ವಿದ್ಯಾರ್ಥಿ ಜೀವನದಲ್ಲಿ ಪಠ್ಯ ಎಷ್ಟು ಮುಖ್ಯವೋ… ಪಠ್ಯೇತರ ಚಟುವಟಿಕೆಯೂ ಅಷ್ಟೇ ಮುಖ್ಯವಾಗುತ್ತದೆ. ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಹೆಚ್ಚಿಸಲು ಪಠ್ಯೇತರ ಚಟುವಟಿಕೆ ಬಹಳ ಮುಖ್ಯಪಾತ್ರ ವಹಿಸುತ್ತದೆ. ಆದ್ದರಿಂದ ಗೀತಂ ಯೂನಿರ್ವಸಿಟಿಯಲ್ಲಿ ಓದುವ ಮಕ್ಕಳಿಗೆ ಪಠ್ಯಕ್ಕೆ ಹೆಚ್ಚು ಒತ್ತು ಕೊಡುವುದರ ಜೊತೆಗೆ ಪಠ್ಯೇತರ ಚಟುವಟಿಕೆಗೂ ಅಷ್ಟೇ ಪ್ರಾಮುಖ್ಯತೆ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ಗೀತಂ ವಿಶ್ವವಿದ್ಯಾನಿಲಯದ ಉಪಕುಲಪತಿ ಕೆ.ಎನ್.ಎಸ್ ಆಚಾರ್ಯ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕಿನ ಹೊರವಲಯದಲ್ಲಿರುವ ಗೀತಂ ಯೂನಿರ್ವಸಿಟಿಯಲ್ಲಿ ನಡೆದ ಶೈಕ್ಷಣಿಕ ಶ್ರೇಷ್ಠತೆ ಪ್ರಶಸ್ತಿ (Academics Excellence Award-2025) ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಮೊದಲು ಮಾನವೀಯ ಮೌಲ್ಯಗಳ ಬಗ್ಗೆ ಅರಿವು, ಸಮಾಜದಲ್ಲಿ ಉತ್ತಮ ರೀತಿಯ ಜೀವನ ರೂಪಿಸಿಕೊಳ್ಳುವುದು ಹೇಗೆ, ಕ್ರೀಡೆ, ನೃತ್ಯ, ಸಂಗೀತ, ಕಲೆ, ಸಾಹಿತ್ಯ ಹೀಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡುವುದು. ಹಾಗೇ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಾಧನೆಗೈದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸೂಕ್ತ ಪ್ರಶಸ್ತಿ ಬಹುಮಾನ ನೀಡಿ ಇನ್ನಷ್ಟು ಸಾಧನೆ ಮಾಡಲು ಅವಕಾಶ ಮಾಡಿಕೊಡಬೇಕು. ಆ ಕೆಲಸ ನಮ್ಮ ಗೀತಂ ಯೂನಿರ್ವಸಿಟಿ ಮಾಡುತ್ತಿದೆ ಎಂದರು.
ಯೂನಿರ್ವಸಿಟಿಯಲ್ಲಿ ಪಠ್ಯೇತರ ಚಟುವಟಿಕೆಗೆ ಸಂಬಂಧಪಟ್ಟ ಸುಮಾರು 24 ಕ್ಲಬ್ ಗಳಿವೆ. ಇದರಲ್ಲಿ ಅತ್ಯುತ್ತಮವಾಗಿ ಸಾಧನೆ ಮಾಡಿದವರಿಗೆ ಸ್ಟೂಡೆಂಟ್ ಲೈಫ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗುತ್ತದೆ ಎಂದರು.
ನಮ್ಮ ಯೂನಿರ್ವಸಿಟಿಯಲ್ಲಿ ದೇಶದ ನಾನಾ ರಾಜ್ಯ ಹಾಗೂ ವಿದೇಶಗಳಿಂದ ಸಹ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಸಮಗ್ರತೆ, ರಾಷ್ಟ್ರೀಯ ಸಮಗ್ರತೆಗೂ ಸಹ ನಾವು ಹೆಚ್ಚು ಒತ್ತು ನೀಡುತ್ತಿದ್ದೇವೆ ಎಂದರು.
ವಿದ್ಯಾರ್ಥಿಗಳ ಮಾರ್ಗದರ್ಶಿ ನಿರ್ದೇಶಕರಾದ ರಿಮ ಚೌದರಿ ಮಾತನಾಡಿ, ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ಅಳವಡಿಸಿಕೊಂಡಿರುವ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿರುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ವಿದ್ಯಾರ್ಥಿಗಳಲ್ಲಿನ ಅಸಾಧಾರಣ ಪ್ರತಿಭೆ ಹೊರಹೊಮ್ಮಿಸಲು ಉತ್ತಮ ವೇದಿಕೆಗಳ ಅಗತ್ಯವಿದ್ದು, ಏಸ್ ಇಂತಹದೊಂದು ಕಾರ್ಯಕ್ರಮವಾಗಿದೆ. ಅತ್ಯುತ್ತಮ ಸಾಧಕ ವಿದ್ಯಾರ್ಥಿಗಳು, ಕ್ರೀಡೆ, ಎನ್‍ಸಿಸಿಗಳಲ್ಲಿ ಸಾಧಕ ವಿದ್ಯಾರ್ಥಿಗಳು ಮೊದಲಾದ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಗುತ್ತಿದ್ದು, ಅವರಿಗೆ ಮತ್ತಷ್ಟು ಸಾಧನೆ ಮಾಡುವ ಸ್ಪೂರ್ತಿ ಸಿಗಲಿದೆ ಎಂದರು.
2024-25ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿ, ಪ್ರತಿಭಾನ್ವಿತ ವಿದ್ಯಾರ್ಥಿ ಕ್ರೀಡಾ ಸಾಧಕ ಪ್ರಶಸ್ತಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರನ್ನು ಹಾಗೂ ಬೋಧಕ, ಬೋಧಕೇತರರನ್ನು ಅಭಿನಂದಿಸಲಾಯಿತು.
ಈ ವೇಳೆ ಗೀತಂ ಸ್ಕೂಲ್ ಆಫ್ ಟೆಕ್ನಾಲಜಿ ಡೈರೆಕ್ಟರ್ ಬಸವರಾಜ್ , ಎನ್ ಸಿ ಸಿ 5 ಕರ್ನಾಟಕ ಬೆಟಾಲಿಯನ್ CO ಕರ್ನಲ್ ರಾಯ್, ಗೀತಂ ವಿಶ್ವವಿದ್ಯಾಲಯದ ಸ್ಪೋರ್ಟ್ಸ್ ಅಸಿಸ್ಟೆಂಟ್ ಡೈರೆಕ್ಟರ್ ಮತ್ತು ಎನ್‌ಸಿಸಿ ಲೆಫ್ಟಿನೆಂಟ್ ವಂಶಿಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.