ಗಬ್ಬೆದ್ದು ನಾರುತ್ತಿರುವ ಚರಂಡಿಗಳು, ವರ್ಷಗಳೇ ಕಳೆದರೂ ಸ್ವಚ್ಛತೆ ಕಾಣದ ಹಾದ್ರಿಪುರ ಕಾಲೋನಿ:‌ ಪಂಚಾಯಿತಿ ಎದುರು ಚರಂಡಿ ನೀರು ಇಟ್ಟು ಪ್ರತಿಭಟನೆ

ಗ್ರಾಮ ಪಂಚಾಯಿತಿ ಕೂಗಳತೆ ದೂರದಲ್ಲಿರುವ ಹೆಚ್ಚು ದಲಿತರ ಕಾಲೋನಿಯಲ್ಲಿ ಚರಂಡಿ ವ್ಯವಸ್ಥೆ ಅಸಮರ್ಪಕವಾಗಿದ್ದು, ಸಾಂಕ್ರಾಮಿಕ ರೋಗ ಭೀತಿ ಆವರಿಸಿದೆ.

ಈ ಹಿನ್ನೆಲೆ ಇಂದು ಕಾಲೋನಿ ನಿವಾಸಿಗಳೆಲ್ಲಾ ಒಗ್ಗಾಟಾಗಿ ತಮ್ಮ ಮನೆಗಳ ಬಳಿ ಮಡುಗಟ್ಟಿ ನಿಂತಿದ್ದ ಚರಂಡಿ ನೀರನ್ನು ಬಕೆಟ್ ಗಳಲ್ಲಿ ತುಂಬಿಕೊಂಡು ಪಂಚಾಯಿತಿ ಮುಂದಿಟ್ಟು ನಿರ್ಲಕ್ಷ್ಯತೋರುತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಜನಪ್ರತಿನಿಧಿಗಳ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಹಾದ್ರಿಪುರ ಗ್ರಾಮ ಪಂಚಾಯಿತಿ ಬಳಿ‌ ಇಂದು ನಡೆದಿದೆ…

ಎಸ್, ಹಾದ್ರಿಪುರ ಗ್ರಾಮ ಪಂಚಾಯಿತಿ ಕೂಗಳತೆ ಸಮೀಪದಲ್ಲಿ ದಲಿತ ಕಾಲೋನಿ‌ ಇದೆ. ಇಲ್ಲಿ ಸುಮಾರು 65-75 ಕುಟುಂಬಗಳು ವಾಸವಾಗಿವೆ.. ಈ‌ ಕಾಲೋನಿಯಲ್ಲಿ ಚರಂಡಿ ಸಮಸ್ಯೆ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ತಾಂಡವಾಡುತ್ತಿವೆ… ಇಲ್ಲಿನ‌ ಸಮಸ್ಯೆಗಳನ್ನು ಸರಿಪಡಿಸುವಂತೆ ಅನೇಕ ಬಾರಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಿಲ್ಲ. ಈ ಹಿನ್ನೆಲೆ ಆಕ್ರೋಶಗೊಂಡ ಕಾಲೋನಿ ನಿವಾಸಿಗಳು, ಚರಂಡಿ ನೀರನ್ನು ಪಂಚಾಯಿತಿ ಮುಂದಿಟ್ಟು ಪ್ರತಿಭಟಿಸಿದರು..

ಪಂಚಾಯಿತಿಯವರು ಇಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸಿ ಅದೆಷ್ಟೋ ವರ್ಷಗಳಾಗಿವೆ. ಕಾಲೋನಿಯಲ್ಲಿ ಮಲಿನ ನೀರು ಮುಂದೆ ಹೋಗದೇ ಅಲ್ಲಿಯೇ ನಿಲ್ಲುವುದರಿಂದ ಇಡೀ ಪ್ರದೇಶದಲ್ಲಿ ದುರ್ನಾತ ಹರಡಿದೆ. ಮೊದಲೇ ಎಲ್ಲೆಡೆ ಡೆಂಗಿ ಸೇರಿದಂತೆ ಇತರ ಕಾಯಿಲೆಗಳು ಹೆಚ್ಚಾಗಿ ಹರಡುತ್ತಿರುವುದರಿಂದ ಸ್ಥಳೀಯರಲ್ಲಿ ರೋಗ ಭೀತಿ ಆವರಿಸಿದೆ. ಕೆಲ ಮನೆಗಳ ಶೌಚಗೃಹದ ನೀರು ಮಡುಗಟ್ಟಿ ನಿಂತಿದೆ. ಇದರಿಂದ ಅಶುಚಿತ್ವ ತಾಂಡವವಾಡುತ್ತಿದೆ ಎಂದು ಮಹದೇವಯ್ಯ ಕಿಡಿಕಾರಿದ್ದಾರೆ.

ರಸ್ತೆ ಬದಿಯಲ್ಲಿ ಸರಾಗವಾಗಿ ನೀರು ಹರಿಯುವಂತೆ ಚರಂಡಿ ನಿರ್ಮಿಸಬೇಕು. ಈ ಕುರಿತು ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಗಿದೆ. ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ. ಚರಂಡಿಯಲ್ಲಿ ಹೂಳು ತುಂಬಿದೆ. ತ್ಯಾಜ್ಯ ನೀರು ಮಡುಗಟ್ಟಿ ನಿಂತಿದೆ. ಇದರಿಂದ ಸ್ವಚ್ಛತೆ ಇಲ್ಲವಾಗಿದೆ. ಕೆಲಸ ಮುಗಿಸಿ ಸಂಜೆ ಮನೆಗೆ ಬಂದರೆ ಸಾಕು ಸೊಳ್ಳೆಗಳ ಕಾಟದಿಂದ ಬೇಸತ್ತು ಹೋಗಿದ್ದೇವೆ. ರೋಗ ಭೀತಿಯಲ್ಲಿ ದಿನದೂಡುತ್ತಿದ್ದೇವೆ ಎಂದು ನಿವಾಸಿಗಳಾದ ಚೆನ್ನರಾಯಪ್ಪ, ನಾಗರತ್ನ ಅಲವತ್ತುಕೊಳ್ಳುತ್ತಾರೆ.

ಸಂಜೆಯಾದರೆ ಸೊಳ್ಳೆಗಳ ಹಾವಳಿಯಿಂದ ಜನ ನಲುಗುವಂತಾಗಿದೆ. ಮನೆ ಬಾಗಿಲು ಹಾಕಿಕೊಂಡೇ ಜೀವನ ಮಾಡಬೇಕಿದೆ. ಪ್ರತಿ ವರ್ಷ ಗ್ರಾಮ ಪಂಚಾಯಿತಿಗೆ ನಿವಾಸಿಗಳು ನೀರಿನ ಕರ, ಮನೆ ಕರ ಪಾವತಿಸುತ್ತಿದ್ದಾರೆ. ಆದರೆ, ಸೂಕ್ತ ವ್ಯವಸ್ಥೆಯೇ ಇಲ್ಲದಂತಾಗಿದೆ. ಮಳೆಗಾಲದಲ್ಲಂತೂ ಕಷ್ಟ ಹೇಳತೀರದು. ಮನೆ ಮುಂದಿನ ರಸ್ತೆ ತಗ್ಗಿನಲ್ಲಿದ್ದು, ಮುಖ್ಯರಸ್ತೆ ಎತ್ತರವಾಗಿದೆ. ಇದರಿಂದ ರಸ್ತೆ, ಚರಂಡಿಯ ನೀರೆಲ್ಲಾ ಮನೆಯೊಳಗೆ ನುಗ್ಗುತ್ತದೆ ಎಂದು ಹನುಮಂತರಾಜು ಆಕ್ರೋಶವ್ಯಕ್ತಪಡಿಸಿದರು…

ಚರಂಡಿ ವಾಸನೆಯಿಂದ ಪ್ರತಿದಿನ ಊಟ ಮಾಡುವುದಕ್ಕೆ ಆಗಲ್ಲ. ಮೊನ್ನೆ ಯುಗಾದಿ ಹಬ್ಬದ ದಿನ ಒಬ್ಬೊಟ್ಟಿನ ವಾಸನೆ ಬದಲು ಗಬ್ಬೆದ್ದು ನಾರುತ್ತಿರುವ ಚರಂಡಿ ವಾಸನೆ ಹೆಚ್ಚಿತ್ತು. ಮನೆಗೆ ನೆಂಟರಿಷ್ಟರು ಬರಲು ಹಿಂದುಮುಂದು ನೋಡುತ್ತಾರೆ… ಬೇಸಿಗೆ ಆರಂಭವಾಗಿದೆ ಹುಳ ಉಪ್ಪಟೆ ಮನೆಯೊಳಗಡೆ ಬರುತ್ತಿವೆ.‌ ಇಲ್ಲಿ ಎಳೆ ಮಕ್ಕಳು ಹೆಚ್ಚಿದ್ದು, ಹಾವು ಚೇಳು ಕಚ್ಚುವ ಭೀತಿಯಲ್ಲಿ ನಾವು ಇದ್ದೇವೆ ಎಂದು  ಚೆನ್ನಲಕ್ಷ್ಮಯ್ಯ ಹೇಳಿದ್ದಾರೆ…

ಕಸ ಎತ್ತಿದ್ದೇವೆ ಎಂದು ಗ್ರಾಮ ಪಂಚಾಯಿತಿಯಲ್ಲಿ ಮೂರು ತಿಂಗಳ ಹಿಂದೆಯೇ ಬಿಲ್ ಮಾಡಿಸಿಕೊಂಡಿದ್ದಾರೆ. ಆದರೆ, ಕಸ ಮಾತ್ರ ಇಲ್ಲೇ ಇದೆ. ಅಧಿಕಾರಿಗಳು ಬಿಲ್ ಮಾಡಿಸಿಕೊಳ್ಳಲು ಮುತುವರ್ಜಿ ವಹಿಸುತ್ತಾರೆ.. ಸಮಸ್ಯೆಯನ್ನು ಕೇಳೋದೆ ಇಲ್ಲ. ಕೂಡಲೇ ಕಸವನ್ನು ತೆರವುಗೊಳಿಸಬೇಕು. ಒಂದು ವೇಳೆ ಹೀಗೆ ಬೇಜವ್ದಾರಿ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಪಂಚಾಯಿತಿ ಮುತ್ತಿಗೆ ಹಾಕಿ ಹೋರಾಟ ಮಾಡುತ್ತೇವೆ ಎಂದು ಗ್ರಾಮದ ಯುವಕ ನವೀನ್ ಎಚ್ಚರಿಸಿದರು…

ಒಟ್ಟಿನಲ್ಲಿ ಇನ್ನಾದರೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಚರಂಡಿ ಸಮಸ್ಯೆ ನಿವಾರಿಸುತ್ತಾರಾ…. ಹಾಗೂ ಕಾಲೋನಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಾರಾ ಕಾದು ನೋಡಬೇಕಾಗಿದೆ…..

Leave a Reply

Your email address will not be published. Required fields are marked *

error: Content is protected !!