ಗಂಡ, ಅತ್ತೆ, ಮಾವ, ಮೈದುನ ಹಾಗೂ ಸಂಬಂಧಿಕರ ಕಿರುಕುಳದ ಆರೋಪ: ಕಿರುಕುಳ ತಾಳಲಾರದೇ ವಿಡಿಯೋ ಮಾಡಿ ಗೃಹಿಣಿ ಆತ್ಮಹತ್ಯೆ 

ಗಂಡ, ಅತ್ತೆ, ಮಾವ, ಮೈದುನ ಹಾಗೂ ಸಂಬಂಧಿಕರ ಕಿರುಕುಳದ ಆರೋಪಕ್ಕೆ ಸಂಬಂಧಿಸಿದಂತೆ ವಿಡಿಯೋ ರೆಕಾರ್ಡ್ ಮಾಡಿ ಸಂಬಂಧಿಕರಿಗೆ ಶೇರ್ ಮಾಡಿ ದೊಡ್ಡಬಳ್ಳಾಪುರ ತಾಲೂಕಿನ ಎಸ್ ಎಸ್ ಘಾಟಿ ಸುಬ್ರಹ್ಮಣ್ಯ ದೇವಾಲಯ ಸಮೀಪವಿರುವ ಸರ್.ಎಂ ವಿಶ್ವೇಶ್ವರಯ್ಯ ಪಿಕ್ ಡ್ಯಾಂಗೆ ಹಾರಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ….

ದೊಡ್ಡಬಳ್ಳಾಪುರ ತಾಲೂಕಿನ ಸೋತೆನಹಳ್ಳಿ ಗ್ರಾಮದ  ಪುಷ್ಪಾ(28) ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿ.

ತಪಸೀಹಳ್ಳಿ ಗ್ರಾಮದ ವೇಣು ಜೊತೆ ಗುರು ಹಿರಿಯರ ನಿಶ್ಚಯದಂತೆ ಕಳೆದ ಒಂದು ವರ್ಷದ ಹಿಂದೆ ವಿವಾಹವಾಗಿತ್ತು.

ವಿವಾಹವಾದಗಿನಿಂದಲೂ ಗಂಡ, ಅತ್ತೆ, ಮಾವ, ಮೈದುನ ಹಾಗೂ ಸಂಬಂಧಿಕರಿಂದ ವರದಕ್ಷಿಣೆ, ನಿವೇಶನಕ್ಕಾಗಿ ಕಿರುಕುಳ ನೀಡುತ್ತಿದ್ದರು ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.

ಮದುವೆ ಆಗಿದ್ದಾಗಿನಿಂದಲೂ ಹೆಂಡತಿ ಜೊತೆ ಸಂಸಾರ ಮಾಡದ ಗಂಡ, ಮಗು ಬೇಕು ಎಂದರೆ ಮೈದುನನ ಜೊತೆ ಮಲಗು ಎನ್ನುತ್ತಿದ್ದ ಅತ್ತೆ ಮಾವ. ಕಿರುಕುಳ ತಾಳಲಾರದೆ ಗೃಹಿಣಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ…

ಕಳೆದ ವರ್ಷವಷ್ಟೆ ಮಗಳ ಜೀವನ ಚೆನ್ನಾಗಿರಲಿ ಅಂತ ಪುಷ್ಪಾ ತಂದೆ ನಾರಾಯಣಪ್ಪ 5 ಲಕ್ಷ ಹಣ ವರದಕ್ಷಿಣೆ, ಚಿನ್ನಾಭರಣವನ್ನೆಲ್ಲ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ರಂತೆ. ಆದ್ರೆ ಅಷ್ಟೆಲ್ಲ ಮಾಡಿದ್ರು ಗಂಡ ವೇಣು, ಅತ್ತೆ ಭಾರತಿ, ಮಾವ ಗೋವಿಂದಪ್ಪ, ಮತ್ತು ಮೈದುನ ನಾರಾಯಣಸ್ವಾಮಿ ಸೇರಿಕೊಂಡು ಮಗಳಿಗೆ ಕಿರುಕುಳ ನೀಡಿ ಸಾಯುವಂತೆ ಮಾಡಿದ್ದು ಮಗಳ ಸಾವಿಗೆ ಗಂಡನ ಮನೆಯವರೆ ಕಾರಣ ಅಂತ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದಾರೆ.

ಮದುವೆಯ ದಿನದಿಂದಲೂ ವೇಣು ತನ್ನ ಪತ್ನಿಯೊಂದಿಗೆ ಸಹಜ ದಾಂಪತ್ಯ ಜೀವನ ನಡೆಸಿರಲಿಲ್ಲ. ಮಗು ಬೇಕು ಎಂದರೆ ಮೈದುನನ ಜೊತೆ ಮಲಗು ಎಂದು ಹೇಳಿದ್ದು, ಅತ್ತೆ ಮತ್ತು ಇತರ ಮನೆಯವರು ಪುಷ್ಪಾಳಿಗೆ ಮಾನಹಾನಿ ಉಂಟು ಮಾಡುವ ರೀತಿಯಲ್ಲಿ ವರ್ತಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ರೀತಿಯ ಮಾನಸಿಕ ಹಿಂಸೆ ಮತ್ತು ನಿರಂತರ ಕಿರುಕುಳದಿಂದ ಬೇಸತ್ತ ಪುಷ್ಪಾ, ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ್ಮಹತ್ಯೆಗೆ ಮುನ್ನ ಚಿತ್ರೀಕರಿಸಿದ ವಿಡಿಯೋದಲ್ಲಿ ಪುಷ್ಪಾ ತಾನು ಎದುರಿಸುತ್ತಿದ್ದ ಕಿರುಕುಳ ಮತ್ತು ಕುಟುಂಬದವರ ಅಸಹನೀಯ ವರ್ತನೆ ಕುರಿತು ಸ್ಪಷ್ಟವಾಗಿ ಬಿಚ್ಚಿಟ್ಟಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣಕ್ಕೆ ಮತ್ತಷ್ಟು ಗಂಭೀರ ಪಡೆದುಕೊಂಡಿದೆ. ಈ ಘಟನೆಯ ಬಗ್ಗೆ ದೊಡ್ಡಬಳ್ಳಾಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಗಂಡ ವೇಣು, ಅತ್ತೆ ಮತ್ತು ಇತರ ಮನೆಯವರ ವಿರುದ್ಧ ಹಿಂಸೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪಗಳಡಿ ತನಿಖೆ ಆರಂಭಿಸಿದ್ದಾರೆ.

ನಾನು ಮದುವೆಯಾಗಿ ಗಂಡನ ಮನೆಗೆ ಹೋದ ದಿನದಿಂದ ನನ್ನ ಗಂಡ ನನ್ನ ಜೊತೆ ಸರಿಯಾಗಿ ಸಂಸಾರ ಮಾಡದೆ, ನನ್ನಿಂದ ದೂರ ಉಳಿಯುತ್ತಿದ್ದರು. ಸಂಸಾರ ಮಾಡಬೇಕೆಂದು ಎಷ್ಟು ಪ್ರಯತ್ನ ಪಟ್ಟರು ಗಂಡ ನನ್ನ ಜೊತೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಈ ವಿಚಾರವನ್ನು ನಮ್ಮ ಅತ್ತೆ ಮಾವನಿಗೆ ತಿಳಿಸಿದರೆ ಎಲ್ಲಾ ಸರಿ ಹೋಗುತ್ತೆ ಸುಮ್ಮನಿರು ಎಂದು ಆರಂಭದಲ್ಲಿ ಹೇಳುತ್ತಿದ್ದರು. ಗಂಡನಿಗೆ ನಾವು ಮಗು ಮಾಡಿಕೊಳ್ಳೋಣ ಎಂದು ಕೇಳಿದರೆ, ಈಗ ಮಗು ಬೇಡ 1-2 ವರ್ಷ ಹೋಗಲಿ ನಂತರ ಮಗು ಮಾಡಿಕೊಳ್ಳೋಣ. ಈಗ ಯಾಕೆ ಅರ್ಜೆಂಟ್ ಎಂದು ನನಗೆ ಬೈಯುತ್ತಿದ್ದರು ಪುಷ್ಪಾವತಿ ಹೇಳಿಕೊಂಡಿದ್ದಾರೆ.

ನನಗೆ ಅನುಮಾನ ಬಂದು, ನಿನಗೇನಾದರೂ ತೊಂದರೆ ಇದ್ದರೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳೋಣ ಎಂದು ಗಂಡನಿಗೆ ತಿಳಿಸಿದ್ದೆ. ಆಗ ನನಗೆ ಅವಾಚ್ಯ ಶಬ್ದಗಳಿಂದ ಬೈದಿದ್ದರು. ಅವರನ್ನು ಮುಟ್ಟಿದರೆ ಕಾಲಿನಿಂದ ನನ್ನ ಎದೆಗೆಲ್ಲ ಒದೆಯುತ್ತಿದ್ದರು. ಮಗು ಬೇಕು ಎಂದರೆ ನನ್ನ ಚಿಕ್ಕ ಮಗನ ಬಳಿ ಹೋಗು ಎಂದು ಅತ್ತೆ-ಮಾವ ಹೇಳುತ್ತಿದ್ದರು. ಮೈದುನನೂ ಅದೇ ರೀತಿ ಮಾತಾಡಿ ಮಾನಸಿಕ ಹಿಂಸೆ ನೀಡುತ್ತಿದ್ದ. ಈ ಬಗ್ಗೆ ನನ್ನ ಹೆತ್ತವರಿಗೆ ತಿಳಿಸಿದ್ದು, ಅವರು ಬಂದು ಹೇಳಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಪುಷ್ಪಾವತಿ ಆರೋಪಿಸಿದ್ದಾರೆ.

ಈ ಕುರಿತು ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!