ಗಾಳಿಪಟ ಉತ್ಸವಕ್ಕೆ ಅದ್ಧೂರಿ ಚಾಲನೆ: ಬಾನಂಗಳದಲ್ಲಿ ಹಾರಾಡಿದ ವಿವಿಧ ಕಲಾಕೃತಿಗಳ ಗಾಳಿಪಟಗಳು

ಕರ್ನಾಟಕ ಜಾನಪದ ಪರಿಷತ್ತು, ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘದ ವತಿಯಿಂದ ನಗರದ ಭುವನೇಶ್ವರಿನಗರದ ಮುನಿನಂಜಪ್ಪನವರ ಜಮೀನಿನಲ್ಲಿ ನಡೆದ ರಾಜ್ಯ ಮಟ್ಟದ ಗಾಳಿಪಟ ಉತ್ಸವ 2025ರಲ್ಲಿ ನೂರಾರು ಗಾಳಿಪಟಗಳು ಬಾನಂಗಳದಲ್ಲಿ ಹಾರಾಡಿದವು.

ಬೆಂಗಳೂರು, ಮಂಡ್ಯ, ಬೆಳಗಾವಿ ಮೊದಲಾದ ಕಡೆಗಳಿಂದ ಆಗಮಿಸಿದ್ದ ಗಾಳಿಪಟ ಕಲಾವಿದರು, ತಮ್ಮ ಗಾಳಿಪಟ ಕಲೆ ಪ್ರದರ್ಶಿಸಿದರು.

ದೊಡ್ಡಬಳ್ಳಾಪುರ ತಾಲೂಕಿನ ಮಕ್ಕಳಿಗಾಗಿ ಉಚಿತ ಗಾಳಿಪಟ ತಯಾರಿಕೆ ತರಬೇತಿ ನೀಡಲಾಯಿತು.

ಉತ್ಸವಕ್ಕೆ ಚಾಲನೆ :

ಗಾಳಿಪಟ ಹಾರಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದ ಶಾಸಕ ಧೀರಜ್ ಮುನಿರಾಜು ಮಾತನಾಡಿ, ಗಾಳಿಪಟ ಕಲೆಯಲ್ಲಿ ದೊಡ್ಡಬಳ್ಳಾಪುರ ಖ್ಯಾತಿ ಹೊಂದಿದ್ದು, ಇಂದು ರಾಜ್ಯ ಮಟ್ಟದ ಉತ್ಸವ ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಗಾಳಿಪಟ ಹಾರಿಸುವ ಜಾನಪದ ಕಲೆ ಇತ್ತೀಚೆಗೆ ಕಡಿಮೆಯಾಗುತ್ತಿದ್ದು, ಇಂದಿನ ಪೀಳಿಗೆ ಆಸಕ್ತಿ ವಹಿಸಬೇಕಿದೆ. ಗಾಳಿಪಟ ಕಲೆಗೆ ಉತ್ತೇಜನ ನೀಡಲು, ಜಾನಪದ ಪರಿಷತ್ತು ಯೋಜನೆಗಳನ್ನು ರೂಪಿಸಬೇಕಿದೆ. ಅಂತೆಯೇ ಜಾನಪದ ಪರಿಷತ್ತಿನ ಮೂಲಕ ಜಾನಪದ ಕಲೆಗಳನ್ನು ಉತ್ತೇಜಿಸಲು ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ ಎಂದರು.

ಚಿಂತಕ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಮಾತನಾಡಿ, ಜಾಗತೀಕರಣದ ಇಂದಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳು, ಪರಂಪರೆಗಳು ಮರೆಯಾಗುತ್ತಿವೆ. ನಮ್ಮ ಜಾನಪದ ಸಂಸ್ಕೃತಿಯಲ್ಲಿ ಜನರ ಬಾವೈಕ್ಯತೆಗೆ ಪೂರಕವಾದ, ಗ್ರಾಮೀಣ ಕ್ರೀಡೆಗಳು, ಉತ್ಸವಗಳು ಹಿಂದಿನಿಂದಲೂ ಆಚರಣೆ ಮಾಡುತ್ತಾ ಬಂದಿದ್ದು, ಜನರ ಸಾಮೂಹಿಕ ಭಾಗವಹಿಸುವಿಕೆಗೆ ಇಂಬು ನೀಡುತ್ತವೆ. ಆದರೆ ಇತ್ತೀಚೆಗೆ ಕಬಡ್ಡಿ, ಕೊಕ್ಕೊ ಮೊದಲಾದ ಗ್ರಾಮೀಣ ಕ್ರೀಡೆಗಳು ಕಾರ್ಪೋರೇಟ್ ವ್ಯವಸ್ಥೆಗೆ ಸಿಕ್ಕಿ ಹಣ ಮಾಡಲು ಬಳಸಿಕೊಳ್ಳಲಾಗುತ್ತಿದೆ. ಈ ದಿಸೆಯಲ್ಲಿ ಜಾನಪದ ಕಲೆಗಳನ್ನು ಉಳಿಸಿ ಬೆಳೆಸಬೇಕಾದರೆ ಜನರ ಭಾಗವಹಿಸುವಿಕೆ ಮುಖ್ಯವಾಗಿದ್ದು, ಗಾಳಿಪಟದಂತಹ ಕಲೆಗಳು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕಿದೆ ಎಂದರು.

ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನಪದ ತಜ್ಞ ಎಚ್.ಎಲ್.ನಾಗೇಗೌಡ ಅವರ ಪರಿಶ್ರಮದಿಂದಾಗಿ ರೂಪುಗೊಂಡಿರುವ ಕರ್ನಾಟಕ ಜಾನಪದ ಪರಿಷತ್ತುಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ನಮ್ಮ ಪಾರಂಪರಿಕ ಕಲೆಯಾದ ಗಾಳಿಪಟದ ಬಗ್ಗೆ ಪ್ರಚುರಪಡಿಸಲು, ಗಾಳಿಪಟ ಉತ್ಸವ ಸ್ಪರ್ಧೆಗಳನ್ನು ಸಹ ಏರ್ಪಡಿಸುತ್ತಾ ಬರುತ್ತಿದ್ದು, ಇಂದು ದೊಡ್ಡಬಳ್ಳಾಪುರದಲ್ಲಿ ಗಾಳಿಪಟ ಉತ್ಸವ ಏರ್ಪಡಿಸಲಾಗಿದೆ. ಜಾನಪದ ಪರಿಷತ್ತಿನ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ದೊರೆತರೆ ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸಲು ಸಾಧ್ಯವಾಗಲಿದೆ ಎಂದರು.

ದೊಡ್ಡಬಳ್ಳಾಪುರ ಗಾಳಿಪಟ ಕಲಾಸಂಘದ ಅಧ್ಯಕ್ಷ ಎಲ್.ಎನ್.ಶ್ರೀನಾಥ್ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಾದ ಎಂ.ವೆಂಕಟರಾಜು(ಡೋಲು ವಾದಕರು), ಕೆ.ಪಿ.ಪ್ರಕಾಶ್(ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು),ಎನ್.ಎಂ.ನಟರಾಜ್(ಪತ್ರಿಕೋದ್ಯಮ),ಗಂಗಾಧರ(ಯಕ್ಷಗಾನ ಭಾಗವತರು), ಪೈಲ್ವಾನ್ ಪಿಳ್ಳಪ್ಪ (ಕ್ರೀಡೆ)ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ನಗರಸಭೆ ಸದಸ್ಯ ಆರ್.ಲಕ್ಷ್ಮೀಪತಿ, ನಗರಸಭೆ ಮಾಜಿ ಅಧ್ಯಕ್ಷ ಕೆ.ಬಿ.ಮುದ್ದಪ್ಪ, ದೊಡ್ಡಬಳ್ಳಾಪುರ ಗಾಳಿಪಟ ಕಲಾಸಂಘದ ಕಾರ್ಯದರ್ಶಿ ಎ.ಎನ್.ಪ್ರಕಾಶ್, ಉಪಾಧ್ಯಕ್ಷ ಎಸ್.ಮುನಿರಾಜು, ಖಜಾಂಚಿ ವಿಶ್ವನಾಥ್, ಸಹ ಕಾರ್ಯದರ್ಶಿ ಜೆ.ವಿ.ಸುಬ್ರಹ್ಮಣ್ಯ ಸೇರಿದಂತೆ ಸಂಘದ ಪದಾಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!