ಕೋಲಾರ: ಸರ್ಕಾರಿ ಗೋಮಾಳ ಜಮೀನನ್ನು ಕಾನ್ಫಿಡೆಂಟ್ ಮಾಲೀಕರಿಗೆ ಮಂಜೂರು ಮಾಡಲು ಮುಂದಾಗಿರುವ ತಾಲೂಕು ಆಡಳಿತದ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ನ.8ರ ಶುಕ್ರವಾರ ಕೋಳಿಗಳು, ಮಡಿಕೆಗಳ ಸಮೇತ ರಾಜ್ಯ ಹೆದ್ದಾರಿ ಹಂಚಾಳ ಗೇಟ್ ಬಂದ್ ಮಾಡಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಿಲ್ಲಾದ್ಯಂತ ಪ್ರಾಮಾಣಿಕವಾಗಿ ಸರ್ಕಾರಿ ಆಸ್ತಿಗಳನ್ನು ಉಳಿಸಲು ಮುಂದಾಗುವ ಅಧಿಕಾರಿಗಳನ್ನು ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಿ ಮಾನಸಿಕ ಹಿಂಸೆ ನೀಡಿ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡುವ ದಂಧೆ ನಿರಂತರವಾಗಿ ದಿವಂಗತ ಡಿ.ಕೆ.ರವಿ ಅವರ ಅವಧಿಯಿಂದಲೂ ಇದುವರೆಗೂ ನಡೆಯುತ್ತಲೇ ಬರುತ್ತಿದೆ ಆದರೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ಉಳಿಸುವ ಪ್ರಯತ್ನವನ್ನು ಜಿಲ್ಲೆಯ ಪ್ರಗತಿಪರ ಸಂಘಟನೆಗಳು ಮಾಡಬೇಕೆಂದು ರೈತಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಸಭೆಯಲ್ಲಿ ಮನವಿ ಮಾಡಿದರು.
ಜಿಲ್ಲಾದ್ಯಂತ ಸಾವಿರಾರು ಎಕರೆ ಕೆರೆ, ಗೋಮಾಳ, ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಪ್ರಭಾವಿ ರಾಜಕಾರಣಿಗಳು, ಅವರ ಹಿಂಬಾಲಕರ ವಿರುದ್ಧ ದಾಖಲೆಗಳ ಸಮೇತ ಮಾನ್ಯ ಲೋಕಾಯುಕ್ತ ಮತ್ತು ಭೂಕಬಳಿಕೆ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸಿದ್ದೇನೆ. ಜೊತೆಗೆ ಆಯಾ ಗ್ರಾಮೀಣ ಪ್ರದೇಶದ ಸರ್ಕಾರಿ ಆಸ್ತಿಗಳನ್ನು ರೈತರೇ ಉಳಿಸಲು ಮುಂದಾದರೆ ಗಾಲ್ಫ್ನಂತಹ ಭೂಗಳ್ಳರನ್ನು ಜಿಲ್ಲೆಯಿಂದ ಓಡಿಸಬಹುದೆಂದು ಸಲಹೆ ನೀಡಿದರು.
ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಶ್ರೀಮಂತರ ಮೋಜು ಮಸ್ತಿಗಾಗಿ ನಿರ್ಮಾಣಗೊಂಡಿರುವ ಕಾನ್ಪಿಡೆಂಟ್ ಗ್ರೂಪ್ ಮಾಲೀಕತ್ವದ ಗಾಲ್ಫ್ ಸಂಸ್ಥೆಗೆ 7 ಎಕರೆ ಸರ್ಕಾರಿ ‘ಬಿ’ ಖರಾಬು ಜಮೀನನ್ನು ಮಂಜೂರು ಮಾಡಲು ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಿ ಸ್ಥಳೀಯ ಕಂದಾಯ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ಮಾಡಿ ವರದಿ ನೀಡಿರುವುದು ಯಾವ ನ್ಯಾಯ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.
ಏಷ್ಯಾದಲ್ಲೇ ಅತಿದೊಡ್ಡ 2ನೇ ಮಾರುಕಟ್ಟೆ ಎಂದು ಹೆಸರು ಪಡೆದಿರುವ ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾಗಿರುವ ಟೊಮೇಟೊ ಮಾರುಕಟ್ಟೆಗೆ ಜಾಗ ಗುರುತಿಸಲು ಜನಪ್ರತಿನಿಧಿಗಳು, ಕಂದಾಯ ಅಧಿಕಾರಿಗಳಿಗೆ ಅಂಗೈ ಅಗಲ ಸರ್ಕಾರಿ ಜಮೀನು ಸಿಗುವುದಿಲ್ಲ. ಆದರೆ, ಏಕಾಏಕಿ ಸರ್ಕಾರಿ ಜಮೀನನ್ನು ಬಡವರಿಗೆ ಅಥವಾ ಗ್ರಾಮೀಣ ಪ್ರದೇಶದ ಕುರಿಗಾಹಿಗಳಿಗೆ ಮೀಸಲಿಡುವ ಬದಲು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಜಮೀನನ್ನೇ ಬಲಾಢ್ಯರಿಗೆ ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶವಿದೆಯೇ. ಅವಕಾಶವಿದ್ದರೆ ಪ್ರತಿ ಹಳ್ಳಿಯಲ್ಲೂ ಜಾನುವಾರುಗಳಿಗೆ, ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರಿ ಜಮೀನನ್ನು ಏಕೆ ಮಂಜೂರು ಮಾಡಬಾರದೆಂದು ಪ್ರಶ್ನಿಸಿದರು.
ಕಸಬಾ ಕಂದಾಯ ವ್ಯಾಪ್ತಿಯ ವಗ್ಗಯ್ಯನದಿನ್ನೆ ಗ್ರಾಮದ ಸರ್ವೇ ನಂ.9 ರಲ್ಲಿ 29 ಗುಂಟೆ ಸರ್ವೇ ನಂ.21ರಲ್ಲಿ 19 ಗುಂಟೆ, ಸವೇ ನಂ.23ರಲ್ಲಿ 1 ಎಕರೆ 42 ಗುಂಟೆ, ಸರ್ವೇ ನಂ.42ರಲ್ಲಿ 2 ಎಕರೆ 37 ಗುಂಟೆ, ಸಿದ್ದನಹಳ್ಳಿ ಗ್ರಾಮದ ಸರ್ವೇ ನಂ.98ರಲ್ಲಿ 1 ಎಕರೆ 23 ಗುಂಟೆ ಒಟ್ಟು 8 ಎಕರೆ 19 ಗುಂಟೆ ಬಿ ಖರಾಬು ಜಮೀನನ್ನು ಗಾಲ್ಫ್ ಸಂಸ್ಥೆಗೆ ಕಾನೂನು ಬಾಹಿರವಾಗಿ ಮಂಜೂರು ಮಾಡುವಂತೆ ಸರ್ಕಾರದಿಂದ ಸ್ಥಳೀಯ ಕಂದಾಯ ಅಧಿಕಾರಿಗಳಿಗೆ ಒತ್ತಡ ಹಾಕಿ ವರದಿ ನೀಡುವಂತೆ ಜನಪ್ರತಿನಿಧಿಗಳು ಬಲಾಢ್ಯರ ಪರ ನಿಂತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ, ಅನಿಗಾನಹಳ್ಳಿ ಗ್ರಾಮದ ಸರ್ವೇ ನಂ.36ರ 35 ಗುಂಟೆ ಗುಂಡು ತೋಪು ಜಮೀನಿನ ಪೈಕಿ 13 ಗುಂಟೆ ಜಮೀನನ್ನು ಸಾರ್ವಜನಿಕ ರಸ್ತೆಗಾಗಿ ಮಾನ್ಯ ಶಾಸಕರು ಅಭಿವೃದ್ಧಿಪಡಿಸುವ ಖಾಸಗಿ ಲೇಔಟ್ ಗೆ ರಸ್ತೆಗಾಗಿ ಕಾಯ್ದಿರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸ್ಥಳೀಯ ಕಂದಾಯ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಆದೇಶ ಮಾಡುವಂತೆ ಒತ್ತಡವೂ ಸಹ ಹಾಕಿದ್ದಾರೆಂದು ಆರೋಪಿಸಿದರು.
ಸರ್ಕಾರಿ ಬಿ ಖರಾಬು ಜಮೀನನ್ನು ಯಾವುದೇ ಕಾರಣಕ್ಕೂ ಕಾನ್ಪಿಡೆಂಟ್ ಗ್ರೂಪ್ ಗೆ ಮಂಜೂರು ಆದೇಶ ಮಾಡಬಾರದು. ಜೊತೆಗೆ ಅನಿಗಾನಹಳ್ಳಿ ಗುಂಡುತೋಪಿನಲ್ಲಿ ಸಾರ್ವಜನಿಕ ರಸ್ತೆ ಹೆಸರಿನಲ್ಲಿ ಭೂ ಒತ್ತುವರಿ ತೆರವುಗೊಳಿಸಬೇಕು. ಮತ್ತು ಗಾಲ್ಫ್ ಮಾಲೀಕರು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಆಸ್ತಿಗಳನ್ನು ತೆರವುಗೊಳಿಸಲು ವಿಶೇಷ ಕಂದಾಯ, ಸರ್ವೇ ಅಧಿಕಾರಿಗಳ ತಂಡವನ್ನು ರಚನೆ ಮಾಡುವಂತೆ ನ.೮ರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಕೋಳಿಗಳು ಮತ್ತು ಮಡಿಕೆಗಳ ಸಮೇತ ರಾಜ್ಯ ಹೆದ್ದಾರಿ ಹಂಚಾಳ ಗೇಟ್ ಬಂದ್ ಮಾಡುವ ಮುಖಾಂತರ ಸರ್ಕಾರಿ ಆಸ್ತಿಯನ್ನು ಉಳಿಸುವ ಹೋರಾಟವನ್ನು ಕೈಗೊಳ್ಳುವ ಜೊತೆಗೆ ಹೋರಾಟದ ಸ್ಥಳಕ್ಕೆ ಮಾನ್ಯ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ಸ್ಥಳೀಯ ತಹಸೀಲ್ದಾರ್, ಕಂದಾಯ ಅಧಿಕಾರಿಗಳು ಬಂದು ಆದೇಶವನ್ನು ವಾಪಸ್ ಪಡೆಯುವ ಮಾತು ನೀಡುವ ತನಕ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲವೆಂದು ಸಭೆಯಲ್ಲಿ ಒಗ್ಗಟ್ಟಿನ ನಿರ್ಣಯವನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ತಾಲೂಕು ಅಧ್ಯಕ್ಷ ಕದಿರಿನತ್ತ ಅಪ್ಪೋಜಿರಾವ್, ಮುನಿಕೃಷ್ಣ, ಚಾಂದ್ ಪಾಷ, ಕಿರಣ್, ತಿಮ್ಮಣ್ಣ, ಸುಪ್ರೀಂ ಚಲ, ಫಾರೂಖ್ ಪಾಷ, ವಿಜಯ ಪಾಲ್, ವಿಶ್ವ, ಜುಬೇರ್ ಪಾಷ, ಕೃಷ್ಣಪ್ಪ, ಶೈಲಜ, ಗೌರಮ್ಮ, ರತ್ನಮ್ಮ, ವೆಂಕಟಮ್ಮ ಮುಂತಾದವರಿದ್ದರು.