ್ಲಿ ರಂಗಮ್ಮ ಕೋಂ ವೆಂಕಟೇಶಯ್ಯ ಎಂಬುವರಿಗೆ ತಹಸೀಲ್ದಾರ್ ರ ಆದೇಶದಂತೆ ನಂಬರ್ 65/60-61 ರಂತ 2 ಎಕರೆ ಜಮೀನು ದರಖಾಸ್ತು ಮೂಲಕ ಮಂಜೂರಾಗಿದ್ದು, ಉಳಿಕೆ 16 ಎಕರೆ 20 ಗುಂಟೆ ಸರ್ಕಾರಿ ಜಮೀನು ಭೂಗಳ್ಳರು ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ಮೊಸ ಮಾಡಿದ್ದಾರೆ ಎಂದು ಆರೋಪಿಸಿದರು.
18 ಎಕರೆ ಭೂಮಿಯಲ್ಲಿ ಸುಮಾರು ಮೂರು ಎಕರೆಯಷ್ಟು ಭೂ ಪರಿವರ್ತನೆಯಾಗಿದ್ದು ಸದರಿ ಸ್ಥಳದಲ್ಲಿ 106 ನಿವೇಶನಗಳನ್ನು ವಿಂಗಡಿಸಿದ್ದಾರೆ, ಕೊಡಿಗೆಹಳ್ಳಿ ಪಂಚಾಯತಿ ವ್ಯಾಪ್ತಿಗೆ ಬರುವ ಈ ಸದರಿ ನಿವೇಶನಗಳಿಗೆ ಪಂಚಾಯಿತಿಯಲ್ಲಿ ಖಾತೆ ಸಹ ದಾಖಲಾಗಿಲ್ಲ, ಆದರೂ ನಕಲಿ ದಾಖಲೆ ಸೃಷ್ಟಿ ಮಾಡಿ ಮಾರಾಟ ಮಾಡಿ ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ ರಿಜಿಸ್ಟರ್ ಮಾಡಿಸುತ್ತಿದ್ದಾರೆ.
ಸ್ವಂತ ನಿವೇಶನ ಇಲ್ಲದ ನೂರಾರು ಕುಟುಂಬಗಳು ಬೀದಿಯಲ್ಲಿವೆ, ಆದರೆ ಭೂಗಳ್ಳರು ಕೋಟ್ಯಾಂತರ ರೂಗಳ ಭೂಮಿಯನ್ನು ಕಬಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಅಧಿಕಾರಿಗಳಿಗೆ ಎರಡು ಬಾರಿ ಅಕ್ರಮ ಭೂ ಒತ್ತುವರಿ ಬಗ್ಗೆ ಮನವಿ ಸಲ್ಲಿಸಿದ್ದೇವೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ, ತಹಶಿಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ಈ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ದಾಖಲಾತಿಗಳನ್ನು ಪರಿಶೀಲನೆ ನಡೆಸಿ ಕಾನೂನು ಉಲ್ಲಂಘಿಸಿರುವ ಅಧಿಕಾರಿಗಳು ಮತ್ತು ಭೂಗಳ್ಳರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಭೂಮಿಯನ್ನು ಭೂ ರಹಿತರಿಗೆ ಹಂಚಬೇಕೆಂದು ಒತ್ತಾಯಿಸಿದರು.
ಭೂಗಳ್ಳರು ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ತಹಸೀಲ್ದಾರ್ ಮೋಹನ ಕುಮಾರಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಕರ್ನಾಟಕ ಭೀಮ್ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಶಂಕರ್ ರಾಮಲಿಂಗಯ್ಯ, ಬೆಂ.ಗ್ರಾ. ಜಿಲ್ಲಾಧ್ಯಕ್ಷ ನಂಜೇಶ್, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್, ತಾಲ್ಲೂಕು ಅಧ್ಯಕ್ಷ ದಾಳಪ್ಪ ದಲಿತ ಮುಖಂಡ ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.