ಗಂಡು ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒತ್ತಾಯ: ಮಹಿಳೆಯರಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸುವಂತೆ ಮನವಿ

ದೊಡ್ಡಬಳ್ಳಾಪುರ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಪ್ರತಿ ವರ್ಷವೂ ಕೇವಲ ಹೆಣ್ಣು ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಈ ವರ್ಷ ಗಂಡು ನಾಯಿಗಳಿಗೂ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಬೇಕೆಂದು ನಗರಸಭಾ ಮಾಜಿ ಸದಸ್ಯೆ ಪ್ರಮೀಳಾ ಮಹದೇವ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಕಾರ್ತಿಕೇಶ್ವರ್ ನಿಮ್ಮ ಸಲಹೆ ಸ್ವೀಕರಿಸಿ ಗಂಡುನಾಯಿಗಳಿಗೂ ಆಪರೇಷನ್ ಮಾಡಲಾಗುವುದು ಎಂದರು.

ನಗರಸಭೆ ವತಿಯಿಂದ 2026-27ನೇ ಸಾಲಿನ ಆಯ-ವ್ಯಯ ಪೂರ್ವಭಾವಿ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ನಗರದ ಡಾ.ರಾಜ್ ಕುಮಾರ್ ಕಲಾ‌ ಮಂದಿರದಲ್ಲಿ ಬುಧವಾರ ಆಯೋಜನೆ ಮಾಡಲಾಗಿತ್ತು. ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ನಗರಸಭಾ ಮಾಜಿ ಸದಸ್ಯೆ ಪ್ರಮೀಳಾ ಮಹದೇವ್, ಮಹಿಳೆಯರಿಗೆ ಅವಕಾಶ ಸಿಗುವುದೇ ಕಡಿಮೆ, ನಗರಸಭೆಯಲ್ಲಿ ಈ ಬಾರಿ ಮಹಿಳೆಯರೆ ಅಧ್ಯಕ್ಷರಾಗಿದ್ದಾರೆ. ಮಹಿಳೆಯರಿಗೆ ಮುಂದೆ ಅವಕಾಶ ಸಿಗುವುದು ಇಲ್ಲವೋ ಹೀಗಾಗಿ ಮಹಿಳೆಯರಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸುವ ಮೂಲಕ ಹೊಸ ಮುನ್ನುಡಿಗೆ ನಾಂದಿಹಾಡಿ ಮಹಿಳೆಯರ ಪರವಾದ ಕಾರ್ಯಕ್ರಮಗಳನ್ನ ರೂಪಿಸುವಂತೆ ಒತ್ತಾಯಿಸಿದರು.

ಡಾ. ಶಿವರಾಜುಕುಮಾರ್ ಸಂಘದ ಮುಖಂಡ ರಮೇಶ್ ಮಾತನಾಡಿ, ದಿ.ಜಾಲಪ್ಪ ಕಾಲದಲ್ಲಿ ದೊಡ್ಡಬಳ್ಳಾಪುರ ಅಭಿವೃದ್ಧಿಯಾಗಿದ್ದು ಬಿಟ್ಟರೆ ಈವರೆಗೆ ಏನೇನೂ ಅಭಿವೃದ್ಧಿಯಾಗಿಲ್ಲ. ಹಳೆ ಮಾರುಕಟ್ಟೆಯನ್ನು ಧ್ವಂಸ ಮಾಡಿ 15 ವರ್ಷ ಕಳೆಯಿತು. ಈವರೆಗೆ ನೂತನ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಆರಂಭವಾಗಿಲ್ಲ. ಜನಪರವಾದ ತೀರ್ಮಾನಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪತ್ರಕರ್ತ ಶ್ರೀಕಾಂತ್ ಮಾತನಾಡಿ, ಕಳೆದ ಐದು ವರ್ಷಗಳಿಂದಲೂ ಬಜೆಟ್ ನಲ್ಲಿ ದೊಡ್ಡಬಳ್ಳಾಪುರ ಹಬ್ಬ, ಸಾಂಸ್ಕ್ರತಿಕ ಹಬ್ಬ, ನಗರಸಭೆ ಶತಮಾನೋತ್ಸವ, ನಗರದ ಜೂನಿಯರ್ ಕಾಲೇಜು ಶತಮಾನೋತ್ಸವ ಹಬ್ಬ ಮಾಡುತ್ತೇವೆ ಎಂದು ಹೇಳಲಾಗುತ್ತಿದೆ. ಈವರೆಗೆ ಮಾಡಲೇ ಇಲ್ಲ. ನಗರಸಭೆ ಮುಂಭಾಗ ಕೊಂಗಾಡಿಯಪ್ಪರ ಪ್ರತಿಮೆ ನಿರ್ಮಾಣ ಯೋಜನೆ ನೆನೆಗುದಿಗೆ ಬಿದ್ದಿದ್ದು ಶೀಘ್ರವಾಗಿ ಮುಗಿಸಬೇಕು ಎಂದರು.

ಉಳಿದಂತೆ ನಗರಸಭೆಗೆ ಆದಾಯದ ಮೂಲಗಳು ಬೇಕಾದಷ್ಟು ಇದೆ, ಅದನ್ನು ಹೇಗೆ ಪಡೆದುಕೊಳ್ಳುವುದು ಗೊತ್ತಿಲ್ಲ. ನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ. ಕಿರಿದಾದ ರಸ್ತೆಗಳ ಅಗಲೀಕರಣ ಸೇರಿದಂತೆ ಮೂಲಭೂತಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಬೇಕಿದೆ ಎಂದು ಆಗ್ರಹಿಸಿದರು.

ಈ ವೇಳೆ ನಗರಸಭೆ ಅಧ್ಯಕ್ಷೆ ಸುಮಿತ್ರಾ ಕೆ, ಉಪಾಧ್ಯಕ್ಷ ಮಲ್ಲೇಶ್, ಪೌರಾಯುಕ್ತ ಕಾರ್ತಿಕೇಶ್ವರ್, ಸದಸ್ಯರಾದ ತ.ನ ಪ್ರಭುದೇವ, ರವಿಕುಮಾರ್, ಶಿವು, ನವೀನ್, ಸುಧಾರಾಣಿ ಲಕ್ಷ್ಮಿನಾರಾಯಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!