ಗೀತಂ ವಿಶ್ವವಿದ್ಯಾಲಯದ ಹಾಸ್ಟೆಲ್ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಸಾವು

 

ದೊಡ್ಡಬಳ್ಳಾಪುರ ತಾಲೂಕಿನ ‌ನಾಗದೇನಹಳ್ಳಿಯಲ್ಲಿರುವ ಗೀತಂ ವಿಶ್ವವಿದ್ಯಾಲಯದ ಹಾಸ್ಟೆಲ್ ಮಹಡಿಯಿಂದ ಬಿದ್ದು ವಿದ್ಯಾರ್ಥಿಯೊರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕಳೆದ ರಾತ್ರಿ ಮಹಡಿ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಆಂಧ್ರದ ಕರ್ನೂಲ್ ಮೂಲದ ದಾಸರಿ ಬ್ರಹ್ಮಸಾಯಿರೆಡ್ಡಿ ಮೃತ ವಿದ್ಯಾರ್ಥಿ. ಮೊದಲನೆ ವರ್ಷದ ಬಿಟೆಕ್ ವ್ಯಾಸಾಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿದ್ಯಾರ್ಥಿ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ಗೀತಂ ವಿಶ್ವವಿದ್ಯಾಲಯದ ಬಿ.ಟೆಕ್ ವಿದ್ಯಾರ್ಥಿ ಸಾವಿನ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

 ಗೀತಂ ಆಡಳಿತ ಮಂಡಳಿ ಪೊಲೀಸರಿಗೆ ಯಾವುದೇ ಮಾಹಿತಿ‌ ನೀಡದೇ, ಪೊಲೀಸರು ಬರುವವರೆಗೂ ಕಾಯದೇ ಮೃತದೇಹ ತೆರವು ಮಾಡಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಗೀತಂ ವಿ.ವಿಯಲ್ಲಿ ಈ ಹಿಂದೆ ಕೂಡ ಹಲವು ವಿದ್ಯಾರ್ಥಿಗಳು ನಿಗೂಢವಾಗಿ ಮೃತಪಟ್ಟಿದ್ದರು. ಕಳೆದ ಒಂದೂವರೆ ವರ್ಷದಲ್ಲಿ ವಿದೇಶಿ ಮೂಲದ ವಿದ್ಯಾರ್ಥಿ ಆರನೇ ಮಹಡಿಯಿಂದ ಬಿದ್ದು‌ ಮೃತಪಟ್ಟಿದ್ದರು. ಇನ್ನೊಬ್ಬ ವಿದ್ಯಾರ್ಥಿ‌ ನೇಣು ಹಾಕಿಕೊಂಡಿದ್ದರು. ಮತ್ತೊಬ್ಬ ವಿದ್ಯಾರ್ಥಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗೆ ಸಾಲು ಸಾಲು ವಿದ್ಯಾರ್ಥಿಗಳ ಸಾವು ಮುಂದುವರಿದರೂ ಆಡಳಿತ ಮಂಡಳಿ ಯಾವುದೇ ಕ್ರಮ ಜರುಗಿಸದಿರುವುದು ಯಕ್ಷ ಪ್ರಶ್ನೆಯಾಗಿದೆ.

ಗೀತಂ ಕಾಲೇಜು ಸುತ್ತಮುತ್ತ ಗಾಂಜಾ ಮಾರಾಟ ಅವ್ಯಾಹತವಾಗಿದ್ದು, ಪದೇ ಪದೇ ಗಲಾಟೆಗಳು ಕೂಡ ನಡೆದಿದ್ದರೂ ಆಡಳಿತ ಮಂಡಳಿ ವಿದ್ಯಾರ್ಥಿಗಳ ಸುರಕ್ಷತೆಗೆ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Leave a Reply

Your email address will not be published. Required fields are marked *