ಗಂಡ, ಅತ್ತೆ, ಮಾವ, ಮೈದುನ ಹಾಗೂ ಸಂಬಂಧಿಕರ ಕಿರುಕುಳ ಆರೋಪ: ಸರ್.ಎಂ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂನಲ್ಲಿ ಗೃಹಿಣಿ ಆತ್ಮಹತ್ಯೆ ಪ್ರಕರಣ: ಒಂದು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳ ಬಂಧನ

ಗಂಡ, ಅತ್ತೆ, ಮಾವ, ಮೈದುನ ಹಾಗೂ ಸಂಬಂಧಿಕರ ಕಿರುಕುಳಕ್ಕೆ ಬೇಸತ್ತು ವಿಡಿಯೋ ರೆಕಾರ್ಡ್ ಮಾಡಿ ಸಂಬಂಧಿಕರಿಗೆ ಶೇರ್ ಮಾಡಿ ದೊಡ್ಡಬಳ್ಳಾಪುರ ತಾಲೂಕಿನ ಎಸ್ ಎಸ್ ಘಾಟಿ ಸುಬ್ರಹ್ಮಣ್ಯ ದೇವಾಲಯ ಸಮೀಪವಿರುವ ಸರ್.ಎಂ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂಗೆ ಹಾರಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅ.20ರಂದು ಬೆಳಕಿಗೆ ಬಂದಿತ್ತು….

ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಐವರು ಆರೋಪಿಗಳನ್ನು ಇದೀಗ ಬಂಧನ ಮಾಡಲಾಗಿದೆ. ಸದ್ಯ ಓರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಅ.20ರಂದು ಮೃತಳ ಗಂಡ ಎ1 ವೇಣು(30), ಮಾವ ಎ2 ಗೋವಿಂದಪ್ಪ(55)ನನ್ನು ಬಂಧನ ಮಾಡಲಾಗಿತ್ತು.

ಘಟನೆ ನಡೆದ ದಿನದಿಂದ ಎ3 ನಾರಾಯಣಸ್ವಾಮಿ, ಎ4 ಮುತ್ತೇಗೌಡ(49), ಎ5 ಭಾರತಮ್ಮ(50), ಎ6 ಪಲ್ಲವಿ ತಲೆ ಮರೆಸಿಕೊಂಡಿದ್ದರು.

ಇದೀಗ ಇಂದು (ನ.22) ಮೃತಳ ಗಂಡನಾದ ಎ1 ಆರೋಪಿ ವೇಣುವಿನ ಚಿಕ್ಕಪ್ಪ ಹಾಗೂ ಸರ್ಕಾರಿ ಶಾಲಾ ಶಿಕ್ಷಕ ಎ4 ಮುತ್ತೇಗೌಡ(49), ಮೃತಳ ಅತ್ತೆ ಎ5 ಭಾರತಮ್ಮ(50), ಮುತ್ತೇಗೌಡನ ಹೆಂಡತಿ ಹಾಗೂ ಸರ್ಕಾರಿ ಶಾಲಾ ಶಿಕ್ಷಕಿ ಎ6 ಪಲ್ಲವಿಯನ್ನು ಸರ್ಜಾಪುರದಲ್ಲಿ ಡಿವೈಎಸ್ಪಿ ಪಾಂಡುರಂಗ, ಮಹಿಳಾ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಡಾ.ನವೀನ್ ಕುಮಾರ್ ಎಂ.ಬಿ ನೇತೃತ್ವದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ, ಮೃತಳ ಮೈದುನ ಎ3 ನಾರಾಯಣಸ್ವಾಮಿ ತಲೆಮರೆಸಿಕೊಂಡಿದ್ದು, ಈತನ ಜಾಡು ಇನ್ನೂ ಪತ್ತೆಯಾಗಿರುವುದಿಲ್ಲ. ಈತನ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ..

ಗಂಡ ಹಾಗೂ ಗಂಡನ ಸಂಬಂಧಿಕರ ಕಿರುಕುಳಕ್ಕೆ ಮನನೊಂದ ದೊಡ್ಡಬಳ್ಳಾಪುರ ತಾಲೂಕಿನ ಸೋತೆನಹಳ್ಳಿ ಗ್ರಾಮದ ಪುಷ್ಪಾ(28) ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿ.

ತಪಸೀಹಳ್ಳಿ ಗ್ರಾಮದ ವೇಣು ಜೊತೆ ಗುರು ಹಿರಿಯರ ನಿಶ್ಚಯದಂತೆ ಕಳೆದ ಒಂದು ವರ್ಷದ ಹಿಂದೆ ವಿವಾಹವಾಗಿತ್ತು. ವಿವಾಹವಾದಗಿನಿಂದಲೂ ಗಂಡ, ಅತ್ತೆ, ಮಾವ, ಮೈದುನ ಹಾಗೂ ಸಂಬಂಧಿಕರಿಂದ ವರದಕ್ಷಿಣೆ, ನಿವೇಶನಕ್ಕಾಗಿ ಕಿರುಕುಳ ನೀಡುತ್ತಿದ್ದರು ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.

ಮದುವೆ ಆಗಿದ್ದಾಗಿನಿಂದಲೂ ಹೆಂಡತಿ ಜೊತೆ ಸಂಸಾರ ಮಾಡದ ಗಂಡ, ಮಗು ಬೇಕು ಎಂದರೆ ಮೈದುನನ ಜೊತೆ ಮಲಗು ಎನ್ನುತ್ತಿದ್ದ ಅತ್ತೆ ಮಾವ. ಕಿರುಕುಳ ತಾಳಲಾರದೆ ಗೃಹಿಣಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು…

ಕಳೆದ ವರ್ಷವಷ್ಟೆ ಮಗಳ ಜೀವನ ಚೆನ್ನಾಗಿರಲಿ ಅಂತ ಪುಷ್ಪಾ ತಂದೆ ನಾರಾಯಣಪ್ಪ 5 ಲಕ್ಷ ಹಣ ವರದಕ್ಷಿಣೆ, ಚಿನ್ನಾಭರಣವನ್ನೆಲ್ಲ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ರಂತೆ. ಆದ್ರೆ ಅಷ್ಟೆಲ್ಲ ಮಾಡಿದ್ರು ಗಂಡ ವೇಣು, ಅತ್ತೆ ಭಾರತಿ, ಮಾವ ಗೋವಿಂದಪ್ಪ, ಮತ್ತು ಮೈದುನ ನಾರಾಯಣಸ್ವಾಮಿ ಸೇರಿಕೊಂಡು ಮಗಳಿಗೆ ಕಿರುಕುಳ ನೀಡಿ ಸಾಯುವಂತೆ ಮಾಡಿದ್ದು, ಮಗಳ ಸಾವಿಗೆ ಗಂಡನ ಮನೆಯವರೆ ಕಾರಣ ಅಂತ ಮೃತಳ ತಂದೆ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದಾರೆ..

ಮದುವೆಯ ದಿನದಿಂದಲೂ ವೇಣು ತನ್ನ ಪತ್ನಿಯೊಂದಿಗೆ ಸಹಜ ದಾಂಪತ್ಯ ಜೀವನ ನಡೆಸಿರಲಿಲ್ಲ. ಮಗು ಬೇಕು ಎಂದರೆ ಮೈದುನನ ಜೊತೆ ಮಲಗು ಎಂದು ಹೇಳಿದ್ದು, ಅತ್ತೆ ಮತ್ತು ಇತರ ಮನೆಯವರು ಪುಷ್ಪಾಳಿಗೆ ಮಾನಹಾನಿ ಉಂಟು ಮಾಡುವ ರೀತಿಯಲ್ಲಿ ವರ್ತಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ರೀತಿಯ ಮಾನಸಿಕ ಹಿಂಸೆ ಮತ್ತು ನಿರಂತರ ಕಿರುಕುಳದಿಂದ ಬೇಸತ್ತ ಪುಷ್ಪಾ, ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.

ಆತ್ಮಹತ್ಯೆಗೆ ಮುನ್ನ ಚಿತ್ರೀಕರಿಸಿದ ವಿಡಿಯೋದಲ್ಲಿ ಪುಷ್ಪಾ ತಾನು ಎದುರಿಸುತ್ತಿದ್ದ ಕಿರುಕುಳ ಮತ್ತು ಕುಟುಂಬದವರ ಅಸಹನೀಯ ವರ್ತನೆ ಕುರಿತು ಸ್ಪಷ್ಟವಾಗಿ ಬಿಚ್ಚಿಟ್ಟಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದು ಪ್ರಕರಣಕ್ಕೆ ಮತ್ತಷ್ಟು ಗಂಭೀರ ಪಡೆದುಕೊಂಡಿತ್ತು. ಈ ಘಟನೆಯ ಬಗ್ಗೆ ದೊಡ್ಡಬಳ್ಳಾಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಗಂಡ ವೇಣು, ಅತ್ತೆ ಮತ್ತು ಇತರ ಮನೆಯವರ ವಿರುದ್ಧ ಹಿಂಸೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪಗಳಡಿ ತನಿಖೆ ಮಾಡುತ್ತಿದ್ದಾರೆ.

ನಾನು ಮದುವೆಯಾಗಿ ಗಂಡನ ಮನೆಗೆ ಹೋದ ದಿನದಿಂದ ನನ್ನ ಗಂಡ ನನ್ನ ಜೊತೆ ಸರಿಯಾಗಿ ಸಂಸಾರ ಮಾಡದೆ, ನನ್ನಿಂದ ದೂರ ಉಳಿಯುತ್ತಿದ್ದರು. ಸಂಸಾರ ಮಾಡಬೇಕೆಂದು ಎಷ್ಟು ಪ್ರಯತ್ನ ಪಟ್ಟರು ಗಂಡ ನನ್ನ ಜೊತೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಈ ವಿಚಾರವನ್ನು ನಮ್ಮ ಅತ್ತೆ ಮಾವನಿಗೆ ತಿಳಿಸಿದರೆ ಎಲ್ಲಾ ಸರಿ ಹೋಗುತ್ತೆ ಸುಮ್ಮನಿರು ಎಂದು ಆರಂಭದಲ್ಲಿ ಹೇಳುತ್ತಿದ್ದರು. ಗಂಡನಿಗೆ ನಾವು ಮಗು ಮಾಡಿಕೊಳ್ಳೋಣ ಎಂದು ಕೇಳಿದರೆ, ಈಗ ಮಗು ಬೇಡ 1-2 ವರ್ಷ ಹೋಗಲಿ ನಂತರ ಮಗು ಮಾಡಿಕೊಳ್ಳೋಣ. ಈಗ ಯಾಕೆ ಅರ್ಜೆಂಟ್ ಎಂದು ನನಗೆ ಬೈಯುತ್ತಿದ್ದರು ಪುಷ್ಪಾವತಿ ಹೇಳಿಕೊಂಡಿದ್ದಾರೆ.

ನನಗೆ ಅನುಮಾನ ಬಂದು, ನಿನಗೇನಾದರೂ ತೊಂದರೆ ಇದ್ದರೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳೋಣ ಎಂದು ಗಂಡನಿಗೆ ತಿಳಿಸಿದ್ದೆ. ಆಗ ನನಗೆ ಅವಾಚ್ಯ ಶಬ್ದಗಳಿಂದ ಬೈದಿದ್ದರು. ಅವರನ್ನು ಮುಟ್ಟಿದರೆ ಕಾಲಿನಿಂದ ನನ್ನ ಎದೆಗೆಲ್ಲ ಒದೆಯುತ್ತಿದ್ದರು. ಮಗು ಬೇಕು ಎಂದರೆ ನನ್ನ ಚಿಕ್ಕ ಮಗನ ಬಳಿ ಹೋಗು ಎಂದು ಅತ್ತೆ-ಮಾವ ಹೇಳುತ್ತಿದ್ದರು. ಮೈದುನನೂ ಅದೇ ರೀತಿ ಮಾತಾಡಿ ಮಾನಸಿಕ ಹಿಂಸೆ ನೀಡುತ್ತಿದ್ದ. ಈ ಬಗ್ಗೆ ನನ್ನ ಹೆತ್ತವರಿಗೆ ತಿಳಿಸಿದ್ದು, ಅವರು ಬಂದು ಹೇಳಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಪುಷ್ಪಾವತಿ ವಿಡಿಯೋದಲ್ಲಿ ಆರೋಪಿಸಿದ್ದರು.

ಈ ಕುರಿತು ಮೃತಳ ಸಂಬಂಧಿ ಧನಂಜಯ್ ಮಾತನಾಡಿ, ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆತನನ್ನು ಪೊಲೀಸರು ಬಂಧಿಸುತ್ತಾರೆ ಎಂಬ ಭರವಸೆ ಇದೆ. ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ ಇದೆ. ಆರು ಜನ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಆಗ ನಮ್ಮ ಮಗುವಿನ ಆತ್ಮಕ್ಕೆ ಶಾಂತಿ ಸಿಗುತ್ತದೆ. ನಮ್ಮ ಹೆಣ್ಣುಮಗುವನ್ನು ಕಳೆದುಕೊಂಡು ಅನಾಥರಾಗಿದ್ದೇವೆ. ನಮ್ಮ ಮಗುವಿಗೆ ಆದ ಅನ್ಯಾಯ ಯಾವ ಹೆಣ್ಣುಮಗುವಿಗೂ ಆಗಬಾರದು. ಆದ್ದರಿಂದ ಆರೋಪಿಗಳಿಗೆ ಶಿಕ್ಷೆಯಾಗಲೇಬೇಕು ಎಂದು ಹೇಳಿದರು…

Leave a Reply

Your email address will not be published. Required fields are marked *

error: Content is protected !!