ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಇಂದು ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ನೊಂದಿರುವ ನಾಡಿನ ನನ್ನ ತಾಯಂದಿರ, ಅಕ್ಕ ತಂಗಿಯರ ಆರ್ಥಿಕ ಹೊರೆಯನ್ನು ತುಸು ತಗ್ಗಿಸಿ, ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ನೆರವಾಗುವ ದೃಷ್ಟಿಯಿಂದ ನಾವು ಘೋಷಣೆ ಮಾಡಿರುವ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಇಂದು ಚಾಲನೆ ನೀಡಿದ್ದೇನೆ ಎಂದು ಸಿಎಂ‌ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸರ್ಕಾರದ ಬಹು ನಿರೀಕ್ಷಿತ ಗೃಹಲಕ್ಷ್ಮಿ ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದ ಅವರು, ಅರ್ಹ ಫಲಾನುಭವಿಗಳು ತಪ್ಪದೇ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದು‌‌ ಮನವಿ ಮಾಡಿದ್ದಾರೆ.

ಪ್ರಜೆಗಳ ಹಿತ ಕಾಯುವುದು ರಾಜಕೀಯ ಧರ್ಮ. ಎಷ್ಟೇ ವಿರೋಧ, ಟೀಕೆಗಳು ಬಂದರೂ ಈ ನಮ್ಮ ನಿಲುವಿನಲ್ಲಿ ಎಳ್ಳಷ್ಟು ಬದಲಾಗದು ಎಂದು ತಿಳಿಸಿದ್ದಾರೆ.

ನಂತರ ಮಹಿಳಾ ಮತ್ತ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಹಿಳೆಯರಿಗೆ ಪ್ರತಿ ತಿಂಗಳು ಹಣ ನೀಡುವಂತ ಯೋಜನೆ ಇಡೀ ವಿಶ್ವದಲ್ಲೇ ಇದು ಮೊದಲನೆಯದಾಗಿದೆ.

ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಸುಮಾರು 1. 28 ಕೋಟಿ ಕುಟುಂಬಗಳಿಗೆ ಈ ಯೋಜನೆಯ ಮೂಲಕ ಅನುಕೂಲವಾಗಲಿದೆ. ಮುಂದಿನ ತಿಂಗಳಲ್ಲಿ ಮನೆ ಯಜಮಾನಿಗೆ ₹ 2,000/- ಹಣ ಜಮಾ ಆಗಲಿದೆ. ಇಂದು ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡಿದ ದಿನ, ಇಂದೇ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗುತ್ತಿರುವುದು ನನ್ನ ಪುಣ್ಯ ಎಂದರು.

ಮನೆ ಮನೆಗೂ ಈ ಯೋಜನೆ ತಲುಪಲಿ ಸರ್ಕಾರ ನೀಡುತ್ತಿರುವ ₹ 2000/- ರೂ,ಗಳು ಪ್ರತಿ ಬಡ ಕುಟುಂಬದ ಹಸಿವನ್ನ ನೀಗಿಸಲು ಸಹಕಾರಿಯಾಗಲಿದೆ. ನಾನೊಬ್ಬ ರೈತನ ಮಗಳು ಕಷ್ಟವನ್ನು ಹತ್ತಿರದಿಂದ ನೋಡಿದ್ದೇನೆ. ಹಳ್ಳಿಯ ಜೀವನ ಅನುಭವಿಸಿದ್ದೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗೃಹಲಕ್ಷ್ಮಿ ಯೋಜನೆಯ ಲಾಂಛನ ಮತ್ತು ಪೋಸ್ಟರ್ ಅನ್ನು ಅನಾವರಣಗೊಳಿಸಲಾಯಿತು.

ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಸಿ.ಮಹದೇವಪ್ಪ, ರಾಮಲಿಂಗಾರೆಡ್ಡಿ, ಕೆಎಚ್ ಮುನಿಯಪ್ಪ, ರಹೀಂ ಖಾನ್, ಪ್ರಿಯಾಂಕ್ ಖರ್ಗೆ, ಬೈರತಿ‌ ಸುರೇಶ್, ಶಾಸಕರಾದ ಶ್ರೀನಿವಾಸ ಮಾನೆ, ಆಸಿಫ್ ಸೇಠ್, ಬಾಬಾಸಾಹೇಬ ಪಾಟೀಲ, ಎ.ಆರ್.ಕೃಷ್ಣಮೂರ್ತಿ, ಎನ್.ಎಚ್.ಕೋನರಡ್ಡಿ, ವಿಧಾನಪರಿಷತ್ ಸದಸ್ಯರಾದ ನಾಗರಾಜ್ ಯಾದವ್, ಸಲೀಂ ಅಹಮದ್, ಚನ್ನರಾಜ ಹಟ್ಟಿಹೊಳಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮ ಉಪಸ್ಥಿತರಿದ್ದರು. ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Leave a Reply

Your email address will not be published. Required fields are marked *