ದೇವನಹಳ್ಳಿ : ಹಂದರಹಳ್ಳಿ ಗ್ರಾಮದಲ್ಲಿ ಒತ್ತುವರಿ ಆಗಿರುವ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಮೀನು ತೆರವು ಮಾಡುವವರೆಗೆ ಪ್ರತಿಭಟನೆ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಅಂಬೇಡ್ಕರ್ ಸೇವಾ ಸಮಿತಿ ರಾಜ್ಯಾಧ್ಯಕ್ಷ ಕೆ.ಎಂ ಸಂದೇಶ್ ತಿಳಿಸಿದರು.
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಬೂದಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂದರಹಳ್ಳಿ ಗ್ರಾಮದಲ್ಲಿನ ಕಾರ್ಯನಿರ್ವಾಹಕ ಅಧಿಕಾರಿ ಹೆಸರಿನಲ್ಲಿರುವ 7 ಎಕರೆ 20 ಗುಂಟೆ ಜಮೀನು ಗಡಿ ಗುರುತಿಸಿ, ಒತ್ತುವರಿ ಆಗಿರುವ ಜಮೀನು ತೆರವು ಮಾಡುವಂತೆ ಆಗ್ರಹಿಸಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರಿ ಜಮೀನು ಉಳಿಸಲು ಗ್ರಾಮಸ್ಥರು ಚಳಿ,ಗಾಳಿ ಎನ್ನದೇ ಕೆಟ್ಟ ಪರಿಸ್ಥಿತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಆದರೆ ಅಧಿಕಾರಿಗಳು ಬೆಚ್ಚಗೆ ಮನೆಯಲ್ಲಿ ಮಲಗಿಕೊಂಡಿದ್ದಾರೆ. ಸರ್ವೇ ಅಧಿಕಾರಿಗಳು ಕಾಟಾಚಾರಕ್ಕೆ ಸರ್ವೇ ಮಾಡಿಕೊಂಡು ಹೋಗುತ್ತಾರೆ. ಗಡಿ ಗುರುತಿಸಲು ಜೆಸಿಬಿ ಇಲ್ಲ ಎಂದು ಬೇಜವಾಬ್ದಾರಿತನ ತೋರುತ್ತಿದ್ದಾರೆ. ಗಡಿ ಗುರುತಿಸಿ ಒತ್ತುವರಿ ತೆರವು ಆಗುವ ವರೆಗೆ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬೆಟ್ಟೇನಹಳ್ಳಿ ಮುನಿರಾಜು, ಶ್ರೀ ಓಂಕಾರ ಸೇವಾ ಟ್ರಸ್ಟ್ ಅಧ್ಯಕ್ಷ ಮುನಿಯಪ್ಪ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.