ಗುಮ್ಮಟನಗರಿ ವಿಜಯಪುರದಲ್ಲಿ ನಾಗರಿಕ‌ ಸಮಾಜ ತಲೆತಗ್ಗಿಸುವ ಘಟನೆ ಬೆಳಕಿಗೆ: ಇಟ್ಟಿಗೆ ಬಟ್ಟಿ ಮಾಲೀಕನಿಂದ ಕಾರ್ಮಿಕರ ಮೇಲೆ ರಾಕ್ಷಸಿ ಕೃತ್ಯ: ಕಾರ್ಮಿಕರ ಮೇಲೆ ನಡೆದ ಹಲ್ಲೆ ಅಮಾನವೀಯ ಮಾತ್ರವಲ್ಲ, ಘೋರ ಅಪರಾಧವೂ ಹೌದು ಎಂದು ಸಿಎಂ ಆಕ್ರೋಶ

ಗುಮ್ಮಟನಗರಿ ವಿಜಯಪುರದಲ್ಲಿ ನಾಗರಿಕ‌ ಸಮಾಜ ತಲೆತಗ್ಗಿಸುವ ಘಟನೆ ನಡೆದಿದೆ. ಕೆಲಸಕ್ಕೆ ಬಾರದ ಕಾರ್ಮಿಕರನ್ನ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ನಡೆದ ಬೆನ್ನಲ್ಲೇ ಇಬ್ಬರನ್ನ ಬಂಧಿಸಿರುವ ಪೊಲೀಸರು ಉಳಿದವರಿಗಾಗಿ ಶೋಧ ಕಾರ್ಯ ನಡೆಸಲಾಗಿದೆ.

ಇಟ್ಟಿಗೆ ಬಟ್ಟಿ ಮಾಲೀಕನಿಂದ ರಾಕ್ಷಸ ಕೃತ್ಯ ನಡೆಸಲಾಗಿದೆ. ಕಾರ್ಮಿಕರ ಮೇಲೆ ಪೈಪ್‌ಗಳಿಂದ ಮನಬಂದಂತೆ ಹಲ್ಲೆ ಮಾಡಲಾಗಿದೆ. ವಿಜಯಪುರ ನಗರದ ಗಾಂಧಿ ನಗರದ ಬಳಿಯಿರುವ ಇಟ್ಟಿಗೆ ಬಟ್ಟಿಯಲ್ಲಿ ಘಟನೆ ನಡೆದಿದ್ದು, ಮಾಲೀಕ ಖೇಮು ರಾಠೋಡ ಹಾಗೂ ಆತನ ಬೆಂಬಲಿಗರಿಂದ ಕೃತ್ಯ ನಡೆದಿದೆ.

ಮೂಲತ ಜಮಖಂಡಿ ತಾಲೂಕಿನ ಚಿಕ್ಕಲಿಕಿ ಗ್ರಾಮದ ಮೂವರು ಕಾರ್ಮಿಕರಾದ ಸದಾಶಿವ ಮಾದರ್, ಸದಾಶಿವ ಬಬಲಾದಿ, ಉಮೇಶ ಮಾದರ್ ಮೇಲೆ ಹಲ್ಲೆ ಮಾಡಲಾಗಿದೆ. ಹಬ್ಬಕ್ಕೆ ಊರಿಗೆ ಹೋಗಿ ವಾಪಸ್ ಬರೋದು ವಿಳಂಭವಾದ ಕಾರಣ ಹಲ್ಲೆ ಮಾಡಲಾಗಿದೆ. ಗಾಯಗೊಂಡ ಕಾರ್ಮಿಕರು ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿಡಿಯೋ ವೈರಲ್ ಆಗುತ್ತಿದಂತೆಯೆ ಎಚ್ಚೆತ್ತಿರುವ ಪೊಲೀಸರು, ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಇಟ್ಟಿಗೆ ಬಟ್ಟಿ ಮಾಲೀಕ ಖೇಮು ರಾಠೋಡ್, ಸಚಿನ್ ಮಾನವರ್, ವಿಶಾಲ್ ಜುಮನಾಳ್  ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆದಿದೆ.

 

ಇತ್ತ ಘಟನೆ ಬಳಿಕ ಖೇಮು ರಾಠೋಡ್ ಇಟ್ಟಿಗೆ ಬಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ವಾಪಸ್ ತೆರಳಿದ್ದಾರೆ. ಇಡೀ ಕಾರ್ಖಾನೆ ಖಾಲಿ ಖಾಲಿಯಾಗಿದೆ. ಕೆಲಸಕ್ಕೆ ಬರೋದು ವಿಳಂಭ ಕಾರಣದಿಂದಾಗಿ ಹಲ್ಲೆ ಮಾಡಿದ್ದು, ಉಳಿದ ಕಾರ್ಮಿಕರಿಗೂ ಭಯ ಹುಟ್ಟಿಸಿದೆ. ಹಾಗಾಗಿ ಅವರು ಕೂಡಾ ಕಾರ್ಖಾನೆ ತೊರೆದಿದ್ದಾರೆ.

ವಿಡಿಯೋ ವೈರಲ್ ಬಳಿಕ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕೀಯ ನಾಯಕರು ಕೂಡಾ ಘಟನೆ ಖಂಡಿಸಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಒಟ್ಟಾರೆ ಮಾನವಿಯತೇ ಇಲ್ಲದೆ ವರ್ತನೆ ಮಾಡಿರುವ ವಿಡಿಯೋ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.

ವಿಜಯಪುರದ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೆ ನಡೆದ ಹಲ್ಲೆ ಅಮಾನವೀಯ ಮಾತ್ರವಲ್ಲ, ಘೋರ ಅಪರಾಧವೂ ಹೌದು. ಬಡ ಕೂಲಿಕಾರ್ಮಿಕರ ಮೇಲೆ ಹಲ್ಲೆ ಮಾಡಿದ ದುರುಳರನ್ನು ಈಗಾಗಲೇ ಬಂಧಿಸಲಾಗಿದ್ದು, ಸೂಕ್ತ ತನಿಖೆ ನಡೆಸಿ, ಅಪರಾಧಿಗಳನ್ನು ಗರಿಷ್ಠ ಶಿಕ್ಷೆಗೆ ಒಳಪಡಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Leave a Reply

Your email address will not be published. Required fields are marked *