‘ಗಾರೆ ಮೇಸ್ತ್ರಿಗಳಿಗೆ ಕೆಲಸ ಕೊಡಬೇಡಿ’ ಪುಷ್ಪಕ್ ರಾಜ್ ಹೇಳಿಕೆ ವಿಚಾರ- ಪುಷ್ಪಕ್ ರಾಜ್ ವಿರುದ್ಧ ಸಿಡಿದೆದ್ದ ನೆಲದಾಂಜನೇಯಸ್ವಾಮಿ ಕಟ್ಟಡ ಕೂಲಿ ಕಾರ್ಮಿಕರು, ಮೇಸ್ತ್ರಿಗಳ ಸಂಘ- ಬೇಷರತ್ ಕ್ಷಮೆಯಾಚಿಸುವಂತೆ ಒತ್ತಾಯ

ಗಾರೆ ಮೇಸ್ತ್ರಿ ಭದ್ರಾವತಿ ಮಂಜುನಾಥ್ ಎಂಬುವವರು ನಮ್ಮಿಂದ ಹೆಚ್ಚಿನ ಹಣ ಪಡೆದು ಪೂರ್ತಿ ಕೆಲಸ ಮಾಡದೇ ವಂಚಿಸಿದ್ದಾರೆ ಎಂದು ಮನೆ ಮಾಲೀಕ ಪುಷ್ಪಕ್ ರಾಜ್ ಆರೋಪ ಮಾಡಿದ್ದಾರೆ ಈ ಆರೋಪ ಸತ್ಯಕ್ಕೆ ದೂರವಗಿದೆ. ಅಲ್ಲದೆ ತಾಲ್ಲೂಕಿನ ಗಾರೆ ಮೇಸ್ತ್ರಿಗಳಿಗೆ ಕೆಲಸ ಕೊಡಬೇಡಿ ಎಂಬ ಹೇಳಿಕೆಯನ್ನು ನೀಡಿದ್ದು, ಈ ಕೂಡಲೇ ಅವರು ಬೇಷರತ್ ಕ್ಷಮೆಯಾಚಿಸಬೇಕು ಎಂದು  ನೆಲದಾಂಜನೇಯಸ್ವಾಮಿ ಕಟ್ಟಡ ಕೂಲಿ ಕಾರ್ಮಿಕರು, ಮೇಸ್ತ್ರಿಗಳ ಸಂಘದ ಅಧ್ಯಕ್ಷ ಅರವಿಂದ್ ಶೇಖರ್ ಗೌಡ ಆಗ್ರಹಿಸಿದರು.

ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ತಮ್ಮ ಮನೆ ನಿರ್ಮಾಣದ ಕುರಿತು ಹಲವು ಸುಳ್ಳು ಆರೋಪಗಳನ್ನು ಮಾಡಿರುವ ಪುಷ್ಪಕ್ ರಾಜ್ ತಾಲ್ಲೂಕಿನ ಕೂಲಿ ಕಾರ್ಮಿಕರಾಗಿ ಸದಾ ನಿಷ್ಠೆ ಹಾಗು ಪ್ರಮಾಣಿಕರಾಗಿ ದುಡಿಯುವ ಗಾರೆ ಮೇಸ್ತ್ರಿಗಳ ಮೇಲೆ ಗಂಭೀರ ಆರೋಪ  ಮಾಡಿದ್ದಾರೆ. ಸ್ಥಳೀಯ ಮೇಸ್ತ್ರಿಗಳಿಗೆ ಮನೆ ಕಟ್ಟುವ ಕೆಲಸ ನೀಡದಂತೆ ಮಾಧ್ಯಮ ಹೇಳಿಕೆ ನೀಡಿದ್ದು, ಈ ಹೇಳಿಕೆಯನ್ನು ನಮ್ಮ ಸಂಘ ಖಂಡಿಸುತ್ತದೆ ಎಂದರು.

ಕಟ್ಟಡ ಕಾರ್ಮಿಕ ಹಾಗೂ ಗಾರೆ ಮೇಸ್ತ್ರಿ ಭದ್ರಾವತಿ ಮಂಜುನಾಥ್ ಮಾತನಾಡಿ, ನಾನು ತಾಲ್ಲೂಕಿನ ಸೋಮೇಶ್ವರ ಬಡಾವಣೆಯ ನಿವಾಸಿಯಾಗಿದ್ದು, ಕಳೆದ 20 ವರ್ಷಗಳಿಂದ ಗಾರೆ ಮೇಸ್ತ್ರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಗರದ ಕುಚ್ಚಪ್ಪನಪೇಟೆಯ ಕಾಳಮ್ಮ ದೇವಾಲಯದ ರಸ್ತೆಯಲ್ಲಿ ಕಳೆದ ಜೂನ್ 2023 ರಲ್ಲಿ ವರ್ಷ ಪ್ರದೀಪ್ ಹಾಗು ಪುಷಕ್ ರಾಜ್ ಎಂಬುವರ ಒಂದು ಕಟ್ಟಡ ನಿರ್ಮಾಣದ ಕೆಲಸ ವಹಿಸಿಕೊಂಡಿದ್ದು, ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಡಂಬಡಿಕೆ (agreement ) ಕೂಡ ಮಾಡಿಕೊಂಡಿದ್ದು, ಒಟ್ಟಾರೆ 4 ಅಂತಸ್ತಿನ ಮಾಯೆಯಾಗಿದ್ದು, 18 ಚದುರ ಅಡಿಗಳ ಕಟ್ಟಡವಾಗಿರುತ್ತದೆ. 2ಲಕ್ಷದ 15 ಸಾವಿರರೂಗಳಂತೆ ಪ್ರತಿ ಚದುರಕ್ಕೂ ಮನೆ ನಿರ್ಮಿಸುವ ಒಪ್ಪಂದವಾಗಿತ್ತು. ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅವಶ್ಯಕ ಸುಮಾರು 35 ವಸ್ತುಗಳ ಪಟ್ಟಿ ಒಳಗೊಂಡಂತೆ 6 ತಿಂಗಳುಗಳ ಒಳಗೆ ಮನೆ ನಿರ್ಮಿಸಿಕೊಡುವಂತೆ ಇಬ್ಬರ ನಡುವೆ ಅಗ್ರಿಮೆಂಟ್ ಮಾಡಲಾಗಿತ್ತು. ಇದೆ ಒಡಂಬಡಿಕೆಯಲ್ಲಿ ನಾವು ಮಾಡಿಕೊಂಡಿದ್ದ ಒಪ್ಪಂದದಂತೆ ಸೂಕ್ತ ಸಮಯಕ್ಕೆ ಹಣ ನೀಡಡೇ ಕೆಲಸ ವಿಳಂಬಕ್ಕೆ ಕಾರಣವಾದರು. ಆದರೂ ನಾವು ಫೆಬ್ರುವರಿ 2024 ರವರೆಗೂ ಕೆಲಸ ಮಾಡಿ ಶೇ .90 ರಷ್ಟು ಕಟ್ಟಡ ನಿರ್ಮಾಣ ಕೆಲಸ ಮುಗಿಸಿದ್ದೇವೆ. ನಮಗೆ ನೀಡಬೇಕಿದ್ದ ಹಣ ನೀಡದೆ ಸತಾಯಿಸಿದರು ಎಂದರು.

ನನ್ನ ವಿರುದ್ಧವಾಗಿ ವಂಚನೆ ಮಾಡಿದ್ದೇನೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು ಈ ಪ್ರಕರಣವನ್ನು ಇತ್ಯರ್ಥಗೊಳಿಸುವಂತೆ  ನಮ್ಮ ಸಂಘಕ್ಕೆ ಸೂಚಿಸಿದ ಹಿನ್ನೆಲೆ ಪರಿಣಿತಿ ಪಡೆದ ಇಂಜಿನಿಯರ್ ಮುಖೇನ ಮನೆಯ ನಿರ್ಮಾಣದ ವೆಚ್ಚದ ಮೌಲ್ಯವನ್ನು ಅಳೆಯಲಾಗಿ ಒಟ್ಟು 41,11, 000 ನಿಗದಿ ಮಾಡಿ ಈಗಾಗಲೇ ಶೇ 90 ರಷ್ಟು ಕೆಲಸ ಮಾಡಿರುವ ಹಿನ್ನೆಲೆ ಮೇಸ್ಟ್ರೀಗೆ ಮಂಜುನಾಥ್ ಅವರಿಗೆ ನೀಡಿರುವ 26 ಲಕ್ಷ ಹೊರತುಪಡಿಸಿ ಉಳಿಕೆ ಮೊತ್ತವನ್ನು ನೀಡಬೇಕು ಎಂದು ತಿಳಿಸಲಾಗಿತ್ತು. ಅದರಂತೆ ನಮ್ಮ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ 11,14,000 ಹಣವನ್ನು ನಾನು ಬಾಕಿ ನೀಡಬೇಕಿದ್ದ ಹಲವರಿಗೆ ನೇರವಾಗಿ ಪುಷ್ಪಾಕ್ ರಾಜು ಅವರೇ ನೀಡಿ 28/3/2025 ರಲ್ಲಿ ಎರಡನೇ ಅಗ್ರಿಮೆಂಟ್ ಮಾಡಿಕೊಂಡು ಒಂದು ತಿಂಗಳ ಗಡವು ನೀಡಿ ಮನೆ ಕೆಲಸ ಪೂರ್ಣಗೊಳಿಸುವಂತೆ ತಿಳಿಸುತ್ತಾರೆ. ಜೊತೆಗೆ ಉಳಿಕೆ ಹಣವನ್ನು ಗೃಹಪ್ರವೇಶದ ನಂತರ ನೀಡುತ್ತೇವೆ ಎಂದು ತಿಳಿಸಿರುತ್ತಾರೆ. ಕೊಟ್ಟ ಮಾತಿನಂತೆ ನಾನು ನನ್ನ ಕರ್ತವ್ಯ ನಿರ್ವಹಿಸಿ ಕಟ್ಟಡವನ್ನು ಮಾಲೀಕರಿಗೆ ಹಸ್ತಾಂತರಿಸಿದ್ದೇನೆ. ಆದರೆ ಈವರೆಗೂ ನನಗೆ ಬರಬೇಕಿದ್ದ 3,60,000 ಹಣ ನೀಡದೇ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಮನೆ ಮಾಲೀಕರಿಗೆ ಯಾವುದೇ ರೀತಿಯ ಮೋಸ ವಂಚನೆ ಮಾಡಿಲ್ಲ ಎಂದರು.

ವಕೀಲರಾದ ಸುರೇಶ್ ಕುಮಾರ್ ಮಾತನಾಡಿ, ಈ ಪ್ರಕರಣದಲ್ಲಿ ಕೋರ್ಟ್ ನಾವು ಸಲ್ಲಿಸಿದ್ದ ಅರ್ಜಿ ಹಾಗು ದಾಖಲಾತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳದ ಕಾರಣ ನ್ಯಾಯಾಲಯದ ತೀರ್ಪು ನಮ್ಮ ವಿರುದ್ಧ ಬಂದಿದೆ. ಮೇಲ್ಮನವಿ ಕೋರಿ ಈಗಾಗಲೇ ನಾವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಸೂಕ್ತ ದಾಖಲೆಗಳನ್ನು ಒದಗಿಸಿ ನ್ಯಾಯ ಪಡೆಯಲಿದ್ದೇವೆ. ಮನೆ ಮಾಲೀಕ ಪುಷ್ಪಕ್ ರಾಜ್ ತಾಲೂಕಿನ ಎಲ್ಲ ಗಾರೆ ಮೇಸ್ತ್ರಿಗಳ ಬಗ್ಗೆ  ಮಾಡಿರುವ ಆರೋಪ ಸರಿಯಿಲ್ಲ. ಈ ಬಗ್ಗೆ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ನ್ಯಾಯಾಲಯ ಮೂಲಕವೇ ಉತ್ತರಿಸಲಿದ್ದೇವೆ ಎಂದರು.

ಈ ವೇಳೆ ನೆಲದಾಂಜನೇಯಸ್ವಾಮಿ ಕಟ್ಟಡ ಕೂಲಿ ಕಾರ್ಮಿಕರು, ಮೇಸ್ತ್ರಿಗಳ ಸಂಘದ ಸಲಹೆಗಾರ ಚಂದ್ರಪ್ಪ , ಅಧ್ಯಕ್ಷ ಅರವಿಂದ್ ಶೇಖರ್ ಗೌಡ, ಉಪಾಧ್ಯಕ್ಷ ಮಲ್ಲೇಶ್, ಖಜಾಂಚಿ ಸತೀಶ್, ಭದ್ರಾವತಿ ಮಂಜುನಾಥ್, ಕಾನೂನು ಸಲಹೆಗಾರ ಸುರೇಶ ಕುಮಾರ್, ಸಂಚಾಲಕರಾದ ರಾಜಣ್ಣ, ಸಿದ್ದಪ್ಪ, ಎಂಜಿನಿಯರ್ ಪ್ರೇಮ್ ಕುಮಾರ್, ಸಹ ಕಾರ್ಯದರ್ಶಿ ದೀಪು ನಾಯಕ್, ಎಲ್. ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!