ಗಂಡ್ರಗೊಳಿಪುರ ವಿಎಸ್ಎಸ್ಎನ್‌ ಚುನಾವಣೆ ಕಾನೂನು‌‌ ಬಾಹಿರ-ಸಹಕಾರಿ ಸಂಘದ ಪ್ರವರ್ತಕರನ್ನೇ ಕೈಬಿಟ್ಟು ಪಹಣಿ ಹೊಂದಿಲ್ಲದವರನ್ನ ಮತದಾರರ ಪಟ್ಟಿಗೆ ಸೇರ್ಪಡೆ- ಘೋಷಣೆಯಾಗಿರುವ ಸೊಸೈಟಿ ಚುನಾವಣೆ ಮುಂದೂಡಿ- ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಆಗ್ರಹ

ತಾಲೂಕಿನ ದೊಡ್ಡಬೆಳವಂಗಲ‌ ಹೋಬಳಿಯ ಗಂಡ್ರಗೊಳಿಪುರ ವ್ಯವಸಾಯ ಸೇವಾ ಸಹಕಾರ ಸಂಘ(ವಿ ಎಸ್ಎಸ್ ಎನ್) ಚುನಾವಣೆ ಪ್ರಕ್ರಿಯೆ ಕಾನೂನು ಬದ್ಧವಾಗಿಲ್ಲ, ಮತದಾರ ಪಟ್ಟಿಯಲ್ಲಿ ಪಹಣಿ ಹೊಂದಿಲ್ಲದ ಹಲವಾರು ಜನ ಸೇರ್ಪಡೆಯಾಗಿದ್ದಾರೆ. ಅರ್ಹ ಷೇರುದಾರರನ್ನು ಪಟ್ಟಿಯಿಂದ ಹೊರಗಿಟ್ಟು ಚುನಾವಣೆ ನಡೆಸಲು ಹೊರಟಿರುವುದು ಸರಿಯಲ್ಲ. ಇದು ಸಂಪೂರ್ಣ ಅಕ್ರಮವಾಗಿದೆ. ಆದ್ದರಿಂದ ಈಗ ಘೋಷಣೆಯಾಗಿರುವ ಸೊಸೈಟಿ ಚುನಾವಣೆ ಮುಂದೂಡಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಹೇಳಿದರು.

ಈ ಕುರಿತು ಗಂಡ್ರಗೊಳಿಪುರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕನಸವಾಡಿ ಹಾಗೂ ಹೊನ್ನಾವರ ಪಂಚಾಯಿತಿ ವ್ಯಾಪ್ತಿಯ ಸುಮಾರು 800 ಷೇರುದಾರರು ಕನಸವಾಡಿ ವ್ಯವಸಾಯೋತ್ಪನ್ನ ಸಹಕಾರ ಸಂಘದ ಯಶಸ್ಸಿಗೆ ಕಾರಣರಾಗಿದ್ದರು. ಪ್ರಸ್ತುತ ಕನಸವಾಡಿಯಿಂದ ಬೇರ್ಪಟ್ಟು ಈಗ ಪ್ರತ್ಯೇಕವಾಗಿ ಗಂಡ್ರಗೊಳಿಪುರ ವಿಎಸ್ಎಸ್ಎನ್ ಅಸ್ತಿತ್ವಕ್ಕೆ ಬಂದಿದೆ. ಆದರೆ ಮೂಲ ಷೇರುದಾರರನ್ನು ಕೈಬಿಟ್ಟು ನಕಲಿ ಷೇರುದಾರರನ್ನ ಮತದಾರರ ಪಟ್ಟಿಗೆ ಸೇರಿಸಿ ಚುನಾವಣೆಯನ್ನು ಅಕ್ರಮವಾಗಿ ಗೆಲ್ಲಲು ಕಾಂಗ್ರೆಸ್ ನಾಯಕರು ಯತ್ನಿಸಿದ್ದಾರೆ ಎಂದು ಆರೋಪಿಸಿದರು.

ಮುಖ್ಯ ಪ್ರವರ್ತಕರ ಗಮನಕ್ಕೆ ಹಾಗೂ ಸದಸ್ಯರ ಗಮನಕ್ಕೆ ತರದೇ ಏಕಾಏಕಿ ಚುನಾವಣೆ ನಡೆಸಲು ಮುಂದಾಗಿದ್ದಾರೆ. ಚುನಾವಣಾಧಿಕಾರಿಗಳು ಆಡಳಿತ ಪಕ್ಷದ ಸದಸ್ಯರ ಒತ್ತಡಕ್ಕೆ ಒಳಗಾಗಿ ವಿರೋಧಪಕ್ಷದವರನ್ನು ಹೊರಗಿಟ್ಟು ಕಾನೂನು ನಿಯಮಗಳನ್ನ ಮೀರಿ ಚುನಾವಣೆಗೆ ಸಹಕಾರ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ರೀತಿಯ ಚುನಾವಣೆಗೆ ನಾವು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ. ಮತದಾರರ ಪಟ್ಟಿ ಸರಿಪಡಿಸಿ ನಂತರ ಚುನಾವಣೆ ನಡೆಸಲಿ. ಅಲ್ಲಿಯವರೆಗೂ ಚುನಾವಣೆ ಮುಂದೂಡಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಹರೀಶ್ ಗೌಡ ಹೇಳಿದರು.

ನಂತರ ಗಂಡ್ರಗೊಳಿಪುರದ ವಿಎಸ್ಎಸ್ಎನ್ ಮುಖ್ಯ ಪ್ರವರ್ತಕ ಗಂಗಾಧರಯ್ಯ ಮಾತನಾಡಿ, ಚುನಾವಣೆ ಘೋಷಣೆ ಬಗ್ಗೆ ಮುಖ್ಯ ಪ್ರವರ್ತಕನಾದ ನನ್ನ ಗಮನಕ್ಕೂ ಬಂದಿಲ್ಲ. ಜೊತೆಗೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದವರ ಗಮನಕ್ಕೆ ತರದೇ ಏಕಾಏಕಿ ಚುನಾವಣೆ ಘೋಷಣೆ ಮಾಡಲಾಗಿದೆ. ಆಶ್ಚರ್ಯವೆಂದರೆ ನನ್ನ ಹೆಸರನ್ನು ಮತದಾರ ಪಟ್ಟಿಯಿಂದ ಕೈ ಬಿಟ್ಟಿದ್ದಾರೆ ಎಂದು ಕಿಡಿಕಾರಿದರು.

ಮತದಾರ ಪಟ್ಟಿ ಸರಿಪಡಿಸಿ ಚುನಾವಣೆ ನಡೆಸಲಿ. ಅಲ್ಲಿಯವರೆಗೆ ಚುನಾವಣೆ ಮುಂದೂಡಬೇಕು ಇಲ್ಲವಾದಲ್ಲಿ ಕಾನೂನು ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದರು.

ಈ ವೇಳೆ ವಿಎಸ್ಎಸ್ಎನ್ ಸದಸ್ಯ ಗಂಗಾಧರಯ್ಯ ಸೇರಿದಂತೆ ಗಂಡ್ರಗೊಳಿಪುರ ವಿಎಸ್ಎಸ್ಎನ್  ಷೇರುದಾರರು ಸೇರಿದಂತೆ‌ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *