ಗಡಿ ಭಾಗದ ಸಾಸಲು ಹೋಬಳಿಗೆ ಸಿಗುತ್ತಿಲ್ಲ‌ ಸಾಸಿವೆಯಷ್ಟು ಪ್ರಾತಿನಿಧ್ಯ: 18 ಕೊಳವೆ ಬಾವಿಗಳಿಗೆ ಒಂದೇ ವಿದ್ಯುತ್ ಪರಿವರ್ತಕ: ಬಾಡಿದ ಬೆಳೆಗಳು: ಸಂಕಷ್ಟದಲ್ಲಿ ರೈತರು

ತಾಲೂಕಿನ ಸಾಸಲು ಹೋಬಳಿ ಗಡಿ ಭಾಗದಲ್ಲಿರುವುದರಿಂದ ಕ್ಷೇತ್ರದ ಜನಪ್ರತಿನಿಧಿಗಳು, ಆಡಳಿತ ವರ್ಗಕ್ಕೆ ಮಲತಾಯಿಯ ಮಗುವಿನಂತಾಗಿ ಅಭಿವೃದ್ಧಿ ವಿಚಾರದಲ್ಲಿ ತೀರಾ ಹಿಂದುಳಿದಿದೆ.

ತಾಲೂಕಿನ ಬೇರೆ ಹೋಬಳಿಗಳಿಗೆ ಸಿಗುತ್ತಿರುವ ಪ್ರಾತಿನಿಧ್ಯದಲ್ಲಿ ಸಾಸಿವೆಯಷ್ಟು ಕಾಳಜಿ ಸಾಸಲು ಹೋಬಳಿ ಮೇಲೆ‌ ಕಾಣದಾಗಿದೆ. ಹೋಬಳಿಯಲ್ಲಿ ದಶಕಗಳಿಂದ ಶಿಕ್ಷಣ, ಆರೋಗ್ಯ, ಬಡತನದ ಸಮಸ್ಯೆ ಹಾಸು ಹೊಕ್ಕಾಗಿದೆ. ಆದರೆ, ಜನಪ್ರತಿನಿಧಿಗಳಿಗೆ ಸಾಸಲು ಹೋಬಳಿಯ ಸಮಸ್ಯೆ ಪಂಚವಾರ್ಷಿಕ‌, ಸಾಂದರ್ಭಿಕ ಚುನಾವಣೆಗಳಲ್ಲಿ ಪ್ರಚಾರದ ಸರಕಾಗಿ ಮಾತ್ರ ಬಳಕೆಯಾಗುತ್ತಿದೆ.

ಸರ್ಕಾರಿ ಸೇವೆಗಳಲ್ಲಿ ತೊಡಗಿಸಿಕೊಂಡ ಅತಿ ಹೆಚ್ಚಿನವರು ಸಾಸಲು ಹೋಬಳಿಯಿಂದ ಹೊರಗಡೆ ಹೋದವರೇ ಆದರೂ ಅಭಿವೃದ್ಧಿ ಕಾಣದಿರುವುದು ಯಕ್ಷಪ್ರಶ್ನೆಯಾಗಿದೆ.

ಹೋಬಳಿ ಕೇಂದ್ರದಿಂದ ಸುಮಾರು 2ಕಿಮೀ‌ ದೂರದಲ್ಲಿರುವ ಶ್ರೀರಾಮನಹಳ್ಳಿ ಗ್ರಾಮದಲ್ಲಿ ರೈತರು ಅಡಿಕೆ, ಬಾಳೆ, ತೆಂಗು ಹಾಗೂ ಇತರೆ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಸಲುವಾಗಿ ಕೊಳವೆ ಬಾವಿ ಕೊರೆಸಿ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ವಿಪರ್ಯಾಸವೆಂದರೆ 18 ಕೊಳವೆ ಬಾವಿಗಳಿಗೆ ಇರುವುದು ಒಂದೇ ವಿದ್ಯುತ್ ಪರಿವರ್ತಕ. ಅತಿಯಾದ ಒತ್ತಡದಿಂದ ವಿದ್ಯುತ್ ಪರಿವರ್ತಕ(ಟ್ರಾನ್ಸ್ ಫಾರ್ಮರ್) ಪದೇ ಪದೇ ಸುಟ್ಟು ಹೋಗುತ್ತಿದೆ. ಒಮ್ಮೆ ವಿದ್ಯುತ್ ಪರಿವರ್ತಕ ರಿಪೇರಿ ಮಾಡಿಸಿದರೆ‌ ಎರಡು ದಿನ ಮಾತ್ರ ಸರಿಯಾಗಿ ಕೆಲಸ‌ನಿರ್ವಹಿಸುತ್ತದೆ. ನಂತರ ಸಮಸ್ಯೆ ಪುನರಾವರ್ತನೆಯಾಗುತ್ತದೆ.

ಹೆಚ್ಚುವರಿ ವಿದ್ಯುತ್ ಪರಿವರ್ತಕ ಅಳವಡಿಸುವಂತೆ ಗ್ರಾಮಸ್ಥರು ಸಾಕಷ್ಟು ಬಾರಿ ಬೆಸ್ಕಾಂ ಅಧಿಕಾರಿಗಳಿಗೆ ಮೌಖಿಕವಾಗಿ ಮನವಿ ಮಾಡಿದರೂ ಅಧಿಕಾರಿಗಳು ಮಾತ್ರ ಸಬೂಬು ಹೇಳಿಕೊಂಡು ದಿನದೂಡುತ್ತಿದ್ದಾರೆ. ಇನ್ನು ಶ್ರೀರಾಮನಹಳ್ಳಿಯಲ್ಲಿರುವ ಇರುವುದು ಒಂದೇ ಒಂದು ವಿದ್ಯುತ್ ಪರಿವರ್ತಕಕ್ಕೆ ಮನೆಯಲ್ಲಿ ಕೊಳವೆ ಬಾವಿ ಹೊಂದಿದವರೂ ಕೂಡ ಸಂಪರ್ಕ ಪಡೆಯುತ್ತಿದ್ದು, ಮತ್ತಷ್ಟು ಒತ್ತಡದಿಂದ ಜಂಪ್ ಸುಟ್ಟುಹೋಗುವುದು ಸಾಮಾನ್ಯವಾಗಿದೆ.

ಗ್ರಾಮಸ್ಥರ ಮಧ್ಯೆ ಸದಾ ಜಗಳ

ವಿದ್ಯುತ್ ಪರಿವರ್ತಕಕ್ಕೆ‌ ಸಂಪರ್ಕ ಪಡೆಯುವ ವಿಚಾರವಾಗಿ ಗ್ರಾಮಸ್ಥರ ಮಧ್ಯೆ ಸಾಕಷ್ಟು ಜಗಳವಾಗಿದೆ. ಗ್ರಾಮಸ್ಥರ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿದರೂ ಬೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ‌ ಮಾತ್ರ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ.

ಗ್ರಾಮದ ಹಲವು ರೈತರು 4-5 ವರ್ಷಗಳ ಹಿಂದೆಯೇ ವೈಯಕ್ತಿಕ ವಿದ್ಯುತ್ ಪರಿವರ್ತಕಕ್ಕಾಗಿ ಅರ್ಜಿ ಸಲ್ಲಿಸಿ, ಠೇವಣಿ ಕೂಡ ಕಟ್ಟಿದ್ದಾರೆ. ರೈತ ಸಾಲಗಾರನಾಗಿ ನಷ್ಟ‌ ಅನುಭವಿಸುತ್ತಿದ್ದರೂ ಬೆಸ್ಕಾಂನಿಂದ ಮಾತ್ರ ವಿದ್ಯುತ್ ಪರಿವರ್ತಕ‌ ಬಂದಿಲ್ಲ. ಗ್ರಾಮದ ಅಶ್ವತ್ಥಪ್ಪ ಎಂಬುವರ ಬಳಿ ಲೈನ್ ಮನ್ ಒಬ್ಬರು ಟಿಸಿ ಹಾಗೂ ಕಂಬಕ್ಕಾಗಿ 50 ಸಾವಿರ ಪಡೆದು ಎರಡು ವರ್ಷವಾಗಿದೆ. ಈವರೆಗೂ ಟಿಸಿನೂ ಇಲ್ಲ, ಹಣನೂ ಇಲ್ಲ ಎಂದು 85 ವರ್ಷದ ವೃದ್ಧ ಅಶ್ವತ್ಥಪ್ಪ‌ ಕಣ್ಣೀರು ಹಾಕಿದರು.

ಟಿ‌.ಸಿಗಾಗಿ ಠೇವಣಿ‌ ಇರಿಸಿದ ಹಲವು ರೈತರ ಪಾಡು ಇದೇ ಹಾಗಿದೆ. ರೈತರ ಸಮಸ್ಯೆ ಕುರಿತು ಬೆಸ್ಕಾಂ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಬಜೆಟ್ ಬಂದಿಲ್ಲ. ಮಾರ್ಚ್ ತಿಂಗಳಲ್ಲಿ 63 ಕೆವಿ ಸಾಮರ್ಥ್ಯದ ಇನ್ನೊಂದು ವಿದ್ಯುತ್ ಪರಿವರ್ತಕ ಅಳವಡಿಸುತ್ತೇವೆ. ಸಾಸಲು ಹಾಗೂ ತೂಬಗೆರೆ ಹೋಬಳಿಯ 250 ವೈಯಕ್ತಿಕ ಫಲಾನುಭವಿಗಳಿಗೆ ಟಿಸಿ ಅಳವಡಿಸಲು ಕಾರ್ಯಾದೇಶ ನೀಡಲಾಗಿದೆ. ಶೀಘ್ರವೇ ವಿದ್ಯುತ್ ಪರಿವರ್ತಕ ಅಳವಡಿಸಲಾಗುವುದು ಎಂದು ಬೆಸ್ಕಾಂ ಗ್ರಾಮೀಣ ಉಪವಿಭಾಗದ ಎಇಇ ಇನಾಯತ್ ಅವರು ತಿಳಿಸಿದರು.

ಇನ್ನು ಇದೇ ಸಮಸ್ಯೆ ಕುರಿತು ನೆಲಮಂಗಲದ ಬೆಸ್ಕಾಂ ಕಚೇರಿಯ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ಪ್ರಶ್ನಿಸಿದರೆ, ಏನೇ ಹೇಳಬೇಕಾದರೂ ದೊಡ್ಡಬಳ್ಳಾಪುರ ಉಪವಿಭಾಗದ ಅಧಿಕಾರಿಗಳಿಗೆ ತಿಳಿಸಿ, ಅವರು ನಮ್ಮ ಗಮನಕ್ಕೆ ತರುತ್ತಾರೆ. ಆ ಬಳಿಕ ಸಮಸ್ಯೆ ಪರಿಶೀಲಿಸೋಣ ಎಂದು ಉಡಾಫೆ ಉತ್ತರ‌ ನೀಡುತ್ತಾರೆ. ಇದೇ ಕಾರ್ಯನಿರ್ವಾಹಕ‌ ಎಂಜಿನಿಯರ್ ಅವರಿಗೆ ಶಾಸಕರಾದಿಯಾಗಿ ಗ್ರಾ.ಪಂ. ಅಧ್ಯಕ್ಷರು ಸಾಕಷ್ಟು ಬಾರಿ ದೂರವಾಣಿ ಮೂಲಕ‌ ತಿಳಿಸಿದ್ದರೂ ಸಮಸ್ಯೆಯ ಗಂಭೀರತೆ ಮಾತ್ರ ಅಧಿಕಾರಿಗಿಲ್ಲ.

30 ಎಕರೆಗೂ ಹೆಚ್ಚು ಬೆಳೆ ನಾಶ

ಶ್ರೀರಾಮನಹಳ್ಳಿ ಗ್ರಾಮದಲ್ಲಿ  ವಿದ್ಯುತ್ ಪರಿವರ್ತಕದ ಸಮಸ್ಯೆಯಿಂದ ಸುಮಾರು 30 ಎಕರೆಗು ಹೆಚ್ಚು ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ವಿದ್ಯುತ್ ಪರಿವರ್ತಕದ ಸಮೀಪವೇ ಬೆಳೆದಿರುವ ಅಡಿಕೆ ಸಸಿಗಳು ನೀರಿಲ್ಲದೇ ಒಣಗುತ್ತಿವೆ. ರಾಗಿ ಪೈರು, ಬಾಳೆ ಗಿಡಗಳು ಕೂಡ ಒಣಗಲಾರಂಭಿಸಿವೆ. ಕಳೆದ ವರ್ಷ ಸರಿಯಾದ ಮಳೆಯಾಗದೇ ಬೆಳೆ ನಾಶವಾಯಿತು. ಈ ವರ್ಷ ಬಿಸಿಲು ಹೆಚ್ಚಿದೆ. ವಿದ್ಯುತ್ ಅಭಾವ, ವಿದ್ಯುತ್ ಪರಿವರ್ತಕದ ಸಮಸ್ಯೆಯಿಂದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಜೀವನಾಧಾರವಾದ ಕೃಷಿ ಕೈಕೊಟ್ಟರೆ ನಮ್ಮ ಬದುಕು ಹೇಗೆ ಎಂದು ಗ್ರಾಮಸ್ಥರಾದ ನರಸಿಂಹಮೂರ್ತಿ, ಮಂಜುನಾಥ್ ಹಾಗೂ ರೈತ‌ ಮಹಿಳೆ ಸಂಧ್ಯಾ ಅವರು ಪ್ರಶ್ನಿಸಿದರು.

ತಕ್ಷಣವೇ ಬೆಸ್ಕಾಂ ಅಧಿಕಾರಿಗಳು ಹೆಚ್ಚುವರಿ ವಿದ್ಯುತ್ ಪರಿವರ್ತಕ ಅಳವಡಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಅವರು ಒತ್ತಾಯಿಸಿದರು.

ಜನರೇಟರ್ ತರಿಸಿ ನೀರು ಹಾಯಿಸುವ ಸಾಹಸ

ವಿದ್ಯುತ್ ಪರಿವರ್ತಕ‌ ಒಮ್ಮೆ ಸುಟ್ಟು ಹೋದರೆ ಅದನ್ನು ದುರಸ್ತಿಗೊಳಿಸಲು ಬೆಸ್ಕಾಂ ಸಿಬ್ಬಂದಿ ಕನಿಷ್ಠ 20 ದಿನ ಸಮಯ ತೆಗೆದುಕೊಳ್ಳುತ್ತಾರೆ. ಇಂತಹ ಸಮಯದಲ್ಲಿ ಹೆಜ್ಜಾಜಿ ಸೇರಿ ಹಲವೆಡೆ ಜನರೇಟರ್ ತರಿಸಿ ನೀರು ಹಾಯಿಸುತ್ತೇವೆ. ಒಮ್ಮೆ ಜನರೇಟರ್ ಬಾಡಿಗೆಗೆ ತಂದರೆ ಅವರಿಗೆ ಸಾವಿರಾರು ರುಪಾಯಿ ತೆರಬೇಕಾಗುತ್ತದೆ. ಕಿ.ಮೀ.ಗಟ್ಟಲೇ ತೋಟಗಳಿಗೆ ವೈರ್ ತರಬೇಕಾಗಿದೆ ಹಾಗಾಗ ವೈರ್ ಸುಟ್ಟು ಹೋಗುವುದರಿಂದ ಗಾಯದ ಮೇಲೆ‌ ಬರೆ ಬಿದ್ದಂತಾಗುತ್ತದೆ ಎಂದು ರೈತರು ಅಳಲು ತೋಡಿಕೊಂಡರು.

Ramesh Babu

Journalist

Recent Posts

ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಹೊಸ ವೇದಿಕೆ ಒಂದೇ ಆವರಣದಲ್ಲಿ ಬಾಕ್ಸಿಂಗ್, ಕುಸ್ತಿ, ಜೂಡೋ, ಕಬ್ಬಡಿ, ಬ್ಯಾಡ್ಮಿಂಟನ್, ಸ್ಕೇಟಿಂಗ್ ಸೌಲಭ್ಯ

ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತಮ ತರಬೇತಿ ಹಾಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ನಗರದ ನ್ಯಾಷನಲ್ ಪ್ರೈಡ್…

15 hours ago

ಶಾಲೆ ಬಿಟ್ಟ ಮಕ್ಕಳ ಪತ್ತೆಗೆ ಅಭಿಯಾನ: ವಲಸೆ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಕರೆತರಲು ಕ್ರಮ

  ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರೆಯಬೇಕು ಎಂಬ ಸರ್ಕಾರದ ಆಶಯದ ನಡುವೆಯೂ ನಾನಾ ಕಾರಣಗಳಿಂದ ಶಾಲೆಯಿಂದ ಹೊರಗುಳಿದಿರುವ ಹಾಗೂ ಶಾಲೆಗೆ…

20 hours ago

ಪಾಕಿಸ್ತಾನಿ ಗ್ಯಾಂಗ್‌ ಜೊತೆ ಸಂಪರ್ಕ ಆರೋಪ: ದೊಡ್ಡಬಳ್ಳಾಪುರದಲ್ಲಿ ವ್ಯಕ್ತಿ ಬಂಧನ

ದೊಡ್ಡಬಳ್ಳಾಪುರ: ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳೊಂದಿಗೆ ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ…

2 days ago

ದೊಡ್ಡಬಳ್ಳಾಪುರದಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

ದೊಡ್ಡಬಳ್ಳಾಪುರ: ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಂತ ಶುಕ್ರವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.…

2 days ago

ಘಾಟಿ ಕ್ಷೇತ್ರದಲ್ಲಿ ವರಮಹಾಲಕ್ಷ್ಮಿ ಸಂಭ್ರಮ; ಮಹಿಳೆಯರಿಗೆ ಬಳೆ, ಅರಶಿನ–ಕುಂಕುಮ ವಿತರಣೆ

ದೊಡ್ಡಬಳ್ಳಾಪುರ: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ವತಿಯಿಂದ…

3 days ago

ವರಮಹಾಲಕ್ಷ್ಮಿ ಹಬ್ಬ…..

ವರಮಹಾಲಕ್ಷ್ಮಿ ಹಬ್ಬ..... ಅವರವರ ನಂಬಿಕೆ, ಆಚರಣೆಗಳು ಅವರವರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ. ಅದನ್ನು ಗೌರವಿಸುತ್ತಾ, ಅವರವರ ವಿವೇಚನೆಗೆ ಬಿಡುತ್ತಾ,....…

3 days ago